ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಕೊರತೆಯಿಲ್ಲ: ಶಾಸಕ ದರ್ಶನ್ ಧ್ರುವನಾರಾಯಣ

| Published : Aug 08 2025, 01:00 AM IST

ಸಾರಾಂಶ

ತಾಲೂಕಿನ ಬಳ್ಳೂರುಹುಂಡಿ ಮತ್ತು ಹೊಸವೀಡುಹುಂಡಿ ಗ್ರಾಮಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸ್ಮಾರ್ಟ್ ಕ್ಲಾಸ್ ತರಗತಿಗಳನ್ನು ಉದ್ಘಾಟಿಸಲಾಗಿದೆ .

ಕನ್ನಡಪ್ರಭ ವಾರ್ತೆ ನಂಜನಗೂಡು

ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವಿಲ್ಲ ಎಂಬ ಪ್ರತಿಪಕ್ಷಗಳ ಅಪಪ್ರಚಾರಕ್ಕೆ, ಮತದಾರರು ಕಿವಿಗೊಡಬೇಡಿ ಎಂದು ಶಾಸಕ ದರ್ಶನ್ ದ್ರುವನಾರಾಯಣ ಹೇಳಿದರು.

ತಾಲೂಕಿನ ಕಾಡಂಚಿನ ಗ್ರಾಮಗಳಾದ ಹೆಡಿಯಾಲ, ಮಹದೇವನಗರ, ಮಡುವಿನಹಳ್ಳಿ, ಬಂಕಹಳ್ಳಿ ಗ್ರಾಮಗಳಲ್ಲಿ 1.85 ಕೋಟಿ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅನುದಾನವಿದೆ ಎಂಬುದಕ್ಕೆ ನಂಜನಗೂಡು ಕ್ಷೇತ್ರದಲ್ಲಿ ನಿರಂತರವಾಗಿ ಚಾಲನೆಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳೇ ಸಾಕ್ಷಿಯಾಗಿದೆ ಎಂದು ಶಾಸಕ ದರ್ಶನ್ ದ್ರುವನಾರಾಯಣ ಹೇಳಿದರು.

ನಿಮ್ಮೆಲ್ಲರ ಆಶೀರ್ವಾದದಿಂದಾಗಿ ನಾನು ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಕ್ಷೇತ್ರದ ಜನರಲ್ಲಿ ನನ್ನ ತಂದೆ ತಾಯಿಯನ್ನು ಕಾಣುತ್ತಾ ನಿಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ, ನನಗೆ ಮತ ನೀಡಿದ ಕ್ಷೇತ್ರದ ಮತದಾರರು ಮುಖ್ಯ, ಆದ್ದರಿಂದ ನಿಮ್ಮ ಸೇವೆಯನ್ನು ನನ್ನ ಉಸಿರಿರುವ ತನಕ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಬಡವರು ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ. ನಮ್ಮ ಸರ್ಕಾರ ಅಭಿವೃದ್ಧಿ ಕೆಲಸಗಳಲ್ಲೂ ಹಿಂದೆ ಬಿದ್ದಿಲ್ಲ, ನಂಜನಗೂಡು ಕ್ಷೇತ್ರವೊಂದಕ್ಕೆ ಕಳೆದ ಎರಡು ವರ್ಷಗಳಲ್ಲಿ ಸುಮಾರು ರು. 450 ಕೋಟಿಗಿಂತಲೂ ಹೆಚ್ಚು ಅನುದಾನ ಬಂದಿದೆ ಎಂದರು.

ಸ್ಮಾರ್ಟ್ ಕ್ಲಾಸ್ ತರಗತಿಗಳ ಉದ್ಘಾಟನೆ

ತಾಲೂಕಿನ ಬಳ್ಳೂರುಹುಂಡಿ ಮತ್ತು ಹೊಸವೀಡುಹುಂಡಿ ಗ್ರಾಮಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸ್ಮಾರ್ಟ್ ಕ್ಲಾಸ್ ತರಗತಿಗಳನ್ನು ಉದ್ಘಾಟಿಸಲಾಗಿದೆ ಎಂದು ಅವರು ತಿಳಿಸಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ಮುಖಂಡರಾದ ಎಂ.ಎಸ್. ನಾಗೇಶ್, ಸತೀಶ್, ಗೋವಿಂದರಾಜು, ಸುರೇಶ್, ಶಿವನಾಗಪ್ಪ, ಮಹದೇವು, ಹಾಡ್ಯ ಗ್ರಾಪಂ ಅಧ್ಯಕ್ಷ ಹರೀಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸತೀಶ, ಕೆಆರ್ ಐಡಿಎಲ್ ಸಂಸ್ಥೆಯ ಎಇ ಶರಣ್, ಪುರುಷೋತ್ತಮ್, ಹ್ಯಾಪಿಟೆಟ್ ಇಲಾಖೆಯ ಎಇಇ ಪವನ್, ಎಇ ಜೀವನ್, ಗುತ್ತಿಗೆದಾರ ಜಿ.ಎ. ವೆಂಕಟೇಶ್, ಪಿಡಿಒ ಕರಿಯಪ್ಪ, ಕಂದಾಯ ಇಲಾಖೆ ಆರ್ಐ ಪ್ರಕಾಶ್ ಇದ್ದರು.