ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮಹಾತ್ಮರ ಮೂರ್ತಿಗಳನ್ನು ಸ್ಥಾಪಿಸುವುದು ರಾಜಕೀಯ ಉದ್ದೇಶಕ್ಕಲ್ಲ, ಜನರನ್ನು ಖುಷಿಪಡಿಸಲೂ ಅಲ್ಲ. ಅವರ ಸಾಧನೆ ಹೋರಾಟ, ನಮ್ಮ ಮಕ್ಕಳಿಗೆ ಸ್ಫೂರ್ತಿಯಾಗಲಿ. ಈ ದೇಶದ ಸಂಸ್ಕೃತಿ ಉಳಿಯಲಿ ಎಂಬ ಕಾರಣಕ್ಕೆ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.ಸುಳೇಭಾವಿ ಗ್ರಾಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಸ್ವಂತ ಹಣದಿಂದ ಪ್ರತಿಷ್ಠಾಪಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ನೂತನ ಮೂರ್ತಿಯನ್ನು ಭಾನುವಾರ ಸಂಜೆ ಅನಾವರಣಗೊಳಿಸಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ಸಿಗಲಿ ಎಂಬುದೇ ನಮ್ಮ ಉದ್ದೇಶ. ಛತ್ರಪತಿ ಶಿವಾಜಿ, ಕಿತ್ತೂರು ಚನ್ನಮ್ಮ, ಜಗಜ್ಯೋತಿ ಬಸವೇಶ್ವರ, ಡಾ.ಅಂಬೇಡ್ಕರ್ ಅವರಂತಹ ಮಹಾತ್ಮರ ಜೀವನ ಆದರ್ಶವನ್ನು ನಮ್ಮ ಮಕ್ಕಳು ಮೈಗೂಡಿಸಿಕೊಳ್ಳಬೇಕು. ಅವರ ಜೀವನ ಚರಿತ್ರೆ ನಮ್ಮ ಮಕ್ಕಳಿಗೆ ಸ್ಫೂರ್ತಿ ತುಂಬಲಿ ಎನ್ನುವ ಕಾರಣಕ್ಕೆ ಅಂತವರ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.ಅಷ್ಟು ದೊಡ್ಡ ಅಪಘಾತವಾದರೂ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ನನ್ನನ್ನು ನಿಮ್ಮ ಸೇವೆ ಮಾಡಲು ಬದುಕಿಸಿದ್ದಾಳೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ. ಸಾಮಾಜಿಕ ಕಾಳಜಿ, ಬದ್ಧತೆ ಇಟ್ಟುಕೊಂಡು ಧರ್ಮದಿಂದ ಕೆಲಸ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ನನ್ನ ಜೀವನ ಕೇವಲ ಸಂಘರ್ಷ. ನಾನು ಯಾರಿಗೂ ಕೆಟ್ಟದ್ದು ಬಯಸಿಲ್ಲ, ಕೆಟ್ಟದ್ದು ಮಾಡಿಲ್ಲ. ನಾನು ರಾಜ್ಯಕ್ಕೆ ಮಂತ್ರಿ ಆಗಿದ್ದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮನೆ ಮಗಳಾಗಿ ಕೆಲಸ ಮಾಡುತ್ತಿದ್ದೇನೆ. ಇಡೀ ರಾಜ್ಯದಲ್ಲಿ ಈ ಕ್ಷೇತ್ರ ಗುರುತಿಸುವಂತೆ ಮಾಡಿದ್ದೇನೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಇದೊಂದು ಐತಿಹಾಸಿಕ ದಿನ, ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ದಿನ. ಸಮಸ್ತ ಗ್ರಾಮಸ್ಥರು ಶಿವಾಜಿ ಮೂರ್ತಿ ಸ್ಥಾಪನೆಗೆ ಸಹಕಾರ ನೀಡಿದ್ದಾರೆ. ಶಿವಾಜಿ ಮಹಾರಾಜರ ಶೌರ್ಯ, ಪರಾಕ್ರಮವು ವೈರಿಗಳ ಎದೆ ನಡುಗಿಸುವಂಥದ್ದು. ಪರಾಕ್ರಮ ಮೆರೆದು ಭಾರತ ದೇಶವನ್ನು ಸುರಕ್ಷಿತವಾಗಿ ಇಟ್ಟವರು. ಯುವಕರಲ್ಲಿ ಜಾಗೃತಿ ಮೂಡಿಸಲು, ತ್ಯಾಗ, ಶ್ರಮ ಜೀವಂತವಾಗಿ ಇಡಲು ಮಹಾನ್ ಪುರುಷರ ಮೂರ್ತಿ ಸ್ಥಾಪನೆ ಮಾಡುತ್ತಿದ್ದೇವೆ ಎಂದರು.ಶಿವಾಜಿ, ಬಸವಣ್ಣ, ರಾಯಣ್ಣ, ಚನ್ನಮ್ಮ, ವಾಲ್ಮೀಕಿ, ಅಂಬೇಡ್ಕರರ ಸ್ಮಾರಕಗಳನ್ನು ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯೋಣ ಎಂದ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರದು ದೊಡ್ಡ ಮನಸ್ಸು. ಸರ್ಕಾರದ ಅನುದಾನ ಹಾಕಲು ಅವಕಾಶವಿಲ್ಲದಿದ್ದರೂ ಇಲ್ಲಿನ ಜನರ ಜೊತೆಗಿನ ಸಂಬಂಧದಿಂದಾಗಿ ಸ್ವಂತ ಹಣ ಹಾಕಿ ಶಿವಾಜಿ ಪುತ್ಥಳಿ ಸ್ಥಾಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ಚನ್ನರಾಜ ಹೇಳಿದರು.
ಮುಖಂಡರಾದ ಬಸನಗೌಡ ಹುಂಕ್ರಿಪಾಟೀಲ, ನಾಗೇಶ ದೇಸಾಯಿ, ಶಂಕರಗೌಡ ಪಾಟೀಲ, ಬಸವರಾಜ ಮ್ಯಾಗೋಟಿ, ಮಾತನಾಡಿದರು. ವೇದಮೂರ್ತಿ ಶ್ರೀಶೈಲ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದೇವಣ್ಣ ಬಂಗೇನ್ನವರ, ಗ್ರಾಪಂ ಅಧ್ಯಕ್ಷೆ ಪಕೀರವ್ವ ಅಮರಾಪುರ, ನಿಲೇಶ ಚಂದಗಡಕರ, ಸುರೇಶ ಕಟಬುಗೋಳ, ಮಹೇಶ ಸುಗಣೆನ್ನವರ, ಸಂಭಾಜಿ ಯಮೋಜಿ, ವಿಠ್ಠಲ ಕಲಾದಗಿ, ಲಕ್ಷ್ಮಣ ಮಂಡು, ಶಿವಾಜಿ ಹುಂಕ್ರಿಪಾಟೀಲ, ಮಹೇಶ ಸುಗಣೆನ್ನವರ, ಜೀವನಪ್ಪ ಶಿಂಧೆ, ಅಶೋಕ ಯರಝರವಿ, ಯಮನಪ್ಪ ಕಲಾಬಾರ, ರುದ್ರಪ್ಪ ಅಮರಾಪುರ ಸೇರಿದಂತೆ ಇತರರು ಇದ್ದರು. ಭೈರೋಬಾ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಮ್ಯಾಗೋಟಿ ಸ್ವಾಗತಿಸಿದರು.ಹೆಬ್ಬಾಳ್ಕರ್‌ರಿಂದ ಅಭಿವೃದ್ಧಿ ಜತೆ ಸಮಾಜಮುಖಿ ಕಾರ್ಯ: ಜಾರಕಿಹೊಳಿಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಅಭಿವೃದ್ಧಿ ಜೊತೆಗೆ ಸಮಾಜಮುಖಿ ಕೆಲಸಗಳನ್ನೂ ಮಾಡುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಪ್ರಸಂಸಿಸಿದರು.
ಸುಳೇಭಾವಿ ಗ್ರಾಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ ಸ್ವಂತ ಹಣದಿಂದ ಪ್ರತಿಷ್ಠಾಪಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ನೂತನ ಮೂರ್ತಿ ಅನಾವರಣಗೊಳಿಸಿ ಅವರು ಮಾತನಾಡಿದರು.ಇದೊಂದು ಐತಿಹಾಸಿಕ ದಿನ. ಇಲ್ಲಿ ಶಿವಾಜಿ ಮಹಾರಾಜರ ಭವ್ಯ ಮೂರ್ತಿ ಆಗಬೇಕೆಂದು ಬಹಳ ವರ್ಷದ ಕನಸಿತ್ತು. ಅದನ್ನು ಹೆಬ್ಬಾಳ್ಕರ್ ಮತ್ತು ಹಟ್ಟಿಹೊಳಿ ನೆರವೇರಿಸಿದ್ದಾರೆ. ಸರ್ಕಾರದ ಹಣದಲ್ಲಿ ಇಂತಹ ಮೂರ್ತಿ ಸ್ಥಾಪಿಸಲು ಅವಕಾಶ ಕಡಿಮೆ. ಆದರೆ ಹೆಬ್ಬಾಳ್ಕರ್ ಸ್ವಂತ ಹಣದಿಂದ ನೆರವೇರಿಸಿದ್ದಾರೆ. ಅಭಿವೃದ್ಧಿ ಜೊತೆಗೆ ಸಮಾಜಮುಖಿ ಕೆಲಸವನ್ನೂ ಮಾಡುತ್ತಿದ್ದಾರೆ ಎಂದರು.
ನಮ್ಮ ಸರ್ಕಾರ ಜನಪರ ಕೆಲಸ ಮಾಡುತ್ತಿದ್ದು, ಗ್ಯಾರಂಟಿ ಯೋಜನೆಗಳು ಜನರ ಬದುಕು ಕಟ್ಟಲು ಸಹಕಾರಿಯಾಗಿವೆ. ಗೃಹಲಕ್ಷ್ಮೀ ಹಣವಂತೂ ಬಡವರ ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ವೆಚ್ಚ ಸೇರಿದಂತೆ ಅನೇಕ ಕೆಲಸಗಳಿಗೆ ಸಹಕಾರಿಯಾಗಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ನಮಗೆಲ್ಲರಿಗೂ ಆದರ್ಶ ಎಂದರು. ಛತ್ರಪತಿ ಶಿವಾಜಿ ಮಹಾರಾಜರ ತಂದೆ ಶಹಾಜಿ ಮಹಾರಾಜರ ಸಮಾಧಿ ಇರುವ ಚನ್ನಗಿರಿ ತಾಲೂಕಿನ ಹೊದಗೆರೆ ಗ್ರಾಮದಲ್ಲಿ ಭವ್ಯ ಸ್ಮಾರಕ ಮಾಡಲು ಲೋಕೋಪಯೋಗಿ ಇಲಾಖೆಯಿಂದ ₹5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕೆಲಸ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು.