ಕೋಮುಲ್‌ ತುರ್ತು ಸಭೆಯಲ್ಲಿ ತುರ್ತು ವಿಷಯವೇ ಇಲ್ಲ!

| Published : Aug 31 2025, 01:08 AM IST

ಕೋಮುಲ್‌ ತುರ್ತು ಸಭೆಯಲ್ಲಿ ತುರ್ತು ವಿಷಯವೇ ಇಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಹಾಲು ಒಕ್ಕೂಟದಲ್ಲಿ ಎಂ.ಡಿ ಗೋಪಾಲಮೂರ್ತಿ ಇಲ್ಲಿನ ನಿರ್ದೇಶಕರಗಳನ್ನು ಜಾಣತನದಿಂದ ವಂಚಿಸಲು ಮುಂದಾಗಿದ್ದಾರೆ ಎಂಬುದು ಶಾಸಕ ನಾರಾಯಣಸ್ವಾಮಿ ಆರೋಪ. ತುರ್ತು ಸಭೆಯಲ್ಲಿ ಕೇವಲ ಮೂರು ವಿಷಯಗಳ ಬಗ್ಗೆ ಮಾತ್ರ ಚರ್ಚೆ ನಡೆಸಬೇಕು ಆದರೆ ಇವರು ಮೂರನೇ ವಿಷಯದಲ್ಲಿ ಎಬಿಸಿಡಿ ಎಂದು 26 ವಿಷಯಗಳನ್ನು ಸೇರಿಸಿದ್ದಾರೆ ಎಂದರೆ ಅವರ ಜಾಣತನಕ್ಕೆ ನಾವು ಮೆಚ್ಚಲೇಬೇಕು ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೋಲಾರ ಹಾಲು ಒಕ್ಕೂಟ ವತಿಯಿಂದ ತುರ್ತು ಸಭೆ ಎಂದು ಕರೆದು ಅಲ್ಲಿ ಜಮಾ ಖರ್ಚುಗಳು, ಹಣಕಾಸಿಗೆ ಸಂಬಂಧ ಬಗ್ಗೆ ಅನುಮೋದನೆ ಪಡೆಯಲು ಮುಂದಾದರು. ಇದಕ್ಕೆ ತಾವು ಆಕ್ಷೇಪ ವ್ಯಕ್ತಪಡಿಸಿದ್ದಾಗಿ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಎಸ್ಎನ್‌ ರೆಸಾರ್ಟ್‌ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೋಮುಲ್‌ನಲ್ಲಿ ಶನಿವಾರ ಅಧ್ಯಕ್ಷ ಕೆ.ವೈ ನಂಜೇಗೌಡರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಎಂದು ಎಂ.ಡಿ ಗೋಪಾಲಮೂರ್ತಿ ಎರಡು ದಿನಗಳ ಹಿಂದೆ ನೋಟಿಸ್ ಕಳಿಸಿದ್ದರು. ಆದ್ದರಿಂದ ತಾವು ಸಭೆಗೆ ಹಾಜರಾಗಿದ್ದಾಗಿ ಹೇಳಿದರು.

ತುರ್ತು ವಿಷಯವೇ ಇಲ್ಲ

ಆದರೆ ತುರ್ತು ಸಭೆಯಲ್ಲಿ ಕೇವಲ ತುರ್ತು ಸಂದರ್ಭಕ್ಕೆ ಅನುಗುಣವಾಗುವ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಾಗಿತ್ತು, ಅದನ್ನು ಬಿಟ್ಟು ಬೇರೆ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ತುರ್ತು ಸಭೆಯಲ್ಲಿ ಬಹಳ ತುರ್ತು ಎಂದರೆ ಅನಿವಾರ್ಯವಾಗಿ ಆಡಳಿತಕ್ಕೆ ತೊಂದರೆ ಆದಾಗ ತುರ್ತು ಕ್ರಮಗಳನ್ನು ಕೈಗೊಳ್ಳಲು ಸಭೆಯನ್ನು ಕರೆಯಬೇಕಾಗುತ್ತದೆ. ಸಭೆಯಲ್ಲಿ ಕೇವಲ ಮೂರು ವಿಷಯಗಳ ಬಗ್ಗೆ ಮಾತ್ರ ಚರ್ಚೆ ನಡೆಸಬೇಕು. ಅದನ್ನು ಬಿಟ್ಟು ಜಮಾ ಖರ್ಚುಗಳ ಬಗ್ಗೆ ಅನುಮೋದನೆ ಪಡೆಯಲು ಮೂವತ್ತು ವಿಷಯಗಳ ತಂದಿರುವುದಕ್ಕೆ ತಾವು ಆಕ್ಷೇಪ ವ್ಯಕ್ತಪಡಿಸಿದ್ದಾಗಿ ತಿಳಿಸಿದರು.ಕೋಮುಲ್‍ನ ಎಂಡಿ ಹುನ್ನಾರ

ತುರ್ತು ಸಭೆ ನೆಪದಲ್ಲಿ ಕೋಮುಲ್‍ನ ಎಂ.ಡಿ ಆಗಿರುವಂತಹ ಗೋಪಾಲಮೂರ್ತಿ ಕೋಟ್ಯಂತರ ರುಪಾಯಿ ಖರ್ಚು ವೆಚ್ಚಗಳ ಅನುಮೋದನೆ ಪಡೆಯಲು ಹುನ್ನಾರವನ್ನು ನಡೆಸಿದ್ದರು. ಜೊತೆಗೆ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಹುತ್ತೂರು ಹೋಬಳಿಯ ಬೆಳಗಾನಹಳ್ಳಿ ಗ್ರಾಮದ ಸರ್ಕಾರಿ ರಸ್ತೆಯನ್ನು ಸ್ಥಳಾಂತರ ಮಾಡಲು ಸಹ ಅಜೆಂಡವನ್ನು ತಂದಿದ್ದರು. ಈಗಾಗಲೇ ಗ್ರಾಮಸ್ಥರು ಈ ರಸ್ತೆಯನ್ನು ಮಾಡಬಾರದೆಂದು ಆಕ್ಷೇಪವನ್ನು ಸಲ್ಲಿಸಿದ್ದಾರೆ ಇದಕ್ಕೆ ನನ್ನ ಸಹಮತವಿತ್ತು ಇದರಿಂದ ಈ ವಿಷಯವನ್ನು ಕೈ ಬಿಡಲಾಗಿದೆ. ಹಾಲು ಒಕ್ಕೂಟದಲ್ಲಿ ಎಂ.ಡಿ ಗೋಪಾಲಮೂರ್ತಿ ಇಲ್ಲಿನ ನಿರ್ದೇಶಕರಗಳನ್ನು ಜಾಣತನದಿಂದ ವಂಚಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ತುರ್ತು ಸಭೆಯಲ್ಲಿ ಕೇವಲ ಮೂರು ವಿಷಯಗಳ ಬಗ್ಗೆ ಮಾತ್ರ ಚರ್ಚೆ ನಡೆಸಬೇಕು ಆದರೆ ಇವರು ಮೂರನೇ ವಿಷಯದಲ್ಲಿ ಎಬಿಸಿಡಿ ಎಂದು 26 ವಿಷಯಗಳನ್ನು ಸೇರಿಸಿದ್ದಾರೆ ಎಂದರೆ ಅವರ ಜಾಣತನಕ್ಕೆ ನಾವು ಮೆಚ್ಚಲೇಬೇಕು ಎಂದರು. ಹಣಕಾಸು ವಿಷಯಕ್ಕೆ ಆಕ್ಷೇಪ

ಸಭೆಯಲ್ಲಿ ಇಂದು ಕೋಟ್ಯತರ ರುಪಾಯಿ ಹಣಕಾಸಿನ ವಿಷಯವನ್ನು ಚರ್ಚೆಗೆ ಇಟ್ಟರು. ಈ ಸಭೆ ಹಣಕಾಸಿನ ವಿಚಾರವಾಗಿ ಪ್ರಸ್ತಾವನೆ ಸಲ್ಲಿಸಿ ಅನಮೋದನೆ ಪಡೆಯುವ ಸಭೆಯಲ್ಲ ಎಂದು ಆಕ್ಷೇಪಣೆ ಮಂಡಿಸಿದ್ದೇನೆ. ಕೋಮುಲ್ ನಲ್ಲಿ ಅನೇಕ ನಿಯಮಗಳನ್ನು ಗಾಳಿಗೆ ತೂರಿ ಅನೇಕ ರೀತಿಯಲ್ಲಿ ಹಣವನ್ನು ದುಂದು ವೆಚ್ಚ ಮಾಡುವಲ್ಲಿ ಬಹಳ ವರ್ಷಗಳಿಂದ ಬಂದ ಪರಿಪಾಠವಾಗಿದೆ ಎಂದು ಆರೋಪಿಸಿದರು.

ತುರ್ತು ಸಭೆಯಲ್ಲಿ 30 ವಿಷಯಗಳ ಬಗ್ಗೆ ಅಜೆಂಡ ಮಂಡಿಸಿರುವುದು ಕಾನೂನಿಗೆ ವಿರುದ್ಧ. ಅದಕ್ಕೆ ತಾವು ವಿರೋಧವನ್ನು ವ್ಯಕ್ತಪಡಿಸಿ ಪತ್ರದ ಮುಖಾಂತರ ಎಂ.ಡಿ ಹಾಗೂ ಅಧ್ಯಕ್ಷರಿಗೆ ಸಲ್ಲಿಸಿದ್ದೇನೆ ಎಂದರು.