ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರತಿಯೊಬ್ಬರ ಬದುಕಿನಲ್ಲೂ ಶಿಕ್ಷಣ ಎನ್ನುವುದು ಮುಖ್ಯವಾಗಿದ್ದು, ಶಿಕ್ಷಣ ಎಂಬುದು ಅಳತೆಗೆ ಸಿಗದ ಮಾನದಂಡವಾಗಿದೆ. ಶಿಕ್ಷಣಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ. ಎಲ್ಲರೂ ತಮ್ಮ ಸುತ್ತಮುತ್ತ ಅನಕ್ಷರಸ್ಥರಿದ್ದರೆ ಅವರನ್ನು ಅಕ್ಷರಸ್ಥರನ್ನಾಗಿಸಿ ಸಮಾಜದಲ್ಲಿ ಸತ್ಪ್ರಜೆಯಾಗುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ ಕುಮಾರ ತಿಳಿಸಿದರು.ಜಿಲ್ಲಾ ಕಾರಾಗೃಹದಲ್ಲಿ ನಡೆದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ್ಯ ಪೂರ್ವಕ್ಕೆ ಹೋಲಿಸಿದರೆ ಇಂದು ದೇಶದ ಸಾಕ್ಷರತೆಯ ಪ್ರಮಾಣ ಹೆಚ್ಚಿದೆ. ಆದರೂ ನಾವು ಶೇ.೧೦೦ ರಷ್ಟು ಸಾಕ್ಷರತೆ ಪ್ರಮಾಣ ಇರುವಂತೆ ನೋಡಿಕೊಳ್ಳಬೇಕು. ಸರ್ಕಾರದ ಯೋಜನೆ ಅಥವಾ ಸುತ್ತಮುತ್ತಲಿನ ವಿಷಯಗಳ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಲು ಓದು-ಬರಹ ಬಂದರೆ ಸುಲಭ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರಾಗೃಹ ಬಂಧಿಗಳನ್ನು ಕುರಿತು ಮಾತನಾಡಿದ ಅವರು, ನೀವಿಲ್ಲಿ ಉದ್ದೇಶಪೂರ್ವಕವಾಗಿ ಬಂದಿಲ್ಲ. ಯಾವುದೋ ಒಂದು ಸಂದರ್ಭ, ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದೆ ಕೋಪದ ಕೈಗೆ ಬುದ್ದಿ ಕೊಟ್ಟು ಇಲ್ಲಿ ಬಂಧಿಯಾಗಿದ್ದೀರಿ. ಎಲ್ಲೋ ಒಂದು ಕಡೆ ಜ್ಞಾನದ ಅರಿವಿಲ್ಲದೆ ತಪ್ಪನ್ನು ಎಸಗಿದ್ದೀರಿ. ಪ್ರತಿಯೊಬ್ಬ ಮನುಷ್ಯನು ಎಲ್ಲಾ ಪರಿಸ್ಥಿತಿಗಳನ್ನು ಬಹಳ ತಾಳ್ಮೆಯಿಂದ ನಿಭಾಯಿಸಿಕೊಂಡು ಹೋಗಲು ಜ್ಞಾನ ಅಥವಾ ಶಿಕ್ಷಣ ಅವಶ್ಯಕ ಎಂದು ನುಡಿದರು.ಕಾರಾಗೃಹಕ್ಕೆ ತಪ್ಪು ಮಾಡಿ ಬಂದಿರುವವರು ತಪ್ಪುಗಳನ್ನು ಪುನರಾವರ್ತನೆ ಮಾಡದೆ ಇಲ್ಲಿ ಉತ್ತಮ ಜ್ಞಾನವನ್ನು ಗಳಿಸಿ, ಇಲ್ಲಿಂದ ಹೊರಗಡೆ ಹೋಗುವ ಮುನ್ನ ಉತ್ತಮ ನಾಗರೀಕರಾಗಿ ಬದಲಾಗಬೇಕು. ಅನಕ್ಷರಸ್ಥರು ಅಕ್ಷರಾಭ್ಯಾಸ ಮಾಡಿ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ. ಧ್ಯಾನ, ವ್ಯಾಯಾಮ, ಯೋಗಾಭ್ಯಾಸ, ಪ್ರಾರ್ಥನೆಗಳನ್ನು ಮಾಡುವ ಮೂಲಕ ಕೋಪವನ್ನು ನಿಯಂತ್ರಣ ಮಾಡಬಹುದು ಎಂದು ಕಿವಿಮಾತು ಹೇಳಿದರು.
ಪ್ರತಿಯೊಬ್ಬರೂ ಒಳ್ಳೆಯ ಪುಸ್ತಕಗಳನ್ನು ಓದಿ, ಒಳ್ಳೆಯ ನಡತೆ, ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಮೌಲ್ಯಯುತ ವ್ಯಕ್ತಿಗಳಾಗಿ ಬದುಕಬೇಕು ಎಂದರು.ಹಿರಿಯ ಶ್ರೇಣಿ ನ್ಯಾಯಾಧೀಶ ಎಂ.ಆನಂದ್ ಮಾತನಾಡಿ, ವಿಶ್ವಸಂಸ್ಥೆ ಆಯೋಗವು ಪ್ರತಿ ವರ್ಷ ಸೆ.೮ ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಆಚರಿಸಬೇಕೆಂದು ತಿಳಿಸಿದೆ. ಇದರ ಪ್ರಮುಖ ಉದ್ದೇಶ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸುವುದಾಗಿದೆ. ಇಂದು ನಾವು ೫೮ ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸುತ್ತಿದ್ದೇವೆ. ಶಿಕ್ಷಣದ ಮೂಲಕ ಸಾಕ್ಷರತೆಯ ಧ್ಯೇಯವನ್ನು ಸಾಧಿಸಬಹುದು. ಸಮಾಜದಲ್ಲಿ ಒಳ್ಳೆಯ ರೀತಿ ಬದುಕಲು ಸಾಕ್ಷಾರತೆ ಬಹುಮುಖ್ಯವಾಗಿದ್ದು, ಸಾಕ್ಷಾರತೆಯಿಂದ ಮಾತ್ರ ಸಮಾಜದಲ್ಲಿನ ಅಜ್ಞಾನವನ್ನು ತೊಡೆದು ಹಾಕಬಹುದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಮೋಹನ್, ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಎಂ.ಬಾಬು, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಟಿ.ಲಕ್ಷ್ಮೀ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ ಪುರುಷೋತ್ತಮ್, ಅನನ್ಯ ಆರ್ಟ್ಸ್‌ನ ಮುಖ್ಯಸ್ಥೆ ಅನುಪಮಾ ಇತರರಿದ್ದರು.