ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರ ತರ ಸಿದ್ದರಾಮಯ್ಯ ಕಳ್ಳತನ ಮಾಡಿಲ್ಲ : ಸಚಿವ ಎನ್‌.ಎಸ್‌.ಬೋಸರಾಜು

| Published : Oct 03 2024, 01:30 AM IST / Updated: Oct 03 2024, 12:50 PM IST

Siddaramaiah

ಸಾರಾಂಶ

ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರ ತರ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳ್ಳತನ ಮಾಡಿಲ್ಲ. ಮುಡಾ ಪ್ರಕರಣದ ವಿಚಾರದಲ್ಲಿ ಅವರು ಯಾವುದೇ ಕಾರಣಕ್ಕು ರಾಜಿನಾಮೆ ನೀಡುವ ಪ್ರಶ್ನೇಯೇ ಉದ್ಭವಿಸುವುದಿಲ್ಲ ಎಂದು ಸಚಿವ ಎನ್‌.ಎಸ್‌.ಬೋಸರಾಜು ತಿಳಿಸಿದರು.

ರಾಯಚೂರು: ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರ ತರ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳ್ಳತನ ಮಾಡಿಲ್ಲ. ಮುಡಾ ಪ್ರಕರಣದ ವಿಚಾರದಲ್ಲಿ ಅವರು ಯಾವುದೇ ಕಾರಣಕ್ಕು ರಾಜಿನಾಮೆ ನೀಡುವ ಪ್ರಶ್ನೇಯೇ ಉದ್ಭವಿಸುವುದಿಲ್ಲ ಎಂದು ಸಚಿವ ಎನ್‌.ಎಸ್‌.ಬೋಸರಾಜು ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಿಎಸ್‌ವೈ ಹಾಗೂ ಎಚ್‌ಡಿಕೆ ಅವರಂತೆ ಅಡ್ಡದಾರಿ ಹಿಡಿದು ಕಳ್ಳತನ ಮಾಡಿಲ್ಲ, ಲಂಚದ ಹಣವನ್ನು ಬ್ಯಾಂಕ್‌ ಖಾತೆಗೆ ಹಾಸಿಕಿಸಿಕೊಂಡಿಲ್ಲ, ಸತ್ತವರ ಹೆಸರಿನಲ್ಲಿ ಡಿ-ನೋಟಿಫಿಕೇಶನ್ ಮಾಡಿಲ್ಲವೆಂದು ತಿರುಗೇಟು ನೀಡಿದರು.

ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ದುಬಾರಿ ಬೆಳೆಬಾಳುವ ಗಡಿಯಾರ ಕುರಿತ ಆರೋಪ ಕೇಳಿಬಂಬ ಸಮಯದಲ್ಲಿ ಗಡಿಯಾರವನ್ನು ಮರಳಿಸಿದ್ದರು. ಇದೀಗ ಮುಡಾ ಕೇಸ್‌ನಲ್ಲಿ ಸಿಎಂ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದರಿಂದ ಮುಜುಗರ ತಪ್ಪಿಸಿಕೊಳ್ಳುವುದಕ್ಕೆ ಸಿಎಂ ಅವರ ಪತ್ನಿ ಪಾರ್ವತಿ ಅವರು ನಿವೇಶನಗಳನ್ನು ಹಿಂದಿರುಗಿಸಿ ಜವಾಬ್ದಾರಿಯನ್ನು ಪ್ರದರ್ಶಿಸಿದ್ದಾರೆ.

ಮುಡಾ ಹಗರಣದಲ್ಲಿ ತವರಿನಿಂದ ನೀಡಲಾಗಿದ್ದ ನಿವೇಶನ ಪಡೆದಿರುವ ಸಿಎಂ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನಿವೇಶನಗಳನ್ನು ಮರಳಿಸಿದ್ದಾರೆ, ತನಿಖೆಯನ್ನು ಸಹ ಸಮರ್ಥವಾಗಿ ಎದುರಿಸಲಿದ್ದಾರೆ ಎಂದರು.

ಬಿಜೆಪಿ-ಜೆಡಿಎಸ್‌ ಪಕ್ಷದವರಿಗೆ ರಾಜ್ಯ ಸರ್ಕಾರವನ್ನು ಅಸ್ಥಿತಗೊಳಿಸುವುದು ಬಿಟ್ಟರೇ ಬೇರೊಂದು ಗೊತ್ತಿಲ್ಲ. ಅವರಿಗೆ ಅಭಿವೃದ್ಧಿ ಬೇಕಿಲ್ಲ, ನಿತ್ಯ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವುದು ಬಿಟ್ಟರೇ ವಿರೋಧ ಪಕ್ಷದವರಿಗೆ ಬೇರೇನು ಕೆಲಸವಿಲ್ಲ. ಸಿಎಂ ಮೇಲೆ ಮಾಡುತ್ತಿರುವ ಸುಳ್ಳು ಆರೋಪಗಳನ್ನು ಜನಸಾಮಾನ್ಯರು ತಿಳಿದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.