-ಎಇಇ ರಾಜಕುಮಾರ ಜಲದೆ ಸ್ಪಷ್ಟನೆ । ಕುಡಿವ ನೀರಿಗಾಗಿ ಅಮರ್ಜಾ ಅಣೆಕಟ್ಟಿಯಲ್ಲಿ ಶೇ.57 ನೀರು ಸಂಗ್ರಹ ।
-----ಕನ್ನಡಪ್ರಭ ವಾರ್ತೆ ಆಳಂದ
ಮಳೆ ಕೊರತೆಯಿಂದ ಕಳೆದ 35 ದಿನಗಳಿಂದ ಅಮರ್ಜಾ ಅಣೆಕಟ್ಟಿಗೆ ಗಮನಾರ್ಹ ಒಳಹರಿವು ಆಗದಿದ್ದರೂ, ಅಣೆಕಟ್ಟಿನಲ್ಲಿ ಶೇ.57ರಷ್ಟು ನೀರು ಸಂಗ್ರಹವಿರುವುದರಿಂದ ಆಳಂದ, ಕಡಗಂಚಿ ಬಳಿಯ ಸಿಯುಕೆಗೆ ಕುಡಿವ ನೀರಿನ ಕೊರತೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಆಳಂದ ಪಟ್ಟಣದ ಕುಡಿವ ನೀರಿನ ಮೂಲ ಅಮರ್ಜಾ ಅಣೆಕಟ್ಟಿನಲ್ಲಿ ಇನ್ನೂ ಸಾಕಷ್ಟು ನೀರು ಲಭ್ಯವಿರುವ ಹಿನ್ನೆಲೆ ಮುಂದಿನ ದಿನಗಳಲ್ಲಿ ಕುಡಿವ ನೀರಿನ ಪೂರೈಕೆಗೆ ಅಗತ್ಯ ಸಂಗ್ರಹವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹೀಗಾಗಿ ನೀರಿನ ಅಭಾವದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಜನರ ಸಂಕಷ್ಟ: ಅಣೆಕಟ್ಟಿನಲ್ಲಿ ನೀರಿನ ಕೊರತೆ ಇಲ್ಲದಿದ್ದರೂ, ಆಳಂದಲ್ಲಿ ನೀರು ಸಂಗ್ರಹಿಸಿ ಸಮರ್ಪಕವಾಗಿ ಪೂರೈಕೆ ಮಾಡುವ ಸಾಮರ್ಥ್ಯದ ಟ್ಯಾಂಕ್‍ಗಳ ಕೊರತೆ ಮುಂದುವರಿದಿದೆ. ಈ ಕಾರಣದಿಂದ ವಾರಕ್ಕೊಮ್ಮೆ ನೀಡಬೇಕಾದ ನೀರು ಪೂರೈಕೆ 10 ದಿನಗಳಿಗೊಮ್ಮೆ ನಡೆಯುತ್ತಿದೆ.
ಮಳೆಗಾಲದಲ್ಲಿಯೂ ಮನೆಗಳಿಗೆ ನಿರಂತರ ನೀರು ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಹಕರು ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿಯೂ ನೀರು ಪೂರೈಕೆ ಅಸ್ಥಿರವಾಗಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.
ಒಳಹರಿವು ಕಡಿಮೆ: ಕಳೆದ ನಾಲ್ಕು ತಿಂಗಳ ಬೇಸಿಗೆಯ ನಂತರ ಚಳಿಗಾಲ ಸೇರಿ ಒಟ್ಟು ಎಂಟು ತಿಂಗಳಿನಿಂದ ಅಮರ್ಜಾ ಅಣೆಕಟ್ಟಿಗೆ ಹೇಳಿಕೊಳ್ಳುವಂತ ಒಳಹರಿವು ಆಗಿಲ್ಲ. ಆದಾಗ್ಯೂ ಸಂಗ್ರಹಿತ ನೀರಿನಿಂದ ಬೇಸಿಗೆಯಲ್ಲಿ ರೈತರ ಅನುಕೂಲಕ್ಕಾಗಿ ಕೆಲವು ದಿನಗಳ ಕಾಲ ಕಾಲುವೆಗಳಿಗೆ ನೀರು ಹರಿಸಲಾಗಿತ್ತು.ಈ ಬಾರಿ ಮಳೆ ವಿಳಂಬವಾಗುತ್ತಿರುವ ಹಿನ್ನೆಲೆ ಕುಡಿವ ನೀರಿನ ಸಂಗ್ರಹ ಕಾಪಾಡಲು ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಅಣೆಕಟ್ಟಿನಲ್ಲಿ ಉಳಿದಿರುವ ಶೇ.57ರಷ್ಟು ನೀರನ್ನು ಮುಂದಿನ ದಿನಗಳ ಕುಡಿವ ನೀರಿನ ಪೂರೈಕೆಗೆ ಜಿಲ್ಲಾಡಳಿತ ಮೀಸಲಿಟ್ಟಿದೆ.
ನೀರು ಪೂರೈಕೆ ಸಾಮರ್ಥ್ಯ: ಅಮೃತ್ 2.0 ಯೋಜನೆಯನ್ನು 2040 ಹಾಗೂ 2055ನೇ ಸಾಲಿನ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಪ್ರಸ್ತುತ ದಿನಕ್ಕೆ 5.4 ಮಿಲಿಯನ್ ಲೀಟರ್ ನೀರು ಪೂರೈಕೆ ಸಾಮರ್ಥ್ಯ ಇರುವ ವ್ಯವಸ್ಥೆಯನ್ನು 11.5 ಮಿಲಿಯನ್ ಲೀಟರ್‌ಗೆ ವಿಸ್ತರಿಸುವ ಗುರಿ ಹೊಂದಿದೆ.ಯೋಜನೆ ಪೂರ್ಣಗೊಂಡ ಬಳಿಕ ಪ್ರತಿಯೊಬ್ಬ ನಾಗರಿಕರಿಗೆ ದಿನಂಪ್ರತಿ ತಲಾ 135 ಲೀಟರ್ ನೀರನ್ನು ನಿರಂತರ ಪೂರೈಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನರ ನಿರೀಕ್ಷೆ: ಆಳಂದ ಜನರು ಪ್ರತಿದಿನ ನಿಯಮಿತ ನೀರು ಪೂರೈಕೆಯ ಕನಸನ್ನು ಸಾಕಾರಗೊಳಿಸಲು ಅಮೃತ್ 2.0 ಯೋಜನೆ ಶೀಘ್ರ ಪೂರ್ಣಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅಣೆಕಟ್ಟಿನಲ್ಲಿ ನೀರು ಲಭ್ಯವಿದ್ದರೂ ಪೂರೈಕೆ ವ್ಯವಸ್ಥೆಯ ದೌರ್ಬಲ್ಯದಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಯೋಜನೆ ಪೂರ್ಣಗೊಂಡ ಬಳಿಕ ಶಾಶ್ವತ ಪರಿಹಾರ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.....ಕೋಟ್....
ಕುಡಿಯಲು ನೀರು ಲಭ್ಯ: ಅಮರ್ಜಾ ಅಣೆಕಟ್ಟಿನಲ್ಲಿ ಪ್ರಸ್ತುತ ಶೇ.57ರಷ್ಟು ನೀರು ಸಂಗ್ರಹವಿದ್ದು, ಆಳಂದ ಹಾಗೂ ಸಿಯುಕೆ ಸೇರಿದಂತೆ ಅವಲಂಬಿತ ಪ್ರದೇಶಗಳ ಕುಡಿವ ನೀರಿನ ಅಗತ್ಯ ಪೂರೈಸಲು ಸಾಕಷ್ಟು ಸಂಗ್ರಹವಿದೆ. ಕಳೆದ 35 ದಿನಗಳಿಂದ ಗಮನಾರ್ಹ ಮಳೆಯಾಗದಿದ್ದರೂ ಹಾಗೂ ಅಣೆಕಟ್ಟೆಗೆ ಒಳಹರಿವು ಇಲ್ಲದಿದ್ದರೂ ಕುಡಿವ ನೀರಿನ ಕೊರತೆ ಉಂಟಾಗುವ ಪರಿಸ್ಥಿತಿ ಇಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿ, ಲಭ್ಯವಿರುವ ನೀರನ್ನು ಕುಡಿವ ಉದ್ದೇಶಕ್ಕೆ ಮೀಸಲಿರಿಸಲಾಗಿದೆ.-ರಾಜಕುಮಾರ ಜಲದೆ, ಎಇಇ ಅಮರ್ಜಾ ಅಣೆಕಟ್ಟೆ.
--..ಕೋಟ್..
ಆಳಂದದಲ್ಲಿ ನೀರಿನ ಮೂಲದ ಕೊರತೆ ಇಲ್ಲ. ಆದರೆ, ನೀರು ಸಂಗ್ರಹ ಹಾಗೂ ವಿತರಣಾ ವ್ಯವಸ್ಥೆಯ ಸಾಮರ್ಥ್ಯ ಸೀಮಿತವಾಗಿರುವುದರಿಂದ ಪ್ರತಿದಿನ ಅಥವಾ ಅಗತ್ಯವಿದ್ದಾಗ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಅಮೃತ್ 2.0 ಯೋಜನೆಯಡಿ ಸಮಗ್ರ ನೀರು ಸರಬರಾಜು ಕಾಮಗಾರಿ ನಡೆಯುತ್ತಿದೆ. ಯೋಜನೆ ಪೂರ್ಣಗೊಂಡ ಬಳಿಕ ಮನೆಮನೆಗೆ ಸಮರ್ಪಕ ಒತ್ತಡದೊಂದಿಗೆ ನಿರಂತರ ಕುಡಿವ ನೀರು ಪೂರೈಕೆ ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.-ಸಂಗಮೇಶ ಪನಶೆಟ್ಟಿ, ಪುರಸಭೆ ಮುಖ್ಯಾಧಿಕಾರಿಗಳು ಆಳಂದ.
----..ಬಾಕ್ಸ್.....ಅಮೃತ್ 2.0 ಯೋಜನೆಗೆ ರು.85.86 ಕೋಟಿಆಳಂದ ಪಟ್ಟಣದ ದೀರ್ಘಕಾಲದ ನೀರು ಪೂರೈಕೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕೇಂದ್ರ ಪುರಸ್ಕ್ರತ ಅಮೃತ್ 2.0 ಯೋಜನೆಯಡಿ ರು.85.86 ಕೋಟಿ ವೆಚ್ಚದಲ್ಲಿ ಸಮಗ್ರ ನೀರು ಸರಬರಾಜು ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗಿದೆ.ಈ ಯೋಜನೆಗೆ 2023ರ ಮಾರ್ಚ್ 28ರಂದು ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, 2024ರ ಮೇ 23ರಂದು ಗುತ್ತಿಗೆ ನೀಡಲಾಗಿದೆ. 2024ರ ಆಗಸ್ಟ್ 14ರಂದು ಕಾಮಗಾರಿ ಆರಂಭಗೊಂಡಿದ್ದು, 2026ರ ಆಗಸ್ಟ್ 14ರೊಳಗೆ ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ.ಆದರೆ, ಕಾಮಗಾರಿ ಪ್ರಗತಿ ನಿಧಾನವಾಗಿರುವುದರಿಂದ ಆಮೆ ಹೆಜ್ಜೆಯಲ್ಲಿ ಸಾಗುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.-----