ಹಲ್ಕೆ-ಮಪ್ಪಾನೆ ಲಾಂಚ್‌ನ ಸಿಬ್ಬಂದಿಗಿಲ್ಲ ಸುರಕ್ಷತೆ

| Published : Jul 24 2024, 12:18 AM IST

ಹಲ್ಕೆ-ಮಪ್ಪಾನೆ ಲಾಂಚ್‌ನ ಸಿಬ್ಬಂದಿಗಿಲ್ಲ ಸುರಕ್ಷತೆ
Share this Article
  • FB
  • TW
  • Linkdin
  • Email

ಸಾರಾಂಶ

ಹಲ್ಕೆ - ಮುಪ್ಪಾನೆ ಕಡುವಿನಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಕನಿಷ್ಟ ಪ್ರಾಥಮಿಕ ಸೌಲಭ್ಯಗಳೂ ದೊರಕದೆ ಪ್ರತಿ ದಿನವೂ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರದೀಪ್ ಮಾವಿನ ಕೈ ಕನ್ನಡ ಪ್ರಭ ವಾರ್ತೆ ಬ್ಯಾಕೋಡು

ಶರಾವತಿ ಹಿನ್ನೀರಿನ ಹಲ್ಕೆ - ಮುಪ್ಪಾನೆ ಕಡುವಿನಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ದೊರಕಬೇಕಾದ ಪ್ರಾಥಮಿಕ ಸೌಲಭ್ಯಗಳು ದೊರಕದೆ ಪ್ರತಿ ದಿನವೂ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಯಾವುದೇ ಅಂಗಡಿ, ಹೋಟೆಲ್‌ಗಳು ಇಲ್ಲದ ಪ್ರದೇಶವಾದ್ದರಿಂದ ಬೆಳಗಿನ ಉಪಹಾರವೇ ಮಧ್ಯಾಹ್ನದ ಭೋಜನವನ್ನಾಗಿಸಿಕೊಂಡಿರುವ ಇವರಿಗೆ ಎಂತಹ ಜಡಿ ಮಳೆ ಬಂದರೂ ಶರಾವತಿ ಆಚೆ ಈಚೆಯ ದಡವೇ ಕ್ವಾರ್ಟರ್ಸ್‌ಗಳಂತಾಗಿವೆ.

ಕಳೆದ ನಾಲ್ಕೈದು ದಿನಗಳಿಂದ ಮಳೆ ಗಾಳಿ ಹೆಚ್ಚಾಗಿದ್ದರಿಂದ ಕಾಡಂಚಿನಿಂದ ತೇಲಿ ಬಂದ ಹಳ್ಳಗಳ ಬದಿಯಲ್ಲಿರುವ ಒಣ ಮರದ ತುಂಡುಗಳು ನೀರಲೆಗೆ ಸಿಕ್ಕಿ ದಡಗಳಲ್ಲಿ ರಾಶಿಗಟ್ಟಲೆ ಬಂದು ನಿಂತು ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿತ್ತು, ಕಳೆದ ನಾಲ್ಕು ದಿನಗಳ ಹಿಂದೆ ಮರದ ತುಂಡುಗಳು ಲಾಂಚಿನ ಕೆಳಭಾಗದ ಫ್ಯಾನ್‌ಗೆ ಸಿಲುಕಿಕೊಂಡಿದ್ದು, ಅದನ್ನು ಬಿಡಿಸಲು ಗಂಟೆಗಟ್ಟಲೆ ಹರಸಾಹಸ ಮಾಡಿದ್ದಾರೆ.

ಲಾಂಚ್ ನಿಲ್ಲಿಸುವ ದಡದಲ್ಲಿ ದೊಡ್ದ ದೊಡ್ದ ಮರದ ತುಂಡುಗಳು ತೇಲಿ ಬಂದು ಸೇರಿದ್ದು, ಲಾಂಚ್ ನಿಲುಗಡೆ ಮಾಡಲು ಸಾಧ್ಯವಾಗದೇ ಸಿಬ್ಬಂದಿ ನೀರಿನಲ್ಲಿ ಇಳಿದು ಮರದ ತುಂಡುಗಳನ್ನು ಸರಿಸುವ ಸಾಹಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ಕಡಿದಾದ ಪ್ರದೇಶವಿದ್ದು, ಅಲ್ಲಿ ಮರದ ತುಂಡುಗಳು ಸಿಕ್ಕಿ ಹಾಕಿಕೊಂಡಾಗ ತೆಗೆಯಲು ಬರುವುದಿಲ್ಲ ಇಂತಹ ಸಂದರ್ಭದಲ್ಲಿ ಲಾಂಚಿನ ಫ್ಯಾನ್ ಗಾಳಿಗೆ ಸಿಕ್ಕಿ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಮಳೆಗಾಲದಲ್ಲಿ ಸಾಮಾನ್ಯವಾಗಿ ಸಿಗಂದೂರಿಗೆ ಬಂದ ಪ್ರವಾಸಿಗರೂ ಅತೀ ಕಡಿಮೆ ದೂರದಲ್ಲಿ ಜೋಗ ತಲುಪಲು ಬಳಸುವ ಮಾರ್ಗ ಇದಾಗಿದ್ದು, ಇದರ ಮಧ್ಯೆ ಸ್ಥಳೀಯರ ವಾಹನಗಳೂ ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಹೆಚ್ಚಿನ ಸುರಕ್ಷತೆ ದೃಷ್ಟಿಯಿಂದ ಎರಡೂ ದಡದಲ್ಲಿ ಸೂಕ್ತ ಪ್ಲಾಟ್ ಫಾರಂ ನಿರ್ಮಾಣ ಮಾಡಿದರೆ ಸುಲಭವಾಗಿ ಲಾಂಚ್ ನಿಲುಗಡೆ ಮಾಡಬಹುದು. ಮಣ್ಣಿನ ದಿಬ್ಬಗಳಿಗೆ ಲಾಂಚ್‌ನ ಮುಂಭಾಗ ಪದೇ ಪದೇ ತಗುಲುವುದರಿಂದ ಕೆಳಭಾಗ ಮತ್ತು ವಾಹನ ಹತ್ತಿಸುವ ಪ್ಲಾಟ್ ಫಾರ್ಮ್ ಹಾಳಾಗುವ ಸಾಧ್ಯತೆಯೇ ಹೆಚ್ಚಿದೆ.

ಎರಡೂ ದಡದಲ್ಲಿ ಸೂಕ್ತ ಪ್ಲಾಟ್ ಫಾರ್ಮ್‌ ಆಗಲಿ: ಗಣಪತಿ

ಹಲ್ಕೆ-ಮುಪ್ಪಾನೆ ಲಾಂಚಿನಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸರಿಯಾದ ಕ್ವಾರ್ಟರ್ಸ್‌ ಸೇರಿದಂತೆ ಸಿಗಬೇಕಾದ ಸಣ್ಣ ಪುಟ್ಟ ಸೌಲಭ್ಯ ಕೂಡ ಇಲ್ಲಿಯವರೆಗೂ ದೊರಕಿಲ್ಲ. ಊಟ ಮಾಡಲು ಸಹ ಸರಿಯಾದ ಜಾಗವಿಲ್ಲದೆ ಸುರಿವ ಮಳೆಯಲ್ಲೇ ಕುಳಿತು ಊಟ ಉಪಚಾರ ಮಾಡುವಂತಾಗಿದೆ. ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸ ಬೇಕು. ಲಾಂಚಿಗೆ ವಾಹನಗಳನ್ನು ಹತ್ತಿಸಲು ಪ್ಲಾಟ್ ಫಾರಂ ಇಲ್ಲದೇ ವಾಹನ ಸವಾರರು ದಿನನಿತ್ಯ ಸರ್ಕಸ್ ಮಾಡುತ್ತಿದ್ದಾರೆ. ಶಾಸಕರು ಇತ್ತ ಗಮನ ಹರಿಸಿ ಎರಡೂ ದಡದಲ್ಲಿ ಸೂಕ್ತ ಪ್ಲಾಟ್ ಫಾರ್ಮ್ ನಿರ್ಮಾಣ ಮಾಡಬೇಕು. ಇಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಗಣಪತಿ ಹಿನ್ಸೋಡಿ.