ಕನ್ನಡಪ್ರಭ ವಾರ್ತೆ ದಾವಣಗೆರೆ
ಅಡುಗೆ ಅನಿಲ ಹಾಗೂ ಡೀಸೆಲ್ ಕೊರತೆಯಾಗುತ್ತದೆಂದು ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ವದಂತಿ ಹರಡಿದ್ದು, ನಮ್ಮ ಜಿಲ್ಲೆಗೆ ಅಗತ್ಯವಿರುವಷ್ಟು ಗ್ಯಾಸ್ ಸಿಲಿಂಡರ್ (ಎಲ್‌ಪಿಜಿ) ಲಭ್ಯವಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾಸ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ನಮ್ಮ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಾರ್ವಜನಿಕರು ಅನಗತ್ಯವಾಗಿ ಸಿಲಿಂಡರ್ ಬುಕ್ ಮಾಡಬಾರದು ಎಂದರು.
ಪ್ರತಿದಿನ 9427 ಎಲ್‌ಪಿಜಿಗಳು ಜಿಲ್ಲೆಯಲ್ಲಿ ವಿತರಣೆಯಾಗುತ್ತಿವೆ. ವಾರಕ್ಕೆ ಮೊದಲು ಬುಕ್ಕಿಂಗ್ ಸಂಖ್ಯೆ ಸಾಮಾನ್ಯವಾಗಿದ್ದರೂ, ವದಂತಿಗಳ ನಂತರ ಇದು ಐದು ಪಟ್ಟು ಹೆಚ್ಚಾಗಿ, 46,335ಕ್ಕೆ ಏರಿಕೆಯಾಗಿದೆ. ಇದು ಕೇವಲ ಜನರ ಆತಂಕದಿಂದ ಉಂಟಾಗಿರುವ ಸಮಸ್ಯೆಯೇ ಹೊರತು, ಇದು ಗ್ಯಾಸ್ ಕೊರತೆಯಿಂದ ಆಗಿದ್ದಲ್ಲ ಎಂದು ಸ್ಪಷ್ಟಪಡಿಸಿದರು.ಇನ್ನು ನಾಲ್ಕೈದು ದಿನಗಳಲ್ಲಿ ಎಲ್ಲಾ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್‌ಗಳನ್ನು ಪೂರೈಸಲಾಗುವುದು. ಗ್ಯಾಸ್ ಏಜೆನ್ಸಿಗಳ ಮುಂದೆ ಅನಗತ್ಯವಾಗಿ ಸಾಲುಗಟ್ಟು ನಿಲ್ಲುವ ಅವಶ್ಯಕತೆ ಇಲ್ಲ. ಒಂದು ವೇಳೆ ಯಾರಾದರೂ ಗ್ಯಾಸ್ ಏಜೆನ್ಸಿಗಳ ಮುಂದೆ ಸರದಿ ಸಾಲು ನಿಂತು, ಜನರಲ್ಲಿ ಆತಂಕ ಸೃಷ್ಟಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುಳ್ಳು ಸುದ್ದಿ ಹಬ್ಬಿಸುವುದನ್ನು ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಎಲ್‌ಪಿಜಿ ಬುಕ್ಕಿಂಗ್ ಮಾಡಿದ 6 ದಿನದೊಳಗೆ ಸಿಲಿಂಡರ್ ಪೂರೈಕೆಯಾಗಲಿದೆ. ವಾಣಿಜ್ಯ ಸಿಲಿಂಜರ್ ಮೇಲಿದ್ದ ನಿರ್ಬಂಧವನ್ನೂ ಸರ್ಕಾರ ತೆಗೆದು ಹಾಕಿದ್ದು, ವಾಣಿಜ್ಯ ಸಿಲಿಂಡರ್ ಸಹ ಸುಲಭವಾಗಿ ಲಭ್ಯವಿದೆ. ಸರ್ಕಾರವು ಸಿಲಿಂಡರ್ ಬುಕ್ಕಿಂಗ್‌ಗೆ ಸಂಬಂಧಿಸಿದಂತೆ ಕೆಲ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. 14.2 ಕೆಜಿ ಗೃಹ ಬಳಕೆ ಸಿಲಿಂಡರ್ ಹೊಂದಿರುವ ಗ್ರಾಹಕರು 25 ದಿನಕ್ಕೊಮ್ಮೆ ಬುಕ್ ಮಾಡಬಹುದು. 2 ಸಿಲಿಂಡರ್ ಹೊಂದಿರುವವರು 35 ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ ಎಂದರು.
ಐದು ಕೆಜಿ ಗೃಹ ಬಳಕೆ ಸಿಲಿಂಗಡ್ ಹೊಂದಿರುವ ನಗರ ಪ್ರದೇಶದ ವಾಸಿಗಳು 9 ದಿನಕ್ಕೊಮ್ಮೆ ಹಾಗೂ ಗ್ರಾಮೀಣ ಪ್ರದೇಶದವರು 16 ದಿನಕ್ಕೊಮ್ಮೆ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಿದೆ. 10 ಕೆಜಿ ಕಂಪೋಸಿಟ್ ಸಿಲಿಂಡರ್ ಹೊಂದಿರುವ ನಗರ ಪ್ರದೇಶದ ಜನರು 18 ದಿನಕ್ಕೆ ಹಾಗೂ ಗ್ರಾಮೀಣ ಭಾಗದವರು 32 ದಿನಕ್ಕೊಮ್ಮೆ ಬುಕ್ ಮಾಡಬಹುದು. ಗ್ಯಾಸ್ ಸಿಲಿಂಡರ್ ಬಗ್ಗೆ ಯಾವುದೇ ಭಯ, ಆತಂಕವೂ ಬೇಡ ಎಂದರು.
ದಾವಣಗೆರೆ ಜಿಲ್ಲೆಯ 220ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ದಾಸ್ತಾನು ಪೂರಕವಾಗಿದ್ದು, ಯಾವುದೇ ವದಂತಿಗಳಿಗೆ ಕಿವಿಗೊಟ್ಟು, ಜನರು ಪೆಟ್ರೋಲ್ ಬಂಕ್‌ಗಳ ಮುಂದೆ ಸಾಲುಗ್ಟಿ ನಿಲ್ಲಬೇಕಾಗಿಲ್ಲ. ಇಂಧನ ಖಾಲಿಯಾಗುವ ಯಾವುದೇ ಭೀತಿಯೂ ಇಲ್ಲ. ಇನ್ನೂ 5 ತಿಂಗಳಿಗಾಗುವಷ್ಟು ಇಂಧನ ದಾಸ್ತಾನು ನಮ್ಮಲ್ಲಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಟ ಡಾ.ಎಚ್.ಟಿ.ಶೇಖರ, ಜಿಪಂ ಸಿಇಓ ಗಿತ್ತೆ ಮಾಧಲ ವಿಠ್ಠಲರಾವ್, ಆಹಾರ ಮತ್ತು ನಾಗರೀಕ ಸರಬರಾಜು ಜಂಟಿ ನಿರ್ದೇಶಕ ಮಧುಸೂಧನ್, ಇಂಧನ ಪೂರೈಕೆ ಕಂಪನಿಗಳ ನೋಡೆಲ್ ಅಧಿಕಾರಿಗಳು ಇತರರು ಇದ್ದರು.
ಸುಳ್ಳು ಸುದ್ದಿ ಹರಡುವವರ ವಿರುದ್ಧ ಎಫ್ಐಆರ್ಸಮಾಜದಲ್ಲಿ ಅಶಾಂತಿ ಮತ್ತು ಅಭದ್ರತೆ ಮೂಡಿಸಲು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ತೀವ್ರ ನಿಗಾ ವಹಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಎಫ್ಐಆರ್ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಎಚ್ಚರಿಸಿದರು.
ಪ್ರತಿಯೊಂದು ಪೋಸ್ಟ್ ಮೇಲೂ ನಮ್ಮ ಸೋಷಿಯಲ್ ಮೀಡಿಯಾ ವಿಂಗ್ ಕಣ್ಣಿಟ್ಟಿದ್ದು, ದೇಶಾದ್ಯಂತ ಇಂದೇ ತೈಲ ಆಮದು ನಿಂತರೂ ಮುಂದಿನ 4-5 ತಿಂಗಳವರೆಗೆ ಇಂಧನ ಪೂರೈಕೆಯಲ್ಲಿ ತೊಂದರೆಯಾಗುವುದಿಲ್ಲ ಎಂದರು.ಕೇಂದ್ರ, ರಾಜ್ಯ ಸರ್ಕಾರಗಳು, ಪ್ರಧಾನ ಮಂತ್ರಿಗಳೂ ಈ ಬಗ್ಗೆ ಭರವಸೆ ನೀಡಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯಾನ್ ಅಥವಾ ಟ್ಯಾಂಕ್‌ಗಳ ಮೂಲಕ ಅನಗತ್ಯವಾಗಿ ಇಂಧನ ಮಾರಾಟ ಮಾಡದಂತೆ ನಿರ್ದೇಶನ ನೀಡಲಾಗಿದೆ. ಜನರು ಆತಂಕದಿಂದ ಇಂಧನ ತುಂಬಿಸಿಕೊಳ್ಳುವ ಅಗತ್ಯವಿಲ್ಲ. ಅಂತಹ ಪರಿಸ್ಥಿತಿಯೂ ಬಂದಿಲ್ಲ ಎಂದು ಹೇಳಿದರು.