ಸಾರಾಂಶ
- ಸಿದ್ದರಾಮಯ್ಯ ನಂತರ ಯಾರೆಂಬ ಚಿಂತೆ ಬಿಡಿ: ಶರಣಪ್ಪ ಸಲಹೆ । - ನೀವೂ ನಾಯಕರಾಗಿ ಶೀರ್ಷಿಕೆಯಡಿ ರಾಜಕೀಯ ಚಿಂತನ- ಮಂಥನ ಸಭೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯಕ್ಕೆ 2 ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ನಂತರ ಕುರುಬ ಸಮುದಾಯದಲ್ಲಿ ಎರಡನೇ ಹಂತದ ನಾಯಕರು ಮುಂಚೂಣಿಗೆ ಬರುತ್ತಿಲ್ಲವೆಂಬ ನೋವು, ಬೇಸರ ಕಾಡದಂತೆ ಸಮಾಜದ ಮುಂದಿನ ಪೀಳಿಗೆ ಸಕ್ರಿಯವಾಗಬೇಕು ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ಹೇಳಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಾಲುಮತ ಮಹಾಸಭಾ ಹಮ್ಮಿಕೊಂಡಿದ್ದ ನೀವೂ ನಾಯಕರಾಗಿ ಎಂಬ ರಾಜಕೀಯ ಚಿಂತನ- ಮಂಥನ ಸಭೆಯಲ್ಲಿ ಅವರು ಮಾತನಾಡಿದರು. ಸಿದ್ದರಾಮಯಯ್ಯ ನಂತರ ಇನ್ಯಾರು ಎಂಬ ಚಿಂತೆ ಕೈಬಿಟ್ಟು, ಸಮಾಜ ಸಂಘಟನೆಯಲ್ಲಿ ಕುರುಬ ಬಾಂಧವರು ತೊಡಗಬೇಕು ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಕುರುಬ ಸಮಾಜಕ್ಕೆ ಸಾಕಷ್ಟು ಅನುಕೂಲವಾಗಿದೆ. ಇಡೀ ರಾಜ್ಯದ ಸಂಖ್ಯಾಬಲದಲ್ಲಿ ಮುಂದಿರುವ ಕುರುಬ ಸಮುದಾಯ ಮನಸ್ಸು ಮಾಡಿದರೆ ಬೇಕಾದ್ದನ್ನು ಸಾಧಿಸಬಹುದು. ಈ ಹಿನ್ನೆಲೆ ಕುರುಬ ಸಮಾಜ ಬಾಂಧವರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮುಂಬರುವ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಪಕ್ಷಾತೀತವಾಗಿ ಕುರುಬ ಸಮಾಜದ ನಾಯಕರನ್ನು ಬೆಂಬಲಿಸುವ ಕೆಲಸವಾಗಬೇಕು. ಸಿದ್ದರಾಮಯ್ಯ 2 ಬಾರಿ ಮುಖ್ಯಮಂತ್ರಿಯಾಗುವ ಮೂಲಕ ಸಮಾಜಕ್ಕೆ ಸಾಕಷ್ಟು ಶಕ್ತಿ, ಉತ್ಸಾಹ ಮೂಡಿಸಿದ್ದಾರೆ. ಅದೇ ರೀತಿ ಸಮಾಜದ ಎರಡನೇ ಹಂತದ ನಾಯಕರು ಸಹ ಸಮಾಜದಲ್ಲಿ ಮುಂದೆ ಬರಬೇಕು ಎಂದರು.
ಮಹಾಸಭಾದ ರಾಜ್ಯ ಸಂಚಾಲಕ ರಾಜು ಮೌರ್ಯ ಮಾತನಾಡಿ, ಕುರುಬ ಸಮುದಾಯದಲ್ಲಿ ಒಳಪಂಗಡಗಳ ಗೊಂದಲವಿಲ್ಲ. ಈ ಕಾರಣದಿಂದ ಜಾತಿಗಣತಿ ವರದಿಯಲ್ಲಿ ಕುರುಬ ಸಮುದಾಯ ರಾಜ್ಯದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಮಾಜವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಆದರೆ, ಸಮಾಜದ ಬೆಂಬಲದೊಂದಿಗೆ ಸ್ಥಾನ ಅನುಭವಿಸಿದವರು ನಂತರ ಇತರೆ ನಾಯಕರನ್ನು ಬೆಳೆಸಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ನಮ್ಮದೇ ಸಮುದಾಯದವು ನಮ್ಮದೇ ಸಮುದಾಯದ ಮುಂದಿನ ಪೀಳಿಗೆಯನ್ನು ಬೆಳೆಸದಿರುವುದೇ ಕುರುಬ ಸಮುದಾಯ ಜನಸಂಖ್ಯೆಯಲ್ಲಿ ಮುಂದಿದ್ದರೂ ರಾಜಕೀಯ, ಸಾಮಾಜಿಕವಾಗಿ ಹೀನಾಯ ಸ್ಥಿತಿಯಲ್ಲಿದೆ. ಬೆಳಗಾವಿ ಭಾಗದಲ್ಲಿ ಕುರುಬ ಸಮುದಾಯವು ಸುಮಾರು 5 ಲಕ್ಷ ಜನಸಂಖ್ಯೆ ಇದ್ದರೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ದಕ್ಕಲಿಲ್ಲ. ಸ್ವಾತಂತ್ರ್ಯ ನಂತರ ಈವರೆಗೆ ಸಮಾಜದ 157 ಜನ ಮಾತ್ರ ಶಾಸಕರಾಗಿದ್ದಾರೆ ಎಂದು ಹೇಳಿದರು.
ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್‌ನಲ್ಲೂ ಕುರುಬ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಅರಣ್ಯಗಳಲ್ಲಿ ಕುರಿಗಳನ್ನು ಮೇಯಿಸಲು ಅವಕಾಶ ಕಲ್ಪಿಸುವಂತೆ ಸಾಕಷ್ಟು ಸಲ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸುತ್ತಲೇ ಇದ್ದರೂ ಕುರುಬ ಸಮಾಜದ 14 ಶಾಸಕರ ಪೈಕಿ ಯಾರೊಬ್ಬರೂ ಸದನದಲ್ಲಿ ಈ ವಿಚಾರದ ಬಗ್ಗೆ ಧ್ವನಿಯನ್ನೇ ಎತ್ತುತ್ತಿಲ್ಲ ಎಂದು ಕಿಡಿಕಾರಿದರು.ಗ್ರಾಪಂ, ತಾಪಂ, ಜಿಪಂ, ಪುರಸಭೆ, ಪಪಂ, ನಗರಸಭೆ, ಮಹಾ ನಗರ ಪಾಲಿಕೆಗಳಿಗೆ ಶೀಘ್ರವೇ ಚುನಾವಣೆ ಸಮೀಪಿಸುತ್ತಿವೆ. ಈ ಹಿನ್ನೆಲೆ ಚುನಾವಣೆ ತಯಾರಿ, ಸೋಷಿಯಲ್ ಮೀಡಿಯಾ, ಎಐ (ಆರ್ಟಿಫಿಷಿಯನ್ ಇಂಟೆಲಿಜೆನ್ಸ್) ಬಳಕೆ, ಕ್ಷೇತ್ರಗಳ ಸಮಸ್ಯೆ, ಮತದಾರರನ್ನು ತಲುಪುವ ವಿಚಾರಗಳ ಬಗ್ಗೆ, ವಿವಿಧ ಪಕ್ಷಗಳ ಸ್ಪರ್ಧಾಕಾಂಕ್ಷಿಗಳಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಿದೆ. ಎಲ್ಲ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ವಿವರ ಕ್ರೋಢೀಕರಿಸಿ, ಕುರುಬ ಸಮಾಜದವರಿಗೆ ಟಿಕೆಟ್ ನೀಡುವಂತೆ ಆಯಾ ಪಕ್ಷದ ರಾಜ್ಯಾಧ್ಯಕ್ಷರಿಗೆ ಮಹಾಸಭಾದಿಂದ ಒತ್ತಾಯಿಸಲಾಗುವುದು ಎಂದು ರಾಜು ಮೌರ್ಯ ವಿವರಿಸಿದರು.
ಮಹಾಸಭಾ ರಾಜ್ಯಾಧ್ಯಕ್ಷ ರುದ್ರಪ್ಪ ಗುಳಗಳಿ, ಜಿಲ್ಲಾಧ್ಯಕ್ಷ ಸಿ.ವೀರಣ್ಣ ಹಾಲೇಕಲ್ಲು, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಡಿ.ಮಾಳಗಿ, ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ, ಬಿಜೆಪಿ ಮುಖಂಡರಾದ ಐರಣಿ ಅಣ್ಣೇಶ, ಬಿ.ಎಂ.ಸತೀಶ ಕೊಳೇನಹಳ್ಳಿ, ಮುಖಂಡರಾದ ಪ್ರೊ.ಯಲ್ಲಪ್ಪ, ಸುವರ್ಣ ನಾಗರಾಜ, ದೀಟೂರು ಚಂದ್ರು, ಎಮ್ಮಿಹಟ್ಟಿ ಹನುಮಂತಪ್ಪ, ಓಂಕಾರಪ್ಪ, ದರ್ಶನ್, ವಿಜಯ್ ಕಟಗಿ, ಬಾಗಲಕೋಟೆ ರುದ್ರಪ್ಪ, ಗೋಪಾಲಪ್ಪ, ಗೂಳೆಪ್ಪ ಇತರರು ಇದ್ದರು.- - -
-25ಕೆಡಿವಿಜಿ4, 5.ಜೆಪಿಜಿ:ದಾವಣಗೆರೆಯಲ್ಲಿ ಭಾನುವಾರ ಹಾಲುಮತ ಮಹಾಸಭಾದಿಂದ ನೀವೂ ನಾಯಕರಾಗಿ ಶೀರ್ಷಿಕೆಯಡಿ ರಾಜಕೀಯ ಚಿಂತನ- ಮಂಥನ ಸಭೆ ನಡೆಯಿತು.
;Resize=(128,128))
;Resize=(128,128))
;Resize=(128,128))