ಚಿಕ್ಕಮಗಳೂರುರಾಜ್ಯದಲ್ಲಿ ವಿದ್ಯುತ್ ಪೂರೈಕೆಗೆ ಯಾವುದೇ ಕೊರತೆ ಇಲ್ಲ. ಲೋಡ್ ಶೆಡ್ಡಿಂಗ್ ಕೂಡ ಮಾಡಲಾಗುತ್ತಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
(ಕೆ.ಜೆ.ಜಾರ್ಜ್ ಪೋಟೋ ಕಡ್ಡಾಯವಾಗಿ ಬಳಸುವುದು)ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ರಾಜ್ಯದಲ್ಲಿ ವಿದ್ಯುತ್ ಪೂರೈಕೆಗೆ ಯಾವುದೇ ಕೊರತೆ ಇಲ್ಲ. ಲೋಡ್ ಶೆಡ್ಡಿಂಗ್ ಕೂಡ ಮಾಡಲಾಗುತ್ತಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.ಮೂಡಿಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಲ್ಲಿ ಇತ್ತೀಚೆಗೆ ಒಂದೆರಡು ದಿನ ಮಾತ್ರ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗಿತ್ತು. ಒಂದೇ ದಿನ ಸುಮಾರು 20 ಸಾವಿರ ಮೆಗಾವ್ಯಾಟ್ ವಿದ್ಯುತ್‌ಗೆ ಬೇಡಿಕೆ ಬಂದಿತ್ತು. ಅದೇ ಸಂದರ್ಭದಲ್ಲಿ ಗಾಳಿ ಇಲ್ಲದ ಕಾರಣ ಸುಮಾರು 3 ಸಾವಿರ ಮೆಗಾವ್ಯಾಟ್ ಉತ್ಪಾದನೆಯಾಗಬೇಕಿದ್ದ ಜಾಗದಲ್ಲಿ ಕೇವಲ 100 ಮೆಗಾವ್ಯಾಟ್ ಮಾತ್ರ ವಿದ್ಯುತ್ ಉತ್ಪಾದನೆಯಾಗಿತ್ತು. ಹೀಗಾಗಿ ರೈತರಿಗೆ ಪೂರೈಸುವ ವಿದ್ಯುತ್‌ನಲ್ಲಿ ಸುಮಾರು ಒಂದೂವರೆ ಗಂಟೆ ಮಾತ್ರ ಕಡಿತ ಮಾಡಲಾಗಿತ್ತು ಎಂದರು.ರಾಜ್ಯದಲ್ಲಿ ವಿದ್ಯುತ್ ಲಭ್ಯವಿದ್ದರೂ ಹಗಲಿನಲ್ಲಿ ಎಲ್ಲ ಭಾಗಗಳಿಗೂ ವಿದ್ಯುತ್ ಪೂರೈಸಲು ಮೂಲಸೌಕರ್ಯದ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯುತ್ ಮೂಲಸೌಕರ್ಯ ಬಲಪಡಿಸುವ ಕಾರ್ಯ ನಡೆಯುತ್ತಿದೆ. ಮುಂದಿನ 4 ವರ್ಷಗಳಲ್ಲಿ 400 ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ವಿದ್ಯುತ್ ಮಾರ್ಗಗಳನ್ನು ಸಹ ಸದೃಢಗೊಳಿಸಲಾಗುತ್ತಿದೆ. ರಾಜ್ಯದಲ್ಲಿ 16 ಲಕ್ಷ ಕಿ.ಮೀ. ವಿದ್ಯುತ್ ಮಾರ್ಗ ಹಾಗೂ 12 ಲಕ್ಷ ಟ್ರಾನ್ಸ್‌ಫಾರ್ಮರ್‌ಗಳಿವೆ ಎಂದು ವಿವರಿಸಿದರು.ಹೋಬಳಿ ಮಟ್ಟದಲ್ಲೂ ಪ್ರಜಾಸೇವಾ ಆಂದೋಲನ:ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರಜಾಸೇವಾ ಆಂದೋಲನ ನಡೆಯುತ್ತಿದೆ. ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಸಚಿವರ ಅಧ್ಯಕ್ಷತೆಯಲ್ಲಿ, ಎರಡನೇ ಹಾಗೂ ನಾಲ್ಕನೇ ಶನಿವಾರ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದು ಕೊನೆ ಕಾರ್ಯಕ್ರಮವಲ್ಲ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲೂ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.ಮಾರ್ಗಸೂಚಿಯಂತೆ ಬರ ಘೋಷಣೆ:ಮೂಡಿಗೆರೆ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿರುವ ಕುರಿತು ಪ್ರತಿಕ್ರಿಯಿಸಿದ ಅವರು ಕೇಂದ್ರ ಸರ್ಕಾರದ ಮಾರ್ಗ ಸೂಚಿಯ ಆಧಾರದ ಮೇಲೆಯೇ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುತ್ತದೆ. ಮಾರ್ಗಸೂಚಿ ಮೀರಿ ಬರ ಘೋಷಣೆ ಮಾಡಿದರೆ ಕೇಂದ್ರ ಸರ್ಕಾರದಿಂದ ಬರ ಪರಿಹಾರ ದೊರೆಯುವುದಿಲ್ಲ ಎಂದು ಹೇಳಿದರು.ಎಸ್‌ಐಆರ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿದ ಜಾರ್ಜ್, ಪ್ರಜಾಪ್ರಭುತ್ವ ಉಳಿಯಬೇಕೆಂಬ ಉದ್ದೇಶದಿಂದ ಹೋರಾಟ ನಡೆಸಲಾಗುತ್ತಿದೆ. ಇದನ್ನು ರಾಜಕೀಯ ದುರುದ್ದೇಶದಿಂದ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅನುದಾನದ ಲಭ್ಯತೆ ಇಲ್ಲದಿದ್ದರೂ ಹಲವು ಯೋಜನೆಗಳನ್ನು ಘೋಷಿಸಿ ಹೋಗಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಅನುದಾನದ ಲಭ್ಯತೆ ಖಚಿತಪಡಿಸಿಕೊಂಡ ಬಳಿಕವೇ ಯೋಜನೆ ಗಳನ್ನು ಘೋಷಿಸುತ್ತಿದೆ ಎಂದು ಹೇಳಿದರು.