ಹಿರಿಯೂರಲ್ಲಿ ಭಿನ್ನಗೊಂಡ ಶ್ರೀರಾಮ ದೇಗುಲ ಇಲ್ಲ ದುರಸ್ತಿ ಭಾಗ್ಯ

| Published : Apr 01 2025, 12:47 AM IST

ಹಿರಿಯೂರಲ್ಲಿ ಭಿನ್ನಗೊಂಡ ಶ್ರೀರಾಮ ದೇಗುಲ ಇಲ್ಲ ದುರಸ್ತಿ ಭಾಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆ ವಿಸ್ತರಣೆಯ ಕಾರಣಕ್ಕಾಗಿ ನಗರದ ಮುಖ್ಯ ರಸ್ತೆಯಲ್ಲಿರುವ ಮಂದಿರದ ಮುಂಭಾಗ ಕೆಡವಿ ಬರೋಬ್ಬರಿ 5 ತಿಂಗಳಾಗಿ ರಾಮ ನವಮಿ ಹಬ್ಬ ಬಂದರೂ ಭಿನ್ನಗೊಂಡ ದೇವಾಲಯ ಹಾಗೇ ಇದೆ.

ರಸ್ತೆ ವಿಸ್ತರಣೆಗೆ ಮಂದಿರದ ಮುಂಭಾಗ ಭಗ್ನ । ಈ ಬಾರಿಯೂ ರಾಮ ನವಮಿ ಅನುಮಾನ । ಅಧಿಕಾರಿಗಳ ನಿರ್ಲಕ್ಷ್ಯ

ಕನ್ನಡಪ್ರಭ ವಾರ್ತೆ ಹಿರಿಯೂರು

ರಸ್ತೆ ವಿಸ್ತರಣೆಯ ಕಾರಣಕ್ಕಾಗಿ ನಗರದ ಮುಖ್ಯ ರಸ್ತೆಯಲ್ಲಿರುವ ಮಂದಿರದ ಮುಂಭಾಗ ಕೆಡವಿ ಬರೋಬ್ಬರಿ 5 ತಿಂಗಳಾಗಿ ರಾಮ ನವಮಿ ಹಬ್ಬ ಬಂದರೂ ಭಿನ್ನಗೊಂಡ ದೇವಾಲಯ ಹಾಗೇ ಇದೆ.

ಮೂಲತಃ ಸತ್ಯನಾರಾಯಣ ಸ್ವಾಮಿ ದೇಗುಲವಾದ ಇದರಲ್ಲಿ ಸತ್ಯ ನಾರಾಯಣ ಸ್ವಾಮಿಯ ಅಕ್ಕಪಕ್ಕ ಶ್ರೀರಾಮ ಮತ್ತು ಈಶ್ವರನ ವಿಗ್ರಹಗಳಿವೆ. ಮುಜರಾಯಿ ಇಲಾಖೆಗೆ ಸೇರಿದ ಈ ದೇವಸ್ಥಾನದಲ್ಲಿ ರಾಮನವಮಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. 9 ದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಶತಮಾನದ ಇತಿಹಾಸವಿರುವ ಈ ದೇಗುಲದಲ್ಲಿ ಈ ಬಾರಿ ನಡೆಯಲಿರುವುದು 97ನೇ ವರ್ಷದ ರಾಮೋತ್ಸವ ಕಾರ್ಯಕ್ರಮವಾಗಿದೆ. ಇದೀಗ ರಸ್ತೆ ವಿಸ್ತರಣೆಯ ಕಾರಣಕ್ಕೆ ದೇಗುಲದ ಮುಂಭಾಗ ಒಡೆದು ಹಾಕಿದ ಮೇಲೆ ಬಿದ್ದು ಹೋದ ಹಳೆಯ ಮನೆಯಂತೆ ಕಾಣುತ್ತಿರುವ ದೇವಸ್ಥಾನದ ಮುಂದೆ ಮತ್ತು ಪಕ್ಕ ಕಲ್ಲಂಗಡಿ ಹಣ್ಣಿನವರ ತ್ಯಾಜ್ಯ, ಪಾನಿಪುರಿ ಅಂಗಡಿಯವರ ತ್ಯಾಜ್ಯ ಹಾಗೂ ಬೀದಿ ನಾಯಿಗಳ ಹಾವಳಿಯಿಂದ ಶತಮಾನದ ದೇಗುಲದ ಅಂದವೇ ಕೆಟ್ಟು ಹೋಗಿದೆ.

ಪೂಜೆ ಪುನಸ್ಕಾರ ಮಾಡಿ ಒಡೆಯುವ ಬದಲು ತರಾತುರಿಯಲ್ಲಿ ಒಡೆದರು. ಮುಂಬಾಗಿಲು ಮತ್ತು ಅಕ್ಕಪಕ್ಕದ ರಕ್ಷಣಾ ಗೋಡೆ ಇಲ್ಲದಿರುವುದರಿಂದ ಹಳೆ ಕಾಲದ ಘಂಟೆ ಹಾಗೂ ಹುಂಡಿ ಕಳ್ಳತನವಾಗಿವೆ ಎಂಬುದು ಭಕ್ತರ ಆರೋಪವಾಗಿದೆ. ಮೊದಲೆಲ್ಲಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹಲವು ಕಾರ್ಯಕ್ರಮಗಳು ಹಾಗೂ ಗುರುರಾಜುಲು ನಾಯ್ದುರಂತಹ ವಿದ್ವಾಂಸರ ಕಾರ್ಯಕ್ರಮಗಳು ನಡೆಯುತ್ತಿದ್ದ ಮಂದಿರವೀಗ ಬಿಕೋ ಎನ್ನುತ್ತಿದೆ.

ನೂರಾರು ವರ್ಷಗಳ ಹಿಂದೆ ಮೋಕ್ಷಗುಂಡಂ ಶ್ರೀನಿವಾಸ ಅವಧಾನಿಗಳು ನಿರ್ಮಾಣ ಮಾಡಿದ್ದ ದೇವಸ್ಥಾನವನ್ನು 1994 ರಿಂದ 2007ರ ವರೆಗೆ ಜೀರ್ಣೋದ್ಧಾರ ಮಾಡಲಾಗಿತ್ತು. ಇದೀಗ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ದೇವಸ್ಥಾನವನ್ನು 5 ತಿಂಗಳಾದರೂ ರಿಪೇರಿ ಮಾಡದಿರುವುದು ಭಕ್ತರ ಬೇಸರಕ್ಕೆ ಕಾರಣವಾಗಿದೆ.

ಮುಜರಾಯಿ ಅಧಿಕಾರಿ ಹಾಗೂ ತಹಸೀಲ್ದಾರ್ ರಾಜೇಶ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಸತ್ಯನಾರಾಯಣ ದೇವಸ್ಥಾನದ ಮುಂಭಾಗವನ್ನು ರಸ್ತೆ ವಿಸ್ತರಣೆಗೆ ತೆರವುಗೊಳಿಸಿದ್ದು ಸಚಿವರು ಉಳಿದ ಭಾಗವನ್ನು ರಿಪೇರಿ ಮಾಡಿಸಿಕೊಡುವ ಸಂಪೂರ್ಣ ವೆಚ್ಚವನ್ನು ಭರಿಸುವ ಆಶ್ವಾಸನೆ ನೀಡಿದ್ದಾರೆ. ಅವರೇ ಅದರ ವೆಚ್ಚ ಭರಿಸಿ ಮತ್ತೆ ದೇವಸ್ಥಾನ ಅಂದಗೊಳಿಸುವ ಹೊಣೆ ಹೊತ್ತಿದ್ದು ಅವರೊಂದಿಗೆ ಮಾತನಾಡಿ ಆದಷ್ಟು ಬೇಗ ದೇಗುಲವನ್ನು ರಿಪೇರಿ ಮಾಡಿಸಲಾಗುವುದು ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಮಾತನಾಡಿ, ಸತ್ಯನಾರಾಯಣ ಸ್ವಾಮಿ, ಶ್ರೀರಾಮ, ಈಶ್ವರ ದೇವರ ಸಂಗಮವಾದ ಈ ದೇವಾಲಯ ಇದೀಗ ನೋಡಲಿಕ್ಕೆ ಬೇಸರವಾಗುವ ಪರಿಸ್ಥಿತಿಯಲ್ಲಿದೆ. ಪ್ರತಿ ವರ್ಷ ಶ್ರೀ ರಾಮ ನವಮಿಯ ಸಮಯದಲ್ಲಿ ಭಕ್ತರಿಂದ ತುಂಬಿರುತ್ತಿದ್ದ ದೇವಾಲಯದಲ್ಲಿ ಅನ್ನ ದಾಸೋಹ ಸಹ ನಡೆಯುತ್ತಿತ್ತು. ರಸ್ತೆ ವಿಸ್ತರಣೆ ಶುರು ಮಾಡಿದಾಗ ಒಂದು ಕಡೆಯಿಂದ ಕಟ್ಟಡಗಳನ್ನು ಕೆಡವಿಕೊಂಡು ಬರಬೇಕಿತ್ತು. ಆದರೆ ಮೊದಲ ಬಾರಿಗೆ ದೇವಸ್ಥಾನದ ಮುಂಭಾಗ ಕೆಡವಿದರು. ದೇವಸ್ಥಾನದ ಸುತ್ತ ಮುತ್ತ ಸ್ವಚ್ಛತೆ ಇಲ್ಲ. ಇದೀಗ ಮುಂಭಾಗ ಕೆಡವಿ 5 ತಿಂಗಳಾಗುತ್ತ ಬಂದರೂ ದೇವಾಲಯವನ್ನು ಮತ್ತೆ ದುರಸ್ಥಿಗೊಳಿಸುವ ಕೆಲಸಕ್ಕೆ ಕೈ ಹಾಕದಿರುವುದು ದುರಂತ ಎಂದರು.