ಸಾರಾಂಶ
ಅನಾವಶ್ಯಕವಾಗಿ ಆರ್ಥಿಕ ಹೊರೆ ಮಾಡಬಾರದೆಂಬ ಕಾರಣಕ್ಕಾಗಿ ಹೋಬಳಿ ಕೇಂದ್ರಗಳನ್ನು ಹೊಸದಾಗಿ ಮಾಡದಿರಲು ಸರ್ಕಾರ ನಿರ್ಧರಿಸಿದೆ.
ಜನಸ್ಪಂದನಾ ಕಾರ್ಯಕ್ರಮದಲ್ಲಿ ಶಾಸಕ
ಕನ್ನಡಪ್ರಭ ವಾರ್ತೆ ಕೊಟ್ಟೂರುರಾಜ್ಯದಲ್ಲಿ ಸರ್ಕಾರ ಸದ್ಯಕ್ಕೆ ಯಾವುದೇ ಹೊಸ ಹೋಬಳಿಗಳ ರಚನೆ ಕಾರ್ಯವನ್ನು ಕೈಗೊಂಡಿಲ್ಲ. ಕಂದಾಯ ಇಲಾಖೆಯ ಬಹುತೇಕ ಸೇವೆಗಳನ್ನು ಆನ್‌ಲೈನ್ ಮೂಲಕ ಕಲ್ಪಿಸಿಕೊಡುತ್ತಿರುವ ಕಾರಣಕ್ಕಾಗಿ ಗ್ರಾಮೀಣ ಪ್ರದೇಶಗಳ ಜನರ ಅಲೆದಾಟ ಕೊಂಚ ನಿಲುಗಡೆಯಾಗಿದ್ದು, ಅನಾವಶ್ಯಕವಾಗಿ ಆರ್ಥಿಕ ಹೊರೆ ಮಾಡಬಾರದೆಂಬ ಕಾರಣಕ್ಕಾಗಿ ಹೋಬಳಿ ಕೇಂದ್ರಗಳನ್ನು ಹೊಸದಾಗಿ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ ಹೇಳಿದರು.ತಾಲೂಕಿನ ಉಜ್ಜಯಿನಿ ಗ್ರಾಮದ ಶ್ರೀ ಮರುಳಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕೊಟ್ಟೂರು ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.ಕೊಟ್ಟೂರು ತಾಲೂಕು ರಚನೆ ನಂತರ ಉಜ್ಜಯಿನಿ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸುವ ಕುರಿತು ಜನತೆಯ ಆಶಯದಂತೆ ಕಂದಾಯ ಇಲಾಖೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ರಾಜ್ಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹೋಬಳಿ ಕೇಂದ್ರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಕೆಯಾಗಿವೆ. ಮುಂದಿನ ದಿನಗಳಲ್ಲಿ ಹೋಬಳಿ ಕೇಂದ್ರ ಸ್ಥಾಪನೆಗೆ ಸರ್ಕಾರ ಮುಂದಾದರೆ ಮೊದಲ ಪಟ್ಟಿಯಲ್ಲಿ ಉಜ್ಜಯಿನಿ ಸೇರ್ಪಡೆಗೊಳ್ಳುವಂತೆ ಮಾಡುವ ಜವಾಬ್ದಾರಿ ನನ್ನದು ಎಂದು ಹೇಳಿದರು.ಗ್ರಾಮೀಣ ಭಾಗದ ಜನರು ತಮ್ಮ ಸಣ್ಣ ಪುಟ್ಟ ಕೆಲಸಕ್ಕೂ ನಿತ್ಯವೂ ಕಚೇರಿಗಳಿಗೆ ಅಲೆದಾಡಿಸದೇ, ಕೂಡಲೇ ಸೂಕ್ತವಾಗಿ ಸ್ಪಂದಿಸಿ ಅವರ ಕೆಲಸಗಳನ್ನು ತಕ್ಷಣದಲ್ಲಿ ಮಾಡಿಕೊಡಬೇಕು ಎಂದು ಎಲ್ಲ ಇಲಾಖೆ ಅಧಿಕಾರಿಗಳಿಗೆ ಶಾಸಕರು ಹೇಳಿದರು.ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಅತೀ ಹೆಚ್ಚು ಮನವಿ ಸಲ್ಲಿಕೆಯಾದವು. ಉಜ್ಜಯಿನಿ ಭಾಗದಲ್ಲಿ ದಿನಕ್ಕೆ ನೂರು ಬಾರಿ ವಿದ್ಯುತ್ ಕಡಿತವಾಗುತ್ತದೆ. ಇದರಿಂದ ಹೊಲಗಳಲ್ಲಿ ಬೆಳೆಗಳಿಗೆ ನೀರು ಹಾಯಿಸುವುದು ದುಸ್ತರವಾಗಿದೆ ಎಂದು ಗ್ರಾಪಂ ಸದಸ್ಯರೊಬ್ಬರು ದೂರಿದರು. ಜೆಸ್ಕಾಂನ ಕೊಟ್ಟೂರು ಉಪ ವಿಭಾಗದ ಎಇಇ ನಾಗರಾಜರನ್ನು ಕರೆದ ಶಾಸಕರು, ಸಮರ್ಪಕ ವಿದ್ಯುತ್ ಸರಬರಾಜಿಗೆ ಆಗಿರುವ ತೊಂದರೆ ಕುರಿತು ಮಾಹಿತಿ ಪಡೆದು, ಯಾವ ಭಾಗದಲ್ಲಿ ಟಿಸಿ ಅಳವಡಿಕೆ ಅವಶ್ಯವಿದೆಯೋ ತಕ್ಷಣ ಕಾರ್ಯ ನಿರ್ವಹಿಸಿ ಎಂದು ಸೂಚಿಸಿದರು.ವೇದಿಕೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಹರಪನಹಳ್ಳಿ ಉಪ ವಿಭಾಗದ ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ, ಕೊಟ್ಟೂರು ತಹಸೀಲ್ದಾರ ಜಿ.ಕೆ. ಅಮರೇಶ, ಕೂಡ್ಲಿಗಿ ತಹಸೀಲ್ದಾರ ವಿ.ಕೆ. ನೇತ್ರಾವತಿ, ತಾಪಂ ಇಒ ಡಾ. ಆನಂದಕುಮಾರ್, ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ, ಉಜ್ಜಯಿನಿ ಗ್ರಾಪಂ ಅಧ್ಯಕ್ಷ ಚೌಡಪ್ಪ ಹಾಗೂ ಅನೇಕ ಮುಖಂಡರು ಇದ್ದರು.ಇದೇ ಸಂದರ್ಭ ತಾಲೂಕಿನ ಅನೇಕ ವಿಧವೆಯರಿಗೆ ಶಾಸಕರು, ಜಿಲ್ಲಾಧಿಕಾರಿ ವಿಧವಾ ವೇತನ ಮಂಜೂರಾತಿ ಪತ್ರ ವಿತರಣೆ ಮಾಡಿದರು.ಸಿ.ಮ. ಗುರುಬಸವರಾಜ ಕಾರ್ಯಕ್ರಮ ನಿರೂಪಿಸಿದರು.