ಸಾರಾಂಶ
ಪೂರ್ವ ಮಾನ್ಸೂನ್ ಮಳೆಯಿಂದ ಜಿಲ್ಲೆಯ ವಿವಿಧೆಡೆ ಮಳೆಯಿಂದ ರೈತರ ಬೆಳೆಗಳಿಗೆ ಹಾನಿಯಾಗಿತ್ತು, ಈ ರೈತರ ಪೈಕಿ ಮೊದಲ ಹಂತದಲ್ಲಿ 98 ರೈತರ 76.99 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯ ಪರಿಹಾರವಾಗಿ 13,24,165 ರು.ಗಳನ್ನು ಸಂತ್ರಸ್ತ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ರೈತರಿಗೂ ಸಹ ಪರಿಹಾರ ಜಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಪ್ರಸ್ತುತ 3,150 ಮೆಟ್ರಿಕ್ ಟನ್ ನಷ್ಟು ಲಭ್ಯ । ಕಾಲೋಚಿತವಾಗಿ ಪೂರೈಸಲು ಜಿಲ್ಲಾಡಳಿತ ಕ್ರಮ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯುರಿಯಾ ರಸ ಗೊಬ್ಬರದ ದಾಸ್ತಾನು ಪ್ರಸ್ತುತ 3,150 ಮೆಟ್ರಿಕ್ ಟನ್ ನಷ್ಟು ಲಭ್ಯವಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರೈತರು ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ವಿಪತ್ತು ನಿರ್ವಹಣಾ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಮಾತನಾಡಿದರು.
ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಶೇ.16 ರಷ್ಟು ಹೆಚ್ಚು ಮಳೆಯಾಗಿದೆ, ಈ ಕಾಲಾವಧಿಗೆ 251 ಮಿಮೀ ವಾಡಿಕೆ ಮಳೆ ಇದ್ದು, ಈವರೆಗೂ 291 ಮಿಮೀ ವರೆಗೆ ಮಳೆಯಾಗಿದೆ. ಮಳೆ ಉತ್ತಮವಾಗಿರುವುದರಿಂದ ಭಿತ್ತನೆ ಕಾರ್ಯಗಳು ಜಿಲ್ಲೆಯಲ್ಲಿ ಚುರುಕಾಗಿದ್ದು, ರೈತರು ಈಗಾಗಲೇ 8,900 ಮೆಟ್ರಿಕ್ ಟನ್ ರಸಗೊಬ್ಬರವನ್ನು ಖರೀದಿಸಿ ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಿದ್ದಾರೆ. ಪ್ರಸ್ತುತ 3,150 ಮೆಟ್ರಿಕ್ ಟನ್ ಯುರಿಯಾ ಗೊಬ್ಬರದ ದಾಸ್ತಾನು ಜಿಲ್ಲೆಯಲ್ಲಿ ಲಭ್ಯವಿದೆ. ಜೊತೆಗೆ ರೈತರ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಕಾಲೋಚಿತವಾಗಿ ಪೂರೈಕೆ ಮಾಡಲು ಜಿಲ್ಲಾಡಳಿತ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗಬಾರದು:
ಜಿಲ್ಲೆಯಲ್ಲಿ ಪ್ರಸ್ತುತ 27 ಗ್ರಾಮಗಳಿಗೆ ಹಾಗೂ 25 ವಾರ್ಡ್ ಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪಡೆದು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆಬಾರದಿದ್ದಲ್ಲಿ 26 ವಾರ್ಡ್ ಗಳು ಹಾಗೂ 164 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಈಗಾಗಲೇ 66 ಖಾಸಗಿ ಕೊಳವೆ ಬಾವಿ ಮಾಲೀಕರೊಂದಿಗೆ ಮುನ್ನೆಚ್ಚರಿಕೆಯಾಗಿ ಒಪ್ಪಂದ ಮಾಡಿಕೊಂಡಿದ್ದು, ನೀರು ಪೂರೈಕೆ ಮಾಡಲು ಸಹಕಾರ ನೀಡುವಂತೆ ಕೊರಲಾಗಿದೆ. ಒಟ್ಟಾರೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗಬಾರದು, ಆ ನಿಟ್ಟಿನಲ್ಲಿ ಅಧಿಕಾರಿಗಳು ನಿಗಾವಹಿಸಲು ಸೂಚಿಸಿದರು.ಮಳೆ ಹಾನಿ ನೆರವಿಗೆ ಸಹಾಯವಾಣಿ:
ಮಳೆಯಿಂದಾಗಿ ಯಾವುದೇ ರೀತಿಯ ಹಾನಿಯಾದಲ್ಲಿ ಜಿಲ್ಲಾಡಳಿತವು ತಾಲೂಕುವಾರು ತೆರೆದಿರುವ ಸಹಾಯವಾಣಿಗಳಿಗೆ ಕರೆಮಾಡಿ ನೆರವು ಪಡೆದುಕೊಳ್ಳಬಹುದು.ತಾಲೂಕುವಾರು ಸಹಾಯವಾಣಿ ವಿವರ:
ಜಿಲ್ಲಾಧಿಕಾರಿಗಳ ಕಚೇರಿ- 08156- 277071, ಬಾಗೇಪಲ್ಲಿ- 08150- 200127, ಚಿಕ್ಕಬಳ್ಳಾಪುರ- 08156- 272564, ಚಿಂತಾಮಣಿ- 08154- 252164, ಗೌರಿಬಿದನೂರು- 6360184832, ಗುಡಿಬಂಡೆ- 08156 - 271250, ಶಿಡ್ಲಘಟ್ಟ- 08158- 256764, ಮಂಚೇನಹಳ್ಳಿ- 9449137144 ಮತ್ತು ಚೇಳೂರು- 9945250817, 9535955223 ಗೆ ಸಂಪರ್ಕಿಸಬಹುದು.98 ರೈತರಿಗೆ ಮಳೆ ಹಾನಿ ಪರಿಹಾರ:
ಪೂರ್ವ ಮಾನ್ಸೂನ್ ಮಳೆಯಿಂದ ಜಿಲ್ಲೆಯ ವಿವಿಧೆಡೆ ಮಳೆಯಿಂದ ರೈತರ ಬೆಳೆಗಳಿಗೆ ಹಾನಿಯಾಗಿತ್ತು, ಈ ರೈತರ ಪೈಕಿ ಮೊದಲ ಹಂತದಲ್ಲಿ 98 ರೈತರ 76.99 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯ ಪರಿಹಾರವಾಗಿ 13,24,165 ರು.ಗಳನ್ನು ಸಂತ್ರಸ್ತ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ರೈತರಿಗೂ ಸಹ ಪರಿಹಾರ ಜಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಬೆಳೆ ಹಾನಿಯಾದಲ್ಲಿ, ಮನೆ ಹಾನಿಯಾದಲ್ಲಿ, ಇನ್ನಿತರ ಮಳೆ ಹಾನಿಯಾದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಜಂಟಿ ಸಮೀಕ್ಷೆ ನಡೆಸಿ ಮಾಹಿತಿಯನ್ನು ಆನ್ ಲೈನ್ ನಲ್ಲಿ ನಮೂದಿಸಿ ಸಂತ್ರಸ್ತರಿಗೆ ಪರಿಹಾರವನ್ನು ತ್ವರಿತವಾಗಿ ನೀಡಲು ಜಿಲ್ಲಾಡಳಿತ ಕ್ರಮ ವಹಿಸುತ್ತಿದೆ ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.