ಸಾರಾಂಶ
ಹಳಿಯಾಳ: ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿ ಹಾಗೂ ಸಂಘಟನೆಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸದಾ ಶ್ರಮಿಸಲಿದ್ದೇನೆ, ಅಷ್ಟಕ್ಕೂ ನಮ್ಮ ಜಿಲ್ಲೆಯಲ್ಲಿ ಯಾವುದೇ ಬೇಧಭಾವ ಭಿನ್ನಾಭಿಪ್ರಾಯಗಳಿಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರಮಠ ಸ್ಪಷ್ಟಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ನಂತರ ಮೊದಲ ಬಾರಿ ಹಳಿಯಾಳಕ್ಕೆ ಭೇಟಿ ನೀಡಿದ ಅವರು ಇಲ್ಲಿನ ವೀರಶೈವ ಲಿಂಗಾಯತ ಮಹಾಸಭಾ ಪ್ರಮುಖರೊಂದಿಗೆ ಹಾಗೂ ತಾಲೂಕು ಘಟಕದೊಂದಿಗೆ ಸಭೆ ನಡೆಸಿ ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ವೀರಶೈವ ಲಿಂಗಾಯತ ಸಮುದಾಯ ಬಲಪಡಿಸುವ ಸಶಕ್ತಗೊಳಿಸುವ ಕಾರ್ಯದಲ್ಲಿ ಪ್ರತಿಯೊಬ್ಬರು ನಿಷ್ಠೆಯಿಂದ ಭಾಗಿಯಾಗಿ ಕೆಲಸ ಮಾಡಬೇಕು, ಎಲ್ಲರೂ ಕೈಜೋಡಿಸಿದರೇ ನಮ್ಮ ಸಮಾಜ ಸಂಘಟನೆ ಹಾಗೂ ಸಮಾಜ ಉನ್ನತಿಕರಿಸಲು ಸಾಧ್ಯ ಎಂದರು.
ಸಮಾಜದ ಸಂಘಟನೆಯ ಮುಂದಿನ ಚುನಾವಣೆಯು ನಡೆಯುವರೆಗೆ ನಾನು ಉತ್ತರ ಕನ್ನಡ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷನಾಗಿ ಮುಂದುವರೆಯಲ್ಲಿದ್ದೇನೆ, ಆದರಿಂದ ಸಮುದಾಯದ ಸರ್ವರ ಸಹಕಾರ ಬೆಂಬಲ ಅಶೀರ್ವಾದದ ಅವಶ್ಯಕತೆಯು ನನಗಿದೆ ಎಂದರು.ಮುಂಬರುವ ಅವದಿಯಲ್ಲಿ ಚುನಾವಣೆ ಇಲ್ಲದೆಯೇ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ನಡೆಯಬೇಕೆಂಬ ನನ್ನ ಅಭಿಪ್ರಾಯವಾಗಿದೆ. ಅದಕ್ಕಾಗಿ ನಮ್ಮ ಸಮಾಜದವರೆಲ್ಲರೂ ಓರ್ವ ಸಂಘಟನಕಾರನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರೇ ನಮ್ಮಲ್ಲಿನ ಒಗ್ಗಟ್ಟು ಐಕ್ಯತೆ ಬಲಿಷ್ಠವಾಗಲಿದೆ ಎಂದು ಅಭಿಪ್ರಾಯಪಟ್ಟರು.
ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಸಮಿತಿಯ ಅಜೀವ ಸದಸ್ಯ ಉದ್ಯಮಿ ಸಂಜಯ ಪಾಟೀಲ ಮಾತನಾಡಿ, ನಮ್ಮಲ್ಲಿ ಯಾವುದೇ ಮನಸ್ತಾಪಗಳಿದ್ದರೂ ಅವುಗಳನ್ನು ಮರೆತು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು, ಲಿಂಗಾಯತ ಸಮುದಾಯದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸ್ಥಾನಮಾನ ಪಡೆಯಬೇಕಾದರೇ ನಾವೆಲ್ಲರೂ ಒಗ್ಗಟ್ಟಿನಿಂದ ಸಂಘಟನಾ ಕಾರ್ಯದಲ್ಲಿ ತೊಡಗಬೇಕು ಎಂದು ಹೇಳಿದರು.ಜಿಲ್ಲಾ ಶರಣ ಸಾಹಿತ್ಯದ ಪ್ರಮುಖರಾದ ಶಿವದೇವ ಕೆ.ದೇಸಾಯಸ್ವಾಮಿ ಮಾತನಾಡಿ, ಉತ್ತರ ಕನ್ನಡ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಗ್ಗೆ ನಾವು ಹಳಿಯಾಳದವರು ಅಸಮಾಧಾನ ಹೊರಹಾಕಿದ್ದೇವು, ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ನಮ್ಮ ರಾಜ್ಯಾಧ್ಯಕ್ಷ ಶಂಕರ ಬಿದರಿಯವರು, ಸಮುದಾಯದ ಅಭಿವೃದ್ಧಿಗೆ ಶ್ರಮಿಸುವಂತೆ ವಿನಂತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಎಲ್ಲ ಮನಸ್ತಾಪ ಮರೆತು ನೂತನ ಜಿಲ್ಲಾಧ್ಯಕ್ಷರೊಂದಿಗೆ ಸಂಘಟನೆಯ ಕಾರ್ಯ ನಿರ್ವಹಿಸುತ್ತೆವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಬಿ. ತೋರಣಗಟ್ಟಿ, ಕಾರ್ಯದರ್ಶಿ ಸುಧಾಕರ ಕುಂಬಾರ, ಉಳವಿ ಶ್ರೀಚನ್ನಬಸವೇಶ್ವರ ದೇವಸ್ಥಾನ ಟ್ರಸ್ಟ್ ಸಮಿತಿ ಉಪಾಧ್ಯಕ್ಷ ಪ್ರಕಾಶ ಕಿತ್ತೂರ, ಲಿಂಗರಾಜ ಹಿರೇಮಠ, ವಿ.ಎಂ. ಹಳ್ಳಿ, ಶಿವಾನಂದ ಶೆಟ್ಟರ್, ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ರವಿ ತೋರಣಗಟ್ಟಿ ಹಾಗೂ ಇತರರು ಇದ್ದರು.