ಸಾರಾಂಶ
-ಮೂಲಭೂತ ಸೌಲಭ್ಯಗಳಿಲ್ಲದೇ ಡಿಸಿ ಕಾಲೋನಿ ಜನರ ಪರದಾಟ । ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ
------ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರುಸುಮಾರು 280 ಕ್ಕೂ ಹೆಚ್ಚು ಮನೆಗಳು, ರಸ್ತೆ, ಚರಂಡಿ ಇಲ್ಲದೇ ಹತ್ತಾರು ವರ್ಷಗಳಿಂದ ಕೊಳಚೆ ತುಂಬಿದ ಗುಂಡಿಗಳ ಪಕ್ಕದಲ್ಲೇ ವಾಸಿಸುವಂತಹ ದುಸ್ಥಿತಿ ನಗರದ 28ನೇ ವಾರ್ಡಿನ ಡಿಸಿ ಕಾಲೋನಿ ಜನರದ್ದಾಗಿದೆ.
ನಗರಸಭೆಗೆ ಅನೇಕ ಬಾರಿ ಮನವಿ ನೀಡಿದೂ ಡಿಸಿ ಕಾಲೋನಿ ಜನರ ಸಂಕಷ್ಟ ಬಗೆಹರಿದಿಲ್ಲ. ನಗರದ ಟಿಬಿ ವೃತ್ತ, ಗೋಪಾಲಪುರ ಮುಂತಾದ ಕಡೆ ಗುಡಿಸಲು ಸುಟ್ಟು ನಿರಾಶ್ರಿತರಾದವರಿಗೆ ಡಿಸಿ ಕಾಲೋನಿಯಲ್ಲಿ ಮನೆ ನಿರ್ಮಿಸಿಕೊಟ್ಟಿದ್ದರು.ಆಗಿನ ಜಿಲ್ಲಾಧಿಕಾರಿ ಸಾಧಿಕ್ ಅವರು ಮುತುವರ್ಜಿ ವಹಿಸಿ ಗುಡಿಸಲು ಕಳೆದುಕೊಂಡವರಿಗೆ ಆಶ್ರಯ ಒದಗಿಸಿ, ಸ್ವತ: ಡಿಸಿ ಅವರೇ ಕಾಲೋನಿ ಉದ್ಘಾಟಿಸಿದ್ದರಿಂದ ಡಿಸಿ ಕಾಲೋನಿ ಎಂತಲೇ ಹೆಸರು ಇದೆ. ಕಾಲೋನಿ ನಿರ್ಮಾಣವಾದಾಗಿನಿಂದ ಇಲ್ಲಿಯವರೆಗೆ ಆ ಭಾಗದ ಜನರು ಮೂಲಭೂತ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಡಿಸಿ ಕಾಲೋನಿಯ ಮಧ್ಯ ಭಾಗದಲ್ಲೇ ಒಂದಷ್ಟು ಜಾಗವನ್ನು ಸಾರ್ವಜನಿಕರ ಬಳಕೆಗೆ ಬಿಟ್ಟಿದ್ದು, ಅದರಲ್ಲಿ ಸಣ್ಣದೊಂದು ದೇವಸ್ಥಾನ ನಿರ್ಮಿಸಿಕೊಳ್ಳಲಾಗಿದೆ. ಆದರೆ, ಅದರ ಪಕ್ಕವೇ ರಾಜಕಾಲುವೆಯಿದೆ. ಆಳುದ್ದ ಗುಂಡಿಗಳಲ್ಲಿ ಗಿಡಗಂಟೆ, ಕೊಚ್ಛೆ ತುಂಬಿದೆ. ಕಾಲೋನಿಯ ಕೆಲವು ಕೇರಿಗಳಲ್ಲಿ 20 ವರ್ಷವಾದರೂ ಚರಂಡಿ ವ್ಯವಸ್ಥೆ ಮಾಡಿಲ್ಲ. ಸಾವಿರ ಮನೆಗಳು ಇರುವ 28ನೇ ವಾರ್ಡ್ ಬಿಟ್ಟು ಉಳಿದ ಭಾಗಗಳಲ್ಲಿ ರಸ್ತೆ ಚರಂಡಿಗಳ ನಿರ್ಮಾಣವಾಗಿದೆ.ಆದರೆ, ಡಿಸಿ ಕಾಲೋನಿಯಲ್ಲಿ ಮಾತ್ರ ರಸ್ತೆ , ಚರಂಡಿ ನಿರ್ಮಾಣವಾಗಿಲ್ಲ.
ಕೆಲವರ ಮನೆ ಸುತ್ತಲಿನ ಕೊಳಚೆ, ಗಿಡಮರಗಳನ್ನು ತಮ್ಮ ಸ್ವಂತ ಖರ್ಚಿನಲ್ಲೇ ಸ್ವಚ್ಛಗೊಳಿಸಿಕೊಂಡಿದ್ದಾರೆ.ಮನೆಗಳು ಇರುವ ಕಡೆ ಚರಂಡಿ ನಿರ್ಮಿಸುವ ಬದಲು ಮನೆಗಳೇ ಇಲ್ಲದ ಸಾರ್ವಜನಿಕ ಉಪಯೋಗಕ್ಕೆ ಬಿಟ್ಟ ಜಾಗದಲ್ಲಿ ಚರಂಡಿ ನಿರ್ಮಿಸಿದ್ದಾರೆ. ಚರಂಡಿಗಾಗಿ ಎತ್ತಿದ ಮಣ್ಣು ಈಗಲೂ ಹಾಗೆಯೇ ಇದೆ. ಅದನ್ನೂ ತೆರವು ಗೊಳಿಸಲು ಗುತ್ತಿಗೆದಾರನಿಗೆ ಪುರುಸೊತ್ತು ಇದ್ದಂತಿಲ್ಲ.
ದುರಂತದ ಸಂಗತಿ ಎಂದರೆ ಈ ವಾರ್ಡ್ ಅನ್ನು ಹಾಲಿ ನಗರಸಭೆ ಉಪಾಧ್ಯಕ್ಷ ಅಂಬಿಕಾ ಆರಾಧ್ಯ ಪ್ರತಿನಿಧಿಸುತ್ತಿದ್ದಾರೆ. ನಗರಸಭೆ ಉಪಾಧ್ಯಕ್ಷರ ಕರ್ಮಭೂಮಿಯ ಸ್ಥಿತಿಯೇ ಹೀಗಾದರೆ, ಉಳಿದ ಸದಸ್ಯರ ವಾರ್ಡ್ ಗಳ ಗತಿಯೇನು ಎಂದು ಆ ಭಾಗದ ಸಾರ್ವಜನಿಕರ ಪ್ರಶ್ನೆಗೆ ಉಪಾಧ್ಯಕ್ಷರು ಉತ್ತರಿಸಬೇಕಿದೆ. ಕೊಳಚೆ, ತಗ್ಗು, ಗುಂಡಿ, ಕಸ ತುಂಬಿದ ವಾರ್ಡ್ ನಲ್ಲಿ ಸೊಳ್ಳೆ, ವಿಷ ಜಂತುಗಳ ಆವಾಸಸ್ಥಾನ ಮಾಡಿಕೊಂಡಿದ್ದು, ಇನ್ನಾದರೂ ನಗರಸಭೆಯವರು ಇತ್ತ ಗಮನಹರಿಸಿ ಆ ಭಾಗದ ಕುಟುಂಬಳಿಗೆ ರಸ್ತೆ, ಚರಂಡಿ ನಿರ್ಮಿಸುವ ಜೊತೆಗೆ ವಾರ್ಡ್ ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಬೇಕೆಂದು ಡಿಸಿ ಕಾಲೋನಿ ನಿವಾಸಿಗಳು ಮನವಿ ಮಾಡಿದ್ದಾರೆ....ಬಾಕ್ಸ್ ....
ಮೂಲಭೂತ ಸೌಲಭ್ಯ ಕಲ್ಪಿಸಲು ಮನವಿಕಳೆದ 21 ವರ್ಷದಿಂದಲೂ ನಾವೆಲ್ಲಾ ಇಲ್ಲಿಯೇ ವಾಸಿಸುತ್ತಿದ್ದೇವೆ. ಈವರೆಗೆ ನಾವು ಮನವಿ ನೀಡದೇ ಯಾವ ಕೆಲಸವೂ ಆಗುವುದಿಲ್ಲ. ಇಂದು ಸಹ ನಗರಸಭೆಗೆ ಮನವಿ ನೀಡಿ ಮೂಲಭೂತ ಸೌಕರ್ಯ ಒದಗಿಸಿ ಎಂದು ಮನವಿ ಮಾಡಿದ್ದೇವೆ. ಮನೆಗಳ ಮಧ್ಯಯೇ ಮನುಷ್ಯನ ಎತ್ತರಕ್ಕೆ ಮುಳ್ಳು ಜಾಲಿ ತರದ ಗಿಡಗಳು ಬೆಳೆದಿವೆ. ಅವುಗಳಲ್ಲಿ ಹಂದಿ, ಹಾವು, ಚೇಳು,ಸೊಳ್ಳೆ ಸೇರಿಕೊಂಡು ಹಾವಳಿ ಇಡುತ್ತಿವೆ. ರಸ್ತೆ ಇಲ್ಲದೇ ಇರುವುದರಿಂದ ಗರ್ಭಿಣಿಯರು, ಮಕ್ಕಳು, ವೃದ್ಧರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಕಷ್ಟ. ಮನುಷ್ಯರು ವಾಸಿಸಲು ಅವಶ್ಯಕತೆ ಇರುವ ರಸ್ತೆ, ಚರಂಡಿ ನಿರ್ಮಿಸಿಕೊಟ್ಟು ಗಿಡಗೆಂಟೆ ತೆಗೆದು ಸ್ವಚ್ಛಗೊಳಿಸಿಕೊಡುವುದನ್ನು ಸಹ ಮಾಡದಿದ್ದರೆ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಕೆ. ರಾಮಚಂದ್ರ.
------ಚಿತ್ರ 1,2 ನಗರದ 28 ನೇ ವಾರ್ಡ್ ನ ಡಿಸಿ ಕಾಲೋನಿಯಲ್ಲಿ ಚರಂಡಿ, ರಸ್ತೆ ವ್ಯವಸ್ಥೆ ಇಲ್ಲದೇ ಇರುವುದು.
ಚಿತ್ರ 3 ಕೆ ರಾಮಚಂದ್ರ, ಸ್ಥಳೀಯ ನಿವಾಸಿ.