ಜಿಲ್ಲಾಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಜಿಲ್ಲೆಯಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಇಲ್ಲ. ಬುಕಿಂಗ್ ಮಾಡಿದವರಿಗೆ ನಿಯಮಾನುಸಾರ ಗ್ಯಾಸ್ ಸಿಲಿಂಡರ್‌ಗಳನ್ನು ಪೂರೈಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ ಹೇಳಿದರು.
ಜಿಲ್ಲೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಎದುರಾದ ಅಡಚಣೆಗಳಿಗೆ ಸಂಬಂಧಿಸಿದಂತೆ ನಿಯಂತ್ರಣ ಮತ್ತು ಮೇಲ್ವಿಚಾರಣೆ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿ ಗ್ರಾಹಕರಲ್ಲಿ ಯಾವುದೇ ಆತಂಕ ಬೇಡ. ವದಂತಿಗಳಿಗೆ ಒಳಗಾಗಿ ಅಗತ್ಯವಿಲ್ಲದಿದ್ದರೂ ಅನವಶ್ಯಕವಾಗಿ ಬುಕಿಂಗ್ ಮಾಡುವುದರಿಂದ ವಿತರಣೆ ಕಾರ್ಯದಲ್ಲಿ ಒತ್ತಡ ಉಂಟಾಗುತ್ತಿದೆ ಎಂದರು.ಗೃಹಬಳಕೆ ಗ್ಯಾಸ್ ಸಿಲಿಂಡರ್ ಬುಕಿಂಗ್ ಸಂಬಂಧ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಒಂದು ಸಿಲಿಂಡರ್ ಹೊಂದಿರುವವರು 25 ದಿನಕ್ಕೊಮ್ಮೆ, ಎರಡು ಸಿಲಿಂಡರ್ ಹೊಂದಿರುವವರು 35 ದಿನಕ್ಕೊಮ್ಮೆ ಹಾಗೂ ಉಜ್ವಲ ಯೋಜನೆ ಯಡಿ ಗ್ಯಾಸ್ ಸಂಪರ್ಕ ಹೊಂದಿದ ಫಲಾನುಭವಿಗಳು 45 ದಿನಗಳಿಗೊಮ್ಮೆ ಮಾತ್ರ ಸಿಲಿಂಡರ್ ಬುಕ್ ಮಾಡಲು ಅವಕಾಶವಿದೆ ಎಂದು ತಿಳಿಸಿದರು.ಸಾರ್ವಜನಿಕರು ಯಾವುದೇ ರೀತಿ ಗೊಂದಲ ಅಥವಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲದಿದ್ದರೂ ಕೆಲವರು ಅನವಶ್ಯಕ ಮುಂಗಡ ಬುಕಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಸರಬರಾಜು ಮೇಲಿನ ಒತ್ತಡ ಹೆಚ್ಚಾಗುತ್ತಿದೆ. ಇತರ ಗ್ರಾಹಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಅದ್ದರಿಂದ ಅಗತ್ಯವಿರುವಾಗ ಮಾತ್ರ ಗ್ಯಾಸ್ ಬುಕ್ ಮಾಡುವಂತೆ ತಿಳಿಸಿದರು.ಸುಳ್ಳು ಮಾಹಿತಿ ಹರಡಿ ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು. ಗೃಹ ಬಳಕೆ ಸಿಲಿಂಡರ್ ದುರುಪಯೋಗವಾಗದಂತೆ ಎಚ್ಚರ ವಹಿಸಬೇಕು. ಗ್ರಾಹಕರಿಗೆ ಸಿಲಿಂಡರ್ ಬಳಕೆ ಕುರಿತು ಸರಿಯಾದ ಮಾಹಿತಿ ನೀಡಬೇಕು. ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಮೊದಲು ಬುಕ್ ಮಾಡಿದವರಿಗೆ ಮೊದಲ ಆದ್ಯತೆ ನೀಡಬೇಕು. ಸಾರ್ವಜನಿಕರಲ್ಲಿ ಯಾವುದೇ ರೀತಿ ಗೊಂದಲವುಂಟಾಗದಂತೆ ಎಚ್ಚರಿಕೆ ವಹಿಸಬೇಕೆಂದು ಗ್ಯಾಸ್ ಏಜೆನ್ಸಿಯವರಿಗೆ ಸೂಚಿಸಿದರು.ಬುಕಿಂಗ್ ಮಾಡಿದ ಎಲ್ಲರಿಗೂ ಜೇಷ್ಠತೆ ಅನುಸಾರ ಸಿಲಿಂಡರ್ ವಿತರಿಸಬೇಕು. ವಿಳಂಬವಾದಲ್ಲಿ ಗ್ರಾಹಕರಿಗೆ ತಿಳಿಸಬೇಕು. ಸಕಾಲದಲ್ಲಿ ಮಾಹಿತಿ ನೀಡುವ ಮೂಲಕ ಗ್ರಾಹಕರು ಯಾವುದೇ ರೀತಿ ಗೊಂದಲಗಳಿಗೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಏಜೆನ್ಸಿಗಳ ಮಾಲೀಕರಿಗೆ ತಿಳಿಸಿದರು.ಹೆಚ್ಚುವರಿ ಹಣ ಕೇಳಿದರೆ, ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಸಿಲಿಂಡರ್ ಮಾರಾಟ ಕಂಡು ಬಂದಲ್ಲಿ ಸರ್ಕಾರದ ನಿಯಮಾವಳಿ ಪ್ರಕಾರ ಏಜೆನ್ಸಿ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಯೋಗಾನಂದ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಲತಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥ್‌ಬಾಬು, ಗ್ಯಾಸ್ ಏಜೆನ್ಸಿಗಳ ಮಾಲೀಕರು ಹಾಗೂ ವಿತರಕರು ಸಭೆಯಲ್ಲಿ ಹಾಜರಿದ್ದರು.