ಸಾರಾಂಶ
District In-charge Minister Ishwar Khandre at a press conference at Nehru Stadium, Bidar.
ಕನ್ನಡಪ್ರಭ ವಾರ್ತೆ ಬೀದರ್
ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಅನುಭವ ಮಂಟಪಕ್ಕೆ ಅನುದಾನದ ಕೊರತೆ ಇಲ್ಲ ಹೀಗಾಗಿ ಅದನ್ನು ಪೂರ್ಣಗೊಳಿಸಿ 2025 ರ ಡಿಸೆಂಬರ್ ತಿಂಗಳಲ್ಲಿ ಉದ್ಘಾಟಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.ನಗರದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಅನುಭವ ಮಂಟಪಕ್ಕೆ 300 ಕೋಟಿ ರು. ಅನುದಾನ ಬಂದಿದೆ ಎಂದರು.
ಕಟ್ಟಡ ನಿರ್ಮಾಣಕ್ಕೆ ಗುಣಮಟ್ಟದ ಕಲ್ಲುಗಳು ಸಿಗುತ್ತಿಲ್ಲ ಎಂದು ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದೆ. ಆದ್ದರಿಂದ ಗುಣಮಟ್ಟದ ಕಲ್ಲುಗಳನ್ನೆ ಬಳಸಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ ಎಂದರು.ಇಲ್ಲಿಯವರೆಗೆ ಶೇ.48 ರಷ್ಟು ಕಾಮಗಾರಿ ಮುಗಿದಿದೆ. ಇನ್ನು ಶೇ.52ರಷ್ಟು ಕಾಮಗಾರಿ ಆಗಬೇಕಾಗಿದೆ. ಆದಷ್ಟು ಶೀಘ್ರವೇ ಕಾಮಗಾರಿ ಸಂಪೂರ್ಣಗೊಳಿಸಿ ಮುಂದಿನ 2025ರಲ್ಲಿ ಉದ್ಘಾಟನೆ ಮಾಡಲಾಗುವುದು ಎಂದು ಸಚಿವ ಖಂಡ್ರೆ ಸ್ಪಷ್ಟಪಡಿಸಿದರು.
ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬೀದರ್ ನಗರ ಸಭೆಯನ್ನು ಮಹಾ ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ಸಂಭವ ಇದೆ. ಬೀದರ್ ನಗರದಲ್ಲಿ ಜಿಲ್ಲಾ ಸಂಕೀರ್ಣಕ್ಕೆ ಅನುದಾನ, ಅರಣ್ಯ ಇಲಾಖೆ, ನೀರಾವರಿ ಇಲಾಖೆ ಹೀಗೆ ಸರ್ವಾಂಗೀಣ ಅಭಿವೃದ್ಧಿಗೆ ಸಚಿವ ಸಂಪುಟ ಸಭೆ ಪೂರಕವಾಗಲಿದೆ ಎಂದು ಸಚಿವ ಖಂಡ್ರೆ ಹೇಳಿದರು.ಈ ವೇಳೆ ಸಂಸದ ಸಾಗರ ಖಂಡ್ರೆ, ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ.ಗಿರೀಶ ಬದೋಲೆ ಹಾಗು ಎಸ್‌ಪಿ ಪ್ರದೀಪ ಗುಂಟಿ ಇದ್ದರು.