ಸಾರಾಂಶ
ಇಂದು ಹೆಣ್ಣುಮಕ್ಕಳು ಅಕ್ಷರ ಕಲಿಯುತ್ತಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್ ಕಾರಣ. ಹೆಣ್ಣು ಮಕ್ಕಳ ಕಲಿಕೆಯನ್ನು ಕಾನೂನುಬದ್ಧವಾಗಿಸಿ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಜಾರಿಗೊಳಿಸಿದರು. ಬಸವಣ್ಣ, ಬುದ್ಧರಂತಹ ಮಹಾನ್ ಸಮಾಜ ಸುಧಾರಕರ ಬಗ್ಗೆಯೂ ಅರಿವು ಪಡೆಯಬೇಕು. ನಿರಂತರ ಕಲಿಕೆ ಮೂಲಕ ವಿದ್ಯಾರ್ಥಿಗಳು ಸಾಧಕರಾಗಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಂತಹ ಮೇಧಾವಿ ಜಗತ್ತಿನಲ್ಲಿ ಯಾರೂ ಇಲ್ಲ. ಇದು ವಿಶ್ವಸಂಸ್ಥೆ ಘೋಷಣೆ ಮಾಡಿರುವ ವಿಷಯ ಎಂದು ಎಸ್.ಡಿ ಜಯರಾಂ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಮಾದೇಶ್ ತಿಳಿಸಿದರು.ತಾಲೂಕಿನ ಗಾಮನಹಳ್ಳಿಯ ಜ್ಞಾನ ಭಾರತಿ ಪ್ರೌಢಶಾಲೆಯಲ್ಲಿ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಡಾ. ಬಿ. ಆರ್.ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಓದಿಕೊಳ್ಳಬೇಕು. ಬಾಲ್ಯದಲ್ಲಿ ಅವರು ಅನುಭವಿಸಿದ ಅಪಮಾನ, ಬಡತನ, ಇವನ್ನೆಲ್ಲ ಮೆಟ್ಟಿನಿಲ್ಲಬೇಕೆಂಬ ಛಲ ಅವರ ಸಾಧನೆಗೆ ಕಾರಣವಾಯಿತು ಎಂದರು.ಇಂದು ಹೆಣ್ಣುಮಕ್ಕಳು ಅಕ್ಷರ ಕಲಿಯುತ್ತಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್ ಕಾರಣ. ಹೆಣ್ಣು ಮಕ್ಕಳ ಕಲಿಕೆಯನ್ನು ಕಾನೂನುಬದ್ಧವಾಗಿಸಿ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಜಾರಿಗೊಳಿಸಿದರು. ಬಸವಣ್ಣ, ಬುದ್ಧರಂತಹ ಮಹಾನ್ ಸಮಾಜ ಸುಧಾರಕರ ಬಗ್ಗೆಯೂ ಅರಿವು ಪಡೆಯಬೇಕು. ನಿರಂತರ ಕಲಿಕೆ ಮೂಲಕ ವಿದ್ಯಾರ್ಥಿಗಳು ಸಾಧಕರಾಗಬೇಕು ಎಂದು ಹೇಳಿದರು.
ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಡಿ.ದೇವರಾಜ್ ಕೊಪ್ಪ ಮಾತನಾಡಿ, ಮಾನವ ಬಂಧುತ್ವ ವೇದಿಕೆ ಒಂದು ವೈಜ್ಞಾನಿಕ ಚಳವಳಿ. ಮಾನವರೆಲ್ಲ ಒಂದೇ, ಜಾತಿ, ಧರ್ಮ, ಕುಲ, ಮೇಲು ಕೀಳು ಎಂಬ ಭಾವನೆ ಈ ಚಳವಳಿಯಲ್ಲಿಲ್ಲ. ಮೌಢ್ಯವನ್ನು ದೂರ ತಳ್ಳಿ ವಿಜ್ಞಾನದ ಕಣ್ಣಲ್ಲಿ ಎಲ್ಲವನ್ನೂ ಕಾಣುವ ಸಂಘಟನೆ ಎಂದು ತಿಳಿಸಿದರು.ವೇದಿಕೆಯಲ್ಲಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಜಯಸುಧಾ, ಮದ್ದೂರು ತಾಲೂಕು ಸಂಚಾಲಕಿ ಸುಧಾ ಮಾತನಾಡಿದರು. ಶಾಲೆ ಮುಖ್ಯ ಶಿಕ್ಷಕ ಗಾಮನಹಳ್ಳಿ ಮಹದೇವಸ್ವಾಮಿ, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಕೊತ್ತತ್ತಿ ಮಹದೇವು, ಶಿಕ್ಷಕರಾದ ರಾಜೇಶ, ಜನಾರ್ಧನ, ಕಾಳಯ್ಯ, ಸುಮ, ಮಂಜುಳ, ರಾಜು ಉಪಸ್ಥಿತರಿದ್ದರು.