ಸಾರಾಂಶ
-ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆ । ರಾಜ್ಯದಲ್ಲಿ ಪ್ರತಿದಿನ 18 ರಿಂದ 19 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ
---ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಮಗೆ ಎಷ್ಟು ವಿದ್ಯುತ್ ಬೇಕೋ ಅಷ್ಟೂ ವಿದ್ಯುತ್ ನಮ್ಮಲ್ಲಿ ಇದೆ. ಹೀಗಾಗಿ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿದಿನ 18 ರಿಂದ 19 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಹಿಂದೆಂದೂ ಈ ಪ್ರಮಾಣದಲ್ಲಿ ವಿದ್ಯುತ್ ಬೇಡಿಕೆ ಬಂದಿರಲಿಲ್ಲ. ಆದರೆ, ವಿದ್ಯುತ್ ಉತ್ಪಾದನೆ ಹೆಚ್ಚಾಗಿರುವುದರಿಂದ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಕೆ ಮಾಡಲಾಗುತ್ತಿದೆ ಎಂದರು.
ಸಮರ್ಪಕ ವಿದ್ಯುತ್ ಪೂರೈಸುವ ಉದ್ದೇಶದಿಂದ ಈ ವರ್ಷ 56ಸಬ್ ಸ್ಟೇಷನ್ ಆರಂಭಿಸಲಾಗುತ್ತದೆ. ಮುಂದಿನ ವರ್ಷ 100 ಸಬ್ ಸ್ಟೇಷನ್ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್ ಇದ್ದರೂ ಸಬ್ ಸ್ಟೇಷನ್‌ಗಳಲ್ಲಿ ಓವರ್ ಲೋಡ್ ಆಗುತ್ತಿದೆ. ಹೀಗಾಗಿ ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಲಿಂಕ್ ಲೈನ್ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.ರಾಜ್ಯದ ರೈತರಿಗೆ ವಿದ್ಯುತ್ ಸಮಸ್ಯೆ ಎದುರಾಗಬಾರದು ಎಂಬ ಕಾರಣದಿಂದಾಗಿ ಕುಸುಮ್ ಬಿ ಯೋಜನೆಯಡಿ ರೈತರ ಕೊಳವೆ ಬಾವಿಗಳಿಗೆ ಸೌರ ವಿದ್ಯುತ್ ಸಂಪರ್ಕ ಒದಗಿಸಲಾಗುತ್ತಿದೆ. ಇದಕ್ಕೆ ಶೇ.80ರಷ್ಟು ಸಬ್ಸಿಡಿ ನೀಡುತ್ತಿದ್ದೇವೆ. ಇನ್ನು ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆ ಉದ್ದೇಶದಿಂದ ಕುಸುಮ್ ಸಿ ಯೋಜನೆಯಡಿ ಸೌರ ವಿದ್ಯುತ್ ಘಟಕ ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಹಿಟ್ ಆ್ಯಂಡ್ ರನ್: ಹನಿಟ್ರ್ಯಾಪ್ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಕೈಮುಗಿದ ಕೆ.ಜೆ.ಜಾರ್ಜ್, ದಯವಿಟ್ಟು ನನ್ನನ್ನು ಕ್ಷಮಿಸಿ, ಈ ಬಗ್ಗೆ ನನ್ನ ಬಳಿ ಏನನ್ನು ಕೇಳಬೇಡಿ. ಯಾರು ವಿಷಯ ಪ್ರಸ್ತಾಪಿಸಿದ್ದಾರೆಯೋ ಅವರನ್ನೇ ಕೇಳಿ. ಹನಿಟ್ರ್ಯಾಪ್ ಬಗ್ಗೆ ನಾನು ಎಲ್ಲಿಯೂ ಮಾತನಾಡಿಲ್ಲ. ಬಸವನಗೌಡ ಪಾಟೀಲ್ ಯತ್ನಾಳ್ ಅವರು ರಾಜಣ್ಣ ಹೆಸರು ಹೇಳಿದಾಗ ಸಚಿವರು ಮಾತನಾಡಿದ್ದಾರೆ. ಈ ಬಗ್ಗೆ ಗೃಹ ಸಚಿವರು ತನಿಖೆ ಮಾಡುವುದಾಗಿ ಹೇಳಿದ್ದಾರೆ. ಅಲ್ಲಿಗೆ ಬಿಜೆಪಿಯವರು ಈ ವಿಷಯವನ್ನು ಬಿಡಬೇಕಿತ್ತು. ತನಿಖೆ ಮುಗಿಯುವವರೆಗೆ ಕಾಯದೆ ಸುಮ್ಮನೆ ಗಲಾಟೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸರ್ಕಾರದಲ್ಲಿ ಯಾವುದೇ ಗೊಂದಲಗಳು ಇಲ್ಲ. ರಾಜ್ಯದ ಜನ ಬಿಜೆಪಿ ಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ. ಹೀಗಾಗಿಯೇ ಸದನಗಳಲ್ಲಿ ಬಿಜೆಪಿಯವರು ಹಿಟ್ ಆ್ಯಂಡ್ ರನ್ ಮಾಡುತ್ತಿದ್ದಾರೆ ಎಂದರು.
ಫೋನ್ ಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಫೋನ್ ಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ದೂರು ನೀಡಿಲ್ಲ. ಯಾರ ಫೋನ್ ಟ್ರ್ಯಾಪ್ ಆಗಿದೆಯೋ ಅವರು ಯಾರಿಗೆ ದೂರು ಕೊಡಬೇಕು ಅವರಿಗೆ ದೂರನ್ನು ಕೊಡುತ್ತಾರೆ. ನನ್ನ ಫೋನ್ ಟ್ರ್ಯಾಪ್ ಆಗಿಲ್ಲ. ಹೀಗಾಗಿ ಗೊತ್ತಿಲ್ಲದ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.ಜಿಲ್ಲೆಯಲ್ಲಿ ನಮೂನೆ 50, 53ರ ಅಡಿ ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸಿರುವ ರೈತರ ಅರ್ಜಿಗಳು ವಜಾ ಆಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಕಂದಾಯ ಸಚಿವರನ್ನು ಭೇಟಿ ಮಾಡಿ ಚರ್ಚಿಸಿ ರೈತರಿಗೆ ಅನುಕೂಲ ಒದಗಿಸಿಕೊಡುತ್ತೇನೆ ಎಂದರು.
ಪೋಟೋ: 24 ಕೆಸಿಕೆಎಂ 6