ಕಾಂಗ್ರೆಸ್‌ ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಸಚಿವ ಚಲುವರಾಯಸ್ವಾಮಿ

| Published : Feb 09 2024, 01:47 AM IST

ಕಾಂಗ್ರೆಸ್‌ ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಈ ವರ್ಷ 54000 ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಲಾಗುತ್ತಿದೆ. ಮುಂದಿನ ವರ್ಷದಿಂದ 69 000 ಕೋಟಿ ರು. ಅನುದಾನವನ್ನು ಸರ್ಕಾರ ಮೀಸಲಿರಿಸಲಿದೆ. ವಿವಿಧ ಯೋಜನೆಗಳ ಮೂಲಕ 1 ಲಕ್ಷ ಕೋಟಿ ರು. ನೇರವಾಗಿ ಜನರಿಗೆ ತಲುಪುತ್ತಿದೆ. ಎಂದಿಗೂ ನಮ್ಮ ಸರ್ಕಾರ ಬಡವರು, ಜನ ಸಾಮಾನ್ಯರ ಪರವಾಗಿ ಕೆಲಸ ಮಾಡಲಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಚುನಾವಣೆಯಲ್ಲಿ ವೇಳೆ ಘೋಷಿಸಿದಂತೆ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ತಕ್ಷಣವೇ ಗ್ಯಾರಂಟಿ ಯೋಜನೆ ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ. ಅವುಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಈ ವರ್ಷ 54000 ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಲಾಗುತ್ತಿದೆ. ಮುಂದಿನ ವರ್ಷದಿಂದ 69 000 ಕೋಟಿ ರು. ಅನುದಾನವನ್ನು ಸರ್ಕಾರ ಮೀಸಲಿರಿಸಲಿದೆ. ವಿವಿಧ ಯೋಜನೆಗಳ ಮೂಲಕ 1 ಲಕ್ಷ ಕೋಟಿ ರು. ನೇರವಾಗಿ ಜನರಿಗೆ ತಲುಪುತ್ತಿದೆ. ಎಂದಿಗೂ ನಮ್ಮ ಸರ್ಕಾರ ಬಡವರು, ಜನ ಸಾಮಾನ್ಯರ ಪರವಾಗಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.

ನಾಡಿನ ಎಲ್ಲ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಯೋಜನೆ ಹಾಗೂ ಮಾಸಿಕ 2000 ರು. ನೀಡುವ ಗೃಹ ಲಕ್ಷ್ಮಿ ಯೋಜನೆ ಜಾರಿಗೊಳಿಸಿದೆ. ಅನ್ನಭಾಗ್ಯ, ಗೃಹ ಜ್ಯೋತಿ, ಯುವ ನಿಧಿ ಯೋಜನೆಗಳೂ ಜನರ ಮನೆಗಳಿಗೆ ತಲುಪುತ್ತಿವೆ ಎಂದರು.

ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ ತಾಲೂಕುಗಳಲ್ಲಿ ಬರ ಇರುವ ಕಾರಣ ಈ ಬಾರಿ 15,000 ಹೆಕ್ಟೇರ್ ನಲ್ಲಿ ಭತ್ತ ಬೆಳೆಯಲು ಸಾಧ್ಯವಿಲ್ಲ. ರೈತರು ಫೆಬ್ರವರಿ ಅಂತ್ಯದೊಳಗೆ ಎಕರೆಗೆ 566 ರು. ಹಣಕೊಟ್ಟು ವಿಮೆ ಮಾಡಿಸಿದರೆ, 9498 ರು. ವಿಮೆ ಹಣ ದೊರೆಯಲಿದೆ. ಇದನ್ನು ಸದ್ಬಳಕೆಮಾಡಿಕೊಳ್ಳಬೇಕು ಎಂದರು.

ಗ್ಯಾರಂಟಿ ಯೋಜನೆಗಳ ಜೊತೆ ನಾವು ಬರ ಪರಿಹಾರದ ಕಂತು 2000 ರು.ಗಳನ್ನು ರೈತರ ಖಾತೆಗೆ ವರ್ಗಾವಣೆ ಮಾಡಿದ್ದೇವೆ. ಆದರೆ, ಕೇಂದ್ರ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ರೈತರಿಗೆ ಸ್ಪಂದಿಸಿಲ್ಲ. ನಮ್ಮ ಮನವಿ ಪರಿಗಣಿಸಲೇ ಇಲ್ಲ. ಜಿಎಸ್‌ಟಿ ಪಾಲಿನಲ್ಲೂ ತಾರತಮ್ಯ ಮಾಡುತ್ತಿದ್ದಾರೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ರಾಜ್ಯ ಸರ್ಕಾರ ಭೂ ದಾಖಲೆಗಳ ಗಣಕೀಕರಣಕ್ಕೆ ಚಾಲನೆ ನೀಡಿದ್ದು ಪಾಂಡವಪುರ ತಾಲೂಕಿನಲ್ಲಿ ಪೈಲಟ್ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದರು.

ಶಾಸಕ ದರ್ಶನ ಪುಟ್ಟಣಯ್ಯ ಮಾತನಾಡಿ, ಗ್ಯಾರಂಟಿ ಯೋಜನೆಗಳು ಸಾರ್ವಜನಿಕರನ್ನು ಆರ್ಥಿಕವಾಗಿ ಸದೃಢ ಮಾಡಲು ರೂಪಿಸಲಾಗಿದೆ. 5 ಗ್ಯಾರಂಟಿ ಯೋಜನೆಗಳಿಗೆ ಸುಮಾರು 57 ಸಾವಿರ ಕೋಟಿ ರು. ವೆಚ್ಚ ಮಾಡಲಾಗಿದೆ ಎಂದರು.

ಭೂ ದಾಖಲೆಗಳ ಡಿಜಿಟಲೀಕರಣದಿಂದ ರೈತರು ದಾಖಲೆಗಳಿಗಾಗಿ ತಾಲೂಕು ಕಚೇರಿ ಅಲಿಯುವುದು ತಪ್ಪಲಿದೆ. ರಾಜ್ಯದಲ್ಲೇ ಮೊದಲ ಹಂತದಲ್ಲಿ ಪಾಂಡವಪುರ ತಾಲೂಕು ಆಯ್ಕೆಯಾಗಿರುವುದು ಸಂತೋಷದ ವಿಷಯವಾಗಿದೆ ಎಂದರು.

ಇದೇ ವೇಳೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ, ಅಪರ ಜಿಲ್ಲಾಧಿಕಾರಿ ಡಾ.ಎಚ್ ಎಲ್ ನಾಗರಾಜು, ಉಪ ವಿಭಾಗಾಧಿಕಾರಿ ನಂದೀಶ್, ತಹಸೀಲ್ದಾರ್ ಶ್ರೇಯಸ್, ಉಪ ತಹಸೀಲ್ದಾರ್ ಮೋಹನ್, ವರುಣ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.