ಸಾರಾಂಶ
ಈರಣ್ಣ ಬುಡ್ಡಾಗೋಳ
ಕನ್ನಡಪ್ರಭ ವಾರ್ತೆ ರಾಮದುರ್ಗಬಯಲು ಮಲಮೂತ್ರ ವಿಸರ್ಜನೆ ಮಾಡಬೇಡಿ ಎಂದು ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿಕೊಳ್ಳಲು ಜನರಿಗೆ ಸ್ವಚ್ಛತೆ ಪಾಠ ಬೋಧಿಸುವ ತಾಲೂಕು ಆಡಳಿತ ಸೌಧದಲ್ಲೇ ಶೌಚಾಲಯವಿಲ್ಲದೆ ನೌಕರರು, ಸಿಬ್ಬಂದಿ ಮತ್ತು ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ.
ಸುಮಾರು 20 ವರ್ಷಗಳ ಹಿಂದೆಯೇ ₹4 ಕೋಟಿಗೂ ಅಧಿಕ ಅನುದಾನದಲ್ಲಿ ನಿರ್ಮಾಣವಾಗಿರುವ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕಚೇರಿಯಲ್ಲಿ ಕೆಲಸಕ್ಕಾಗಿ ಬರುವ ಸಾರ್ವಜನಿಕರಿಗೆ ಮತ್ತು ಇಲಾಖೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಆವರಣದಲ್ಲಿ ಶೌಚಾಲಯ ಇಲ್ಲದೇ ಇರುವುದರಿಂದ ಮಲಮೂತ್ರ ವಿಸರ್ಜನೆ ಮಾಡುವುದೇ ತೊಂದರೆಯಾಗಿದೆ. ಈ ತಾಲೂಕುಸೌಧದಲ್ಲಿ ಮುಖ್ಯವಾಗಿ ಕಂದಾಯ ಇಲಾಖೆ ಸೇರಿದಂತೆ 7-8 ತಾಲೂಕುಮಟ್ಟದ ಕಚೇರಿಗಳಿವೆ. ಆದರೆ ಶೌಚಾಲಯ ನಿರ್ವಹಣೆ ಗೋಜಿಗೆ ಮಾತ್ರ ಯಾರು ಮುಂದಾಗುತ್ತಿಲ್ಲ, ಪರಿಣಾಮ ಇಲಾಖೆಯ ಸಿಬ್ಬಂದಿ ಶೌಚಾಲಯವಿಲ್ಲದೆ ಪರದಾಡುತ್ತಿದ್ದಾರೆ.ಮಿನಿವಿಧಾನಸೌಧದ ನೆಲಮಹಡಿಯಲ್ಲಿರುವ ಪೂರ್ವದ ಶೌಚಾಲಯ ಕಾರ್ಯ ನಿರ್ವಹಿಸುತ್ತಿದ್ದು, ಇದನ್ನು ಮಹಿಳೆಯರು ಮಾತ್ರ ಉಪಯೋಗಿಸುತ್ತಾರೆ. ಪಶ್ಚಿಮ ದಿಕ್ಕಿನ ಮತ್ತು ಮೊದಲ ಮಹಡಿಯ ಶೌಚಾಲಯಕ್ಕೆ ಸಮರ್ಪಕ ನೀರಿನ ಕೊರತೆಯಿಂದ ಅವುಗಳಿಗೆ ಬೀಗ ಜಡಿಯಲಾಗಿದೆ. ಅಷ್ಟೇ ಅಲ್ಲದೆ ಅತ್ತ ಕಡೆ ಯಾರು ಸುಳಿಯದಂತೆ ಕಚೇರಿಯ ಕಟ್ಟಿಗೆಯ ಕಪಾಟು, ನಿರುಪಯುಕ್ತ ಸಾಮಗ್ರಿಗಳನ್ನು ಇಡಲಾಗಿದೆ.
ಮಿನಿವಿಧಾನ ಸೌಧಕ್ಕೆ ಬರುವ ಸಾವಿರಾರು ಜನರು ಹಾಗೂ ಮಧುಮೇಹದ ರೋಗಿಗಳಂತೂ ತಮ್ಮ ಜಲಬಾಧೆ ತೀರಿಸಿಕೊಳ್ಳಲು ಎಲ್ಲಿಲ್ಲಿದ ಸಂಕಟ ಪಡುವಂತಾಗಿದೆ. ಸರ್ಕಾರಿ ನೌಕರರು ಸೇರಿದಂತೆ ಸಾರ್ವಜನಿಕರಿಗೆ ಪಕ್ಕದ ಗಿಡ-ಮರಗಳು, ಇಲ್ಲವೇ ಗೋಡೆಗಳೇ ಶೌಚಾಲಯಗಳಾಗಿವೆ. ಮಹಿಳಾ ನೌಕರರು ಸಹ ಇದರಿಂದ ಹೊರತಾಗಿಲ್ಲ. ಕೆಲವರು ಸೌಧದಲ್ಲಿ ನಿರ್ಮಿಸಿದ ಮೂತ್ರಿಗಳನ್ನು ಕೀಲಿ ತೆಗೆದು ಬಳಸಿಕೊಂಡರೆ ಉಳಿದವರು ಪಕ್ಕದ ಮ್ಯುಜಿಯಂನ ಒಳಗೆ ಹೋಗಿ ಬರುತ್ತಾರೆ.ಧೂಳು ಆವರಿಸಿದ ಸೌಧ:
ಸರಿಯಾದ ನಿರ್ವಹಣೆ ಇಲ್ಲದೇ ಸೌಧದ ಎಲ್ಲೆಂದರಲ್ಲಿ ಧೂಳು, ಎಲೆ ಅಡಿಕೆ ಜಗಿದು ಉಗಿದಿರುವ ಕಲೆಯ ಗುರುತುಗಳು, ಒಳ ಹೋಗುವವರು ಗೋಡೆ ಮುಟ್ಟಿ ಹೋಗುವಂತಿಲ್ಲ. ಆ ರೀತಿಯಲ್ಲಿ ಧೂಳು ಆವರಿಸಿಕೊಂಡಿದೆ. ಇನ್ನು ಮುಂದೆಯಾದರೂ ಮಿನಿ ವಿಧಾನಸೌಧದಲ್ಲಿ ಪ್ರಮುಖವಾಗಿರುವ ಕಂದಾಯ ಇಲಾಖೆಯ ಮುಖ್ಯಸ್ಥರು ಸಾರ್ವಜನಿಕರ ಜಲಬಾಧೆ ನಿವಾರಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.ಮಿನಿ ವಿಧಾನಸೌಧಕ್ಕೆ ಬರುವ ಮಧುಮೇಹ ರೋಗಿಗಳು ಮತ್ತು ವಯಸ್ಕರಿಗೆ ಶೌಚಾಲಯದ ತೊಂದರೆಯಾಗುತ್ತಿದೆ. ಮಿನಿ ವಿಧಾನಸೌಧದ ಹತ್ತಿರ ಶೌಚಾಲಯ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ. ಇಲ್ಲವೆಂದರೆ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಪರಿಸರ ನಾರುತ್ತದೆ. ಶಂಕರ ಕುಂಬಾರ, ಮುದಕವಿ ಗ್ರಾಮಸ್ಥ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್, ಸಿಡಿಪಿಒ, ಖಜಾನೆ, ನೋಂದಣಿ, ಭೂಮಾಪನ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ತಾಲೂಕುಮಟ್ಟದ ಅಧಿಕಾರಿಗಳ ಕಚೇರಿಯಲ್ಲಿ ಶೌಚಾಲಯಗಳಿವೆ. ಆದರೆ ಕೆಳಸ್ಥರದ ಅಧಿಕಾರಿಗಳು ಬಯಲನ್ನೇ ಆಶ್ರಯಿಸುವುದು ಅನಿವಾರ್ಯವಾಗಿದೆ. ಹೆಸರು ಹೇಳಲಿಚ್ಚಸದ ಸರ್ಕಾರಿ ನೌಕರ