ಸಾರಾಂಶ
- ತಪ್ಪು ಕಲ್ಪನೆಯಿಂದ ಹೆಚ್ಚು ಯೂರಿಯಾ ಬಳಕೆ: ಸಭೆಯಲ್ಲಿ ಶಾಂತನಗೌಡ ಹೇಳಿಕೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ, ನ್ಯಾಮತಿ ತಾಲೂಕುಗಳಲ್ಲಿ ಯೂರಿಯಾ ರಸಗೊಬ್ಬರ ಕೊರತೆ ಇಲ್ಲ. ರೈತರು ಈ ಬಗ್ಗೆ ಆತಂಕಪಡುವ ಅಗತ್ಯ ಇಲ್ಲ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.ಸೋಮವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಯೂರಿಯಾ ರಸಗೊಬ್ಬರ ಸಿಗುತ್ತಿಲ್ಲ ಎಂಬ ಬಗ್ಗೆ ಕೂಗು ಕೇಳಿಬರುತ್ತಿದೆ. ಈ ಹಿನ್ನೆಲೆ ಸಂಬಂಧಪಟ್ಟ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ, ಮುಂಗಾರು ಹಂಗಾಮಿನಲ್ಲಿ 35,800 ಹೆಕ್ಟರ್ ಕೃಷಿ ಭೂಮಿಯಲ್ಲಿ ಈಗಾಗಲೇ 29,500 ಹೆಕ್ಟರ್ ಭೂಮಿಯಲ್ಲಿ ವಿವಿಧ ಬೆಳೆಗಳು ಬಿತ್ತನೆ ಮಾಡಿದ್ದು, ರೈತರು ಇದರಲ್ಲಿ ಬಹುಪಾಲು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ ಎಂದರು.
ಈ ಬಾರಿ ಮುಂಗಾರು ಮಳೆ ಮೇ ಮೊದಲನೇ ವಾರದಿಂದಲೇ ವಾಡಿಕೆಗಿಂತ ಹೆಚ್ಚು ಸುರಿದಿದೆ. ಬೆಳೆಗಳಿಗೆ ಶೀತ ಆಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹೆಚ್ಚು ಯೂರಿಯಾ ಬಳಕೆಗೆ ಮುಂದಾಗಿದ್ದಾರೆ. ಈ ಕಾರಣಕ್ಕೆ ಯೂರಿಯಾ ರಸಗೊಬ್ಬರ ಕೊರತೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಆದರೆ ಎರಡೂ ತಾಲೂಕಿನಲ್ಲಿ 7,400 ಮೆಟ್ರಿಕ್ ಟನ್ ಯೂರಿಯಾ ಬೇಡಿಕೆ ಇದೆ. ಅದರಲ್ಲಿ 5,600 ಮೆಟ್ರಿಕ ಟನ್ ಬಳಕೆಯಾಗಿದೆ. ಬಾಕಿ ಇರುವ 1800 ಮೆಟ್ರಿಕ್ ಟನ್ ದಾಸ್ತಾನು ಮಾಡಲಾಗಿದೆ. ಇದರಿಂದ ಗೊಬ್ಬರ ಕೊರತೆ ಪ್ರಶ್ನೆಯೇ ಇಲ್ಲ ಎಂದು ಶಾಸಕರು ವಿವರಿಸಿದರು.3 ಶಾಲೆ ಬಂದ್:
ಬಿಇಒ ನಿಂಗಪ್ಪ ಮಾಹಿತಿ ನೀಡಿ, ವಿದ್ಯಾರ್ಥಿಗಳ ಕೊರತೆಯಿಂದಾಗಿ ಮೂರು ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ. ಕಡಿಮೆ ಸಂಖ್ಯೆಯಲ್ಲಿದ್ದ ಮಕ್ಕಳನ್ನು ಪಕ್ಕದ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಮಾಡಲಾಗಿದೆ ಎಂದು ತಿಳಿಸಿದರು. ಮಳೆಗಾಲವಾದ್ದರಿಂದ ಕೂಡಲೇ ಬಿಇಒ ಅವರು ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಅತ್ಯಂತ ಶಿಥಿಲ ಶಾಲಾ ಕಟ್ಟಡಗಳು ಹಾಗೂ ಶಾಲಾ ಕಟ್ಟಡಗಳ ಮೇಲೆ ವಿದ್ಯುತ್ ತಂತಿ ಹಾದು ಹೋಗಿರುವ ಕುರಿತು ಸಮಗ್ರ ವಿವರಗಳನ್ನು ತಮಗೆ ತಿಳಿಸಬೇಕು ಎಂದು ಶಾಸಕರು ಸೂಚಿಸಿದರು.ಸಿಡಿಪಿಒ ಜ್ಯೋತಿ ಮಾತನಾಡಿ, ತಾಲೂಕಿನಲ್ಲಿ ಕೆಲ ಅಂಗನವಾಡಿಗಳು ಇನ್ನೂ ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿವೆ. 5 ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ನ್ಯಾಮತಿ ತಾಲೂಕಿನ ಗೋವಿನಕೋವಿ ಅಂಗನವಾಡಿ ಕಟ್ಟಡಕ್ಕೆ ಬೀಗ ಹಾಕಿರುವ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದಾಗ, ಕೂಡಲೇ ಪಿಡಿಒಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಬಗೆಹರಿಸಿದರು.
ತೋಟಗಾರಿಕೆ ಸಹಾಯಕ ನಿರ್ದೇಶಕಿ ರೇಖಾ ಮಾತನಾಡಿ, ಅಡಕೆ ಮತ್ತು ಎಲೆಬಳ್ಳಿಗೆ ವಿಮಾ ಸೌಲಭ್ಯ ಇದ್ದು, ಹೊನ್ನಾಳಿ ತಾಲೂಕಿನಲ್ಲಿ 2025 ಹಾಗೂ ನ್ಯಾಮತಿಯಲ್ಲಿ 4825 ಜನರು ವಿಮೆ ಮಾಡಿಸಿದ್ದಾರೆ ಎಂದು ಮಾಹಿತಿ ನೀಡಿದರು.ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾಉಲ್ಲಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ, ಅರಣ್ಯ, ಬೆಸ್ಕಾಂ, ಬಿಸಿಎ, ಸಮಾಜ ಕಲ್ಯಾಣ ಇಲಾಖೆ, ಆಹಾರ ಇಲಾಖೆ ಲೋಕೋಪಯೋಗಿ, ಯುಟಿಪಿ ಸೇರಿದಂತೆ ಎಲ್ಲ ಇಲಾಖೆಯವರು ಸಭೆಗೆ ಸಮಗ್ರ ಮಾಹಿತಿ ನೀಡಿದರು.
ಹೊನ್ನಾಳಿ ತಹಸೀಲ್ದಾರ್ ರಾಜೇಶ್‌ಕುಮಾರ್, ನ್ಯಾಮತಿ ತಹಸೀಲ್ದಾರ್ ಕವಿರಾಜ್, ತಾ.ಪಂ. ಇ.ಒ.ಗಳಾದ ಪ್ರಕಾಶ್ ಹಾಗೂ ರಾಘವೇಂದ್ರ, ಸಿಪಿಐಗಳಾದ ಸುನಿಲ್‌ಕುಮಾರ್, ರವಿಕುಮಾರ್ ಸೇರಿದಂತೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತಿರಿದ್ದರು.- - -
-28ಎಚ್ಎಲ್.ಐ1:ಹೊನ್ನಾಳಿ ತಾಪಂ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿದರು.