ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಛಾಯಾಗ್ರಹಣ ವೃತ್ತಿಯಲ್ಲಿ ತೊಡಗಿರುವ ಫೋಟೋಗ್ರಾಫರ್‌ಗಳಿಗೆ ಯಾವುದೇ ಭದ್ರತೆ ಇಲ್ಲ. ಹಾಗಾಗಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಜಿಲ್ಲಾ ಫೋಟೋ ಮತ್ತು ವಿಡಿಯೋ ಗ್ರಾಫರ್ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಸಲಹೆ ನೀಡಿದರು.ನಗರದಲ್ಲಿ ತುಮಕೂರು ಜಿಲ್ಲಾ ಫೋಟೋ ಮತ್ತು ವಿಡಿಯೋ ಗ್ರಾಫರ್‌ಗಳ ಸಂಘದ ವತಿಯಿಂದ ಏರ್ಪಡಿಸಿದ್ದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಫೋಟೋಗ್ರಾಫರ್‌ಗಳು ತಾವು ಒಪ್ಪಿಕೊಳ್ಳುವ ಮದುವೆ ಸೇರಿ ಇನ್ನಿತರೆ ಸಮಾರಂಭಗಳಲ್ಲಿ ಅಚ್ಚುಕಟ್ಟಾಗಿ ಫೋಟೋಗ್ರಫಿ ಮಾಡಿ ಹಣ ಉಳಿತಾಯ ಮಾಡುವ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಆರೋಗ್ಯದ ಕಡೆ ಕಾಳಜಿ ವಹಿಸುವುದಿಲ್ಲ. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಂಥ ಸಮಸ್ಯೆಗಳಿಗೆ ತುತ್ತಾಗುತ್ತಿರುವುದನ್ನು ನೋಡುತ್ತಿದ್ದೇವೆ. ಇನ್ನು ಮುಂದೆಯಾದರೂ ಫೋಟೋ ಮತ್ತು ವಿಡಿಯೋಗ್ರಾಫರ್‌ಗಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.ಫೋಟೋಗ್ರಫಿಗೆ ಭಾಷೆ ಇಲ್ಲ, ಆದರೆ ಒಂದು ಫೋಟೋಗ್ರಫಿ ಹಿಂದೆ ಸಾವಿರ ಕಥೆ ಇರುತ್ತದೆ ಎಂದು ಅವರು ಹೇಳಿದರು.
186 ವರ್ಷಗಳ ಹಿಂದೆ ಲೂಯಿಸ್ ಡಾಗರೆ ಅವರು ಪರಿಚಯಿಸಿದ ಫೋಟೋಗ್ರಫಿ ವೃತ್ತಿಯನ್ನು ಕೋಟ್ಯಂತರ ಕುಟುಂಬಗಳು ಅವಲಂಬಿಸಿ ಜೀವನ ಮಾಡುತ್ತಿವೆ. ಆದರೆ ನಮಗೆ ಯಾವುದೇ ರೀತಿಯ ಭದ್ರತೆ ಇಲ್ಲ, ಯಾರೂ ಗುರುತಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಫೋಟೋಗ್ರಫಿ ಮಾಡಿಕೊಂಡು ಅಂದಿನ ಜೀವನವನ್ನು ನಡೆಸಬಹುದು. ಆದರೆ ಯಾವುದೇ ರೀತಿಯ ಆಸ್ತಿ ಮಾಡಲಾಗುವುದಿಲ್ಲ ಎಂದು ಅವರು ತಿಳಿಸಿದರು.
ಮುಖಂಡರಾದ ಬಾವಿಕಟ್ಟೆ ಗಣೇಶ್ ಮಾತನಾಡಿ, ಫೋಟೋಗ್ರಾಫರ್‌ಗಳು ತುಮಕೂರಿಗೆ ಆಸ್ತಿ. ತುಮಕೂರಿನ ಇತಿಹಾಸ ತಿಳಿಸುವಲ್ಲಿ ಫೋಟೋಗ್ರಾಫರ್‌ಗಳ ಪಾತ್ರ ಮಹತ್ತರವಾಗಿದೆ. ಹಾಗಾಗಿ ಫೋಟೋಗ್ರಾಫರ್‌ಗಳು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಹೇಳಿದರು.ಛಾಯಾಗ್ರಾಹಕರಾದ ಮೋಹನ್ ಮಾತನಾಡಿ, ವಿಶ್ವ ಛಾಯಾಗ್ರಹಣ ದಿನ ಆಚರಿಸಲು ಲೂಯಿಸ್ ಡಾಗರೆ ಅವರು ಕಾರಣ, ಡಾಗರೆ ಅವರು ವಿಶ್ವಕ್ಕೆ ಫೋಟೋಗ್ರಫಿ ಎಂಬುದನ್ನು ಪರಿಚಯಿಸಿ ನಮ್ಮಂತಹ ಕೋಟ್ಯಂತರ ಜನರ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ಎಂದರು.
ಛಾಯಾಗ್ರಾಹಕರಾದ ಭಕ್ತವತ್ಸಲ ಮಾತನಾಡಿ, ಲೂಯಿಸ್ ಡಾಗರೆ ಅವರು ಪೇಟೆಂಟ್‌ನ್ನು ವಿಶ್ವಕ್ಕೆ ಉಚಿತವಾಗಿ ನೀಡಿದ್ದರಿಂದಲೇ ಇಂದು ವಿಶ್ವ ಛಾಯಾಗ್ರಾಹಣ ದಿನವನ್ನು ಆಚರಿಸುತ್ತಿದ್ದೇವೆ ಎಂದರು.ಛಾಯಾಗ್ರಾಹಕರಾದ ನವೀನ್ ಮಾತನಾಡಿ, ಆ. 23 ರಂದು ಛಾಯಾಗ್ರಹಣ ದಿನವನ್ನು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾ ಸಂಘ ಮತ್ತು ತಾಲೂಕು ಸಂಘದಿಂದ ನಿರ್ಧಾರ ಕೈಗೊಳ್ಳಲಾಗಿದೆ. ಅಂದು ಪ್ರತಿಭಾ ಪುರಸ್ಕಾರ, ಆರೋಗ್ಯ ತಪಾಸಣೆ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಪತ್ರಿಕಾ ಛಾಯಾಗ್ರಾಹಕರಾದ ಟಿ.ಎಚ್. ಸುರೇಶ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರಾದ ರೇಣುಕಾರಾಧ್ಯ, ಪೂಜಾ ನಾಗರಾಜು, ದಾದಾಪೀರ್, ನಿಸರ್ಗ ಶೇಖರ್, ಮನು ಸುರೇಶ್, ಪ್ರೀಮಿಯಂ ಪ್ರಕಾಶ್, ಬಿಸಿಎಸ್ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.