ಸಾರಾಂಶ
ಕಲಬುರಗಿ: ಒಂಬತ್ತು ತಿಂಗಳು ಹೊತ್ತು, ಹೆತ್ತ, ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹಾಗೂ ಪೋಷಿಸುವ ತಾಯಿಗೆ ಸಮಾನವಾದ ಮತ್ತೊಬ್ಬ ವ್ಯಕ್ತಿ ಜಗತ್ತಿನಲ್ಲಿ ಯಾರು ಇಲ್ಲ. ವರ್ಣಿಸಲು ಅಸಾಧ್ಯವಾದ, ಅನುಪಮ ವ್ಯಕ್ತಿ ತಾಯಿಯಾಗಿದ್ದಾಳೆ. ಇಡೀ ತನ್ನ ಜೀವನ ಸವೆಸಿ, ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದ ತಾಯಿಯನ್ನು ಪೂಜ್ಯನೀಯ ಸ್ಥಾನ ನೀಡಿ, ಆರೈಕೆ ಮಾಡಿ, ಗೌರವಿಸಬೇಕಾದದ್ದು ಅವಶ್ಯಕವಾಗಿದೆ ಎಂದು ಚಿಂತಕಿ ಚಂಪಾಕಲಾ ಬಿರಾದಾರ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ‘ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ‘ವಿಶ್ವ ತಾಯಂದಿರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ‘ತಾಯಿ’ ಎನ್ನುವುದು ಬರೀ ಹೆಣ್ಣನ್ನು ಕುರಿತು ಹೇಳುವುದಲ್ಲ. ಭೂಮಿ, ದೇಶ, ನದಿ, ಪರಿಸರಕ್ಕೆ ತಾಯಿಯ ಸ್ವರೂಪದ ಹೆಸರನ್ನಿಟ್ಟು ಕರೆಯುವುದು ಆಕೆಯ ಮಹತ್ವವನ್ನು ಸಾರುತ್ತದೆ. ತಾಯಿಯು ಪ್ರೀತಿ, ಕರುಣೆ, ಮಾನವೀಯತೆಯನ್ನು ಉಳಿಸಿ, ಬೆಳೆಸುವ ಮಹಾನ ವ್ಯಕ್ತಿಯಾಗಿದ್ದಾಳೆ. ಎಲ್ಲರನ್ನು ಒಂದೂಗೂಡಿಸುವ ಶಕ್ತಿ ಆಕೆಯಲ್ಲಿದೆ. ‘ತಾಯಿಯೇ ಮೊದಲು ಗುರು’ ಎಂಬ ಮಾತು ಮಕ್ಕಳನ್ನು, ಮಹಾನ ವ್ಯಕ್ತಿಯನ್ನಾಗಿಸುವಲ್ಲಿ ಆಕೆಯ ಔಚಿತ್ಯವನ್ನು ತೋರಿಸುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಅಮರ ಜಿ.ಬಂಗರಗಿ, ಶಿಕ್ಷಕಿ ನಿಂಗಮ್ಮ ಬಿರಾದಾರ, ಸಿಬ್ಬಂದಿ ತಾರಾಬಾಯಿ ದುದನಿ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಶಿಕ್ಷಕ ಮಹಾದೇವಪ್ಪ ಎಚ್.ಬಿರಾದಾರ ಪ್ರಮುಖರಾದ ಗೀತಾ ಬಿರಾದಾರ, ಲತಾ ಬಿರಾದಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.