ಕನ್ನಡಪ್ರಭ ವಾರ್ತೆ ಮದ್ದೂರು
ಮದ್ದೂರು ಪುರಸಭೆಯನ್ನು ಕಾನೂನುಬದ್ಧವಾಗಿ, ನಿಯಮಾನುಸಾರ ನಗರಸಭೆಯನ್ನಾಗಿ ಪರಿವರ್ತಿಸಿ ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿರುವುದರಿಂದ ಅದನ್ನು ರದ್ದುಗೊಳಿಸಿ ಮತ್ತೆ ಯಥಾಸ್ಥಿತಿಯನ್ನು ಮುಂದುವರೆಸುವ ಪ್ರಶ್ನೆಯೇ ಇಲ್ಲ ಎಂದು ಪೌರಾಡಳಿತ ಸಚಿವ ರಹೀಂಖಾನ್ ಸ್ಪಷ್ಟಪಡಿಸಿದ್ದಾರೆ.ವಿಧಾನ ಸಭೆಯಲ್ಲಿ ಜೆಡಿಎಸ್ ಶಾಸಕ ಎಚ್.ಟಿ.ಮಂಜು ಅವರ ಪ್ರಶ್ನೆಗೆ ಉತ್ತರಿಸಿ, ಪ್ರಸ್ತುತ ರಾಜ್ಯದಲ್ಲಿ ಹೊಸ ನಗರ ಸ್ಥಳೀಯ ಸಂಸ್ಥೆಗಳನ್ನು ರಚಿಸುವ ಮತ್ತು ಗಡಿಗಳನ್ನು ಮಾರ್ಪಡಿಸುವ ಕಾಲಾವಕಾಶ ಮುಕ್ತಾಯಗೊಂಡಿರುತ್ತದೆ. ಆದ್ದರಿಂದ ಈ ಹಂತದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಗಡಿಗಳನ್ನು ಮಾರ್ಪಡಿಸಲು ಅಥವಾ ಕೆಲವು ಪ್ರದೇಶಗಳನ್ನು ಸೇರಿಸುವುದಕ್ಕೆ, ಕೈಬಿಡುವುದಕ್ಕೆ ಅವಕಾಶವಿರುವುದಿಲ್ಲವೆಂದು ತಿಳಿಸಿದ್ದಾರೆ.
ಒಂದು ನಗರಸಭೆಯನ್ನು ರಚಿಸಲು ಕರ್ನಾಟಕ ಪುರಸಭೆಗಳ ಅಧಿನಿಯಮ ೧೯೬೪ರ ಸೆಕ್ಷನ್-೩ರಲ್ಲಿ ತಿಳಿಸಿರುವ ಮಾನದಂಡಗಳನ್ವಯ ೨೦೧೧ರ ಜನಗಣತಿಯಂತೆ ಆ ಒಟ್ಟಾರೆ ಪ್ರದೇಶದ ಜನಸಂಖ್ಯೆ ೫೦ ಸಾವಿರ ದಿಂದ ೩ ಲಕ್ಷ ಇದ್ದು, ಪ್ರತಿ ಚದರ ಕಿ.ಮೀ. ಪ್ರದೇಶಕ್ಕೆ ೧೫೦೦ ಜನಸಾಂದ್ರತೆ, ಅಂತಹ ಪ್ರದೇಶದಲ್ಲಿ ಶೇ.೫೦ಕ್ಕಿಂತ ಹೆಚ್ಚು ಕೃಷಿಯೇತರ ಚಟುವಟಿಕೆಗಳು ಮತ್ತು ಅಲ್ಲಿನ ವಾರ್ಷಿಕ ಆದಾಯ ನಿಕಟಪೂರ್ವ ಜನಗಣತಿಯನ್ವಯ ೯ ಲಕ್ಷ ಇಲ್ಲವೇ ತಲಾ ಆದಾಯ ೪೫ ರು. ಇರಬೇಕಾಗುತ್ತದೆ ಎಂದಿದ್ದಾರೆ.ಮದ್ದೂರು ಪುರಸಭೆಯೊಂದಿಗೆ ಚಾಮನಹಳ್ಳಿ ಗ್ರಾಮ ಪಂಚಾಯ್ತಿಯ ಚಾಮನಹಳ್ಳಿ, ದೇಶಹಳ್ಳಿ, ಸೋಮನಹಳ್ಳಿ ಗ್ರಾಪಂನ ರುದ್ರಾಕ್ಷಿಪುರ, ಸೋಮನಹಳ್ಳಿ, ಕೆ.ಕೋಡಿಹಳ್ಳಿ, ಅಗರಲಿಂಗನದೊಡ್ಡಿ, ಗೆಜ್ಜಲಗೆರೆ ಗ್ರಾಪಂನ ಗೆಜ್ಜಲಗೆರೆ, ಗೊರವನಹಳ್ಳಿ ಗ್ರಾಪಂನ ಗೊರವನಹಳ್ಳಿ ಗ್ರಾಮಗಳನ್ನು ಸೇರ್ಪಡೆಗೊಳಿಸಿ ನಗರಸಭೆಯನ್ನು ರಚಿಸಲಾಗಿದೆ. ಈ ಗ್ರಾಮಗಳಲ್ಲಿ ೨೦೧೧ರ ಜನಗಣತಿಯನ್ವಯ ಒಟ್ಟು ೫೪,೪೯೧ ಜನಸಂಖ್ಯೆ ಇದೆ. ಒಟ್ಟಾರೆ ಪ್ರದೇಶ ೩೫.೫೮ ಚದರ ಕಿ.ಮೀ. ಇದೆ. ಪ್ರತಿ ಚದರ ಕಿ.ಮೀ.ಗೆ ಜನಸಾಂದ್ರತೆ ೧,೫೩೧ ಇರುತ್ತದೆ. ಈ ಎಲ್ಲಾ ಪ್ರದೇಶದಲ್ಲಿ ಶೇ.೫೫ರಷ್ಟು ಕೃಷಿಯೇತರ ಚಟುವಟಿಕೆಗಳಿದ್ದು, ರಾಜಸ್ವ ವಾರ್ಷಿಕ ೪ ಕೋಟಿ ರು.ಗಳಿಗಿಂತ ಹೆಚ್ಚಿರುತ್ತದೆ. ಈ ರೀತಿಯಾಗಿ ಒಟ್ಟಾರೆ ಪ್ರದೇಶವು ನಿಯಮಾನುಸಾರ ಮಾನದಂಡವನ್ನು ಪೂರೈಸುತ್ತಿರುವುದನ್ನು ಪರಿಗಣಿಸಿ ಆಡಳಿತಾತ್ಮಕ ಮತ್ತು ಪ್ರಗತಿಪರ ಹಿತದೃಷ್ಟಿಯಿಂದ ನಗರಸಭೆಯನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
ಈ ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ ಮೊದಲು ಇದ್ದಂತೆಯೇ ನಿಯಮಾನುಸಾರ ಮೂಲಸೌಲಭ್ಯಗಳನ್ನು ಮುಂದುವರೆಸಲಾಗಿದೆ. ಅಲ್ಲಿನ ನಾಗರಿಕರು ಕೃಷಿ, ಹೈನುಗಾರಿಕೆ ಮತ್ತಿತರ ಯಾವುದೇ ಉದ್ಯೋಗಗಳನ್ನು ಕೈಗೊಳ್ಳುವುದಕ್ಕೆ ನಿರ್ಬಂಧ ವಿಧಿಸಿರುವುದಿಲ್ಲ ಎಂದು ತಿಳಿಸಿದ್ದಾರೆ.
ನಗರಸಭೆ ರಚನೆ ಸಮಯದಲ್ಲಿ ಚಾಮನಹಳ್ಳಿ, ಸೋಮನಹಳ್ಳಿ, ಗೆಜ್ಜಲಗೆರೆ, ಗೊರವನಹಳ್ಳಿ ಗ್ರಾಪಂ ಆಡಳಿತ ಮಂಡಳಿಗಳು ಸಭೆಯನ್ನು ನಡೆಸಿ ಸರ್ವಾನುಮತದಿಂದ ಸಹಮತಿ ಸೂಚಿಸಿದ ನಂತರವೇ ಈ ಗ್ರಾಮಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಪರಿಗಣಿಸಲಾಗಿದೆ. ಹಾಗಾಗಿ ಇಲ್ಲಿ ಯಾವುದೇ ಅವೈಜ್ಞಾನಿಕ ಕ್ರಮದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಗ್ರಾಮ ಪಂಚಾಯಿತಿಗಳಿಂದ ದಾಖಲೆಗಳನ್ನು ಹಸ್ತಾಂತರಿಸಿದ ನಂತರ ಸಾರ್ವಜನಿಕರಿಗೆ ಸೇವೆಗಳನ್ನು ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುತ್ತಿದೆ ಎಂದಿದ್ದಾರೆ.
ಗೆಜ್ಜಲಗೆರೆ ಮತ್ತು ಗೊರವನಹಳ್ಳಿ ಪಂಚಾಯ್ತಿಗಳಲ್ಲಿ ಹಲವು ಗ್ರಾಮಗಳು ಕಂದಾಯ ಗ್ರಾಮಗಳೆಂದು ಘೋಷಣೆಯಾಗಿ, ದಾಖಲೆಗಳಿಲ್ಲದ ಗ್ರಾಮಗಳನ್ನು ದಾಖಲೆ ಗ್ರಾಮಗಳನ್ನಾಗಿ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹಾಲಿ ವಾಸವಿರುವವರಿಗೆ ಹಕ್ಕುಪತ್ರ ನೀಡಬೇಕಾದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಗ್ರಾಮಗಳನ್ನು ನಗರಸಭೆಗೆ ಸೇರಿಸುವುದರಿಂದ ಅಲ್ಲಿನ ಜನರಿಗೆ ಹಕ್ಕುಪತ್ರ ನೀಡಲು ಯಾವುದೇ ತೊಂದರೆಯಾಗುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮ ೧೯೬೪ರ ಸೆಕ್ಷನ್ ೯೪-ಸಿರಡಿ ಹಕ್ಕುಪತ್ರ ನೀಡಲಾಗುತ್ತಿದ್ದು, ನಗರಪ್ರದೇಶಗಳಲ್ಲಿ ಸೆಕ್ಷನ್ ೯೪ ಸಿಸಿ ಅಡಿ ಹಕ್ಕುಪತ್ರಗಳನ್ನು ನೀಡಲು ಅವಕಾಶವಿರುತ್ತದೆ. ಆದ್ದರಿಂದ ಹಕ್ಕುಪತ್ರಗಳನ್ನು ನೀಡಲು ಯಾವುದೇ ತೊಂದರೆಯಾಗುವುದಿಲ್ಲವೆಂದು ತಿಳಿಸಿದ್ದಾರೆ.