ನಿಸ್ವಾರ್ಥ ಸೇವೆಗಿಂತ ಮಿಗಿಲಾದ ಪೂಜೆಯಿಲ್ಲ: ಮಹೇಶ ಅಡಕೋಳಿ

| Published : Feb 05 2025, 12:30 AM IST

ಸಾರಾಂಶ

ಲಯನ್ಸ್ ಬಳಗ ಸಮಾಜ ಸೇವೆಯ ವ್ಯಾಪ್ತಿಯಲ್ಲಿ ಪರಿಸರ ರಕ್ಷಣೆ, ಕಣ್ಣಿನ ಆರೋಗ್ಯ, ಮಧುಮೇಹ ನಿವಾರಣೆ, ಚಿಕ್ಕಮಕ್ಕಳ ಕ್ಯಾನ್ಸರ್, ಪ್ರಾಕೃತಿಕ ವಿಕೋಪಕ್ಕೆ ಸಹಾಯ, ಹಸಿವು ನಿವಾರಣೆ ಕ್ಷೇತ್ರದಲ್ಲಿ ಗಣನಿಯ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ.

ಅಂಕೋಲಾ: ಶ್ರದ್ಧೆ, ನಿಸ್ವಾರ್ಥ ಭಾವದಿಂದ ಮಾಡುವ ಸಮಾಜ ಸೇವೆ, ನಾವು ಮಾಡುವ ಜಪ, ತಪ, ಪೂಜೆಗಳಿಗಿಂತ ಮಿಗಿಲಾದದ್ದು. ಭಾರತೀಯ ಸಂಸ್ಕೃತಿಯಲ್ಲಿ ಜನಸೇವೆಯೇ ಜನಾರ್ದನ ಸೇವೆ ಎಂಬ ಬಹುದೊಡ್ಡ ಸಂದೇಶವಿದೆ. ಜಗತ್ತಿನ ಅತಿದೊಡ್ಡ ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ ಪಾತ್ರವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಮಹೇಶ ಅಡಕೋಳಿ ತಿಳಿಸಿದರು.ಇಲ್ಲಿನ ಶೆಟಗೇರಿಯ ವಾಸುದೇವ ಕಲ್ಯಾಣಮಂಟಪದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಲಯನ್ಸ್ ರೀಜನ್ ಸಮಾವೇಶದಲ್ಲಿ ಮಾತನಾಡಿ, ಲಯನ್ಸ್ ಬಳಗ ಸಮಾಜ ಸೇವೆಯ ವ್ಯಾಪ್ತಿಯಲ್ಲಿ ಪರಿಸರ ರಕ್ಷಣೆ, ಕಣ್ಣಿನ ಆರೋಗ್ಯ, ಮಧುಮೇಹ ನಿವಾರಣೆ, ಚಿಕ್ಕಮಕ್ಕಳ ಕ್ಯಾನ್ಸರ್, ಪ್ರಾಕೃತಿಕ ವಿಕೋಪಕ್ಕೆ ಸಹಾಯ, ಹಸಿವು ನಿವಾರಣೆ ಕ್ಷೇತ್ರದಲ್ಲಿ ಗಣನಿಯ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು. ಲಯನ್ಸ್ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ಲಾ. ರವಿ ಹೆಗಡೆ ಮಾತನಾಡಿ, ಆತ್ಮತೃಪ್ತಿಗಾಗಿ ಮಾಡುವ ಸಮಾಜಸೇವೆ ಶ್ರೇಷ್ಠವಾಗಿದೆ. ಶಿರೂರು ಗುಡ್ಡ ಕುಸಿತದ ಸಂದರ್ಭದಲ್ಲಿ ನಿರಾಶ್ರಿತರ ನೆರವಿಗೆ ಲಯನ್ಸ್ ಕ್ಲಬ್ ಸದಸ್ಯರು ಮೊದಲು ಧಾವಿಸಿ ಸಹಾಯಹಸ್ತ ಚಾಚಿರುವುದನ್ನು ಸ್ಮರಿಸಿದರು.ಲ. ಅಮಿತ ನಾಯಕ ಧ್ವಜವಂದನೆ ನಡೆಸಿಕೊಟ್ಟರು. ಗೋಕರ್ಣ ಕ್ಲಬ್‌ನ ಡಾ. ವಿ.ಆರ್.ಮಲ್ಲನ್ ಸ್ವಾಗತಿಸಿದರು. ರೀಝನ್ ಮುಖ್ಯಸ್ಥ ರವೀಂದ್ರ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ, ಮಂಗಲಾ ನಾಯಕ ಅತಿಥಿಗಳನ್ನು ಪರಿಚಯಿಸಿದರು. ಡಿಸ್ಟ್ರಿಕ್ಟ್ ಗವರ್ನರ್ ಗಣಪತಿ ನಾಯಕ, ಗಿರೀಶ ಕುಚಿನಾಡ ಮಾತನಾಡಿದರು. ಜೋನ್ ಮುಖ್ಯಸ್ಥರಾದ ವಿನಯ ನಾಯ್ಕ, ಶ್ಯಾಮಲಾ ಹೆಗಡೆ, ಅಶೋಕ ಹೆಗಡೆ, ಲಯನ್ಸ್ ಕ್ಲಬ್‌ಗಳ ಸಾಧನೆಯ ವರದಿಯನ್ನು ಪ್ರಸ್ತುತಪಡಿಸಿದರು. ಸಮಾವೇಶಕ್ಕೆ ಹಾಜರಾದ ಸದಸ್ಯರ ವರದಿಯನ್ನು ಎನ್.ಎಸ್. ಲಮಾಣಿ ಪ್ರಸ್ತುತಪಡಿಸಿದರು. ರವಿಂದ್ರ ಕೊಡ್ಲಕೆರೆ ವಂದಿಸಿದರು. ಹಿರಿಯ ಲಯನ್ಸ್ ಸತ್ಯಾನಂದ ಖೈರಾನಾ ನಿರೂಪಿಸಿದರು. ಸಮಾವೇಶದಲ್ಲಿ ಗೋವಾ, ಉಡುಪಿ, ಕರ್ನಾಟಕದ ವಿವಿಧ ಜಿಲ್ಲೆಗಳ ೨೦೦ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ‘ವಸುಂಧರಾ’ ಸಂಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಲಯನ್ಸ್ ಕ್ಲಬ್ ಗೋಕರ್ಣ ಸಮಾವೇಶದ ಜವಾಬ್ದಾರಿಯನ್ನು ನಿರ್ವಹಿಸಿತು. ಸಮಾವೇಶವನ್ನು ಆಯೋಜಿಸಿದ ರೀಜನ್ ಮುಖ್ಯಸ್ಥ ರವೀಂದ್ರ ನಾಯಕ ದಂಪತಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.ಸಂಭ್ರಮದ ವೆಂಕಟ್ರಮಣ ದೇವರ ಪಾಲಕಿ ಮಹೋತ್ಸವ

ಭಟ್ಕಳ: ಇಲ್ಲಿನ ಆಸರಕೇರಿಯ ನಿಚ್ಛಲಮಕ್ಕಿ ತಿರುಮಲ ವೆಂಕಟ್ರಮಣ ದೇವರ ಪಾಲಕಿ ಮಹೋತ್ಸವ ಮಂಗಳವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.ದೇವರ ಪಾಲಕಿ ಮಹೋತ್ಸವ ಅಂಗವಾಗಿ ಮಂಗಳವಾರ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಮಹಾಸಂಕಲ್ಪ,‌ ಕಳಸರಾಧನೆ ಮಾಡಿ ಗಣಹೋಮ‌ ನೆರವೇರಿಸಲಾಯಿತು. ಬಳಿಕ ನಡೆದ ತುಲಭಾರ ಸೇವೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೇವರಿಗೆ ಹರಕೆ ಒಪ್ಪಿಸಿದರು. ಮಧ್ಯಾಹ್ನ ಮಹಾಪೂಜೆ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.

೫ ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಸಂಜೆ ೫ ಗಂಟೆಗೆ ದೇವರ ಬೆಳ್ಳಿ ಉತ್ಸವ ಮೂರ್ತಿ ಪಾಲಕಿ ಮೆರವಣಿಗೆ ನಡೆಯಿತು.ಪಟ್ಟಣದ ವಿವಿಧ ಭಾಗಗಳಿಗೆ ಆಗಮಿಸಿದ ದೇವರ ಉತ್ಸವ ಮೂರ್ತಿ ಪಾಲಕಿಗೆ ಸ್ಥಳೀಯ ಭಕ್ತರು ಅದ್ಧೂರಿ ಸ್ವಾಗತ ನೀಡಿ ಹಣ್ಣು ಕಾಯಿ ಇಟ್ಟು ಪೂಜೆ ಸಲ್ಲಿಸಿದರು. ಚಂಡೆ ವಾದ್ಯ, ತಟ್ಟಿರಾಯ ಕುಣಿತ, ಭಜನಾ‌ ಕುಣಿತ ಪಾಲಕಿ ಮೆರವಣಿಗೆಯ ಮೆರುಗು ಹೆಚ್ಚಿಸಿತು. ನಾಮಧಾರಿ ಸಮಾಜದ ಅಧ್ಯಕ್ಣ ಅರುಣ ನಾಯ್ಕ, ಗೌರವಾಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಕಾರ್ಯದರ್ಶಿ ಡಿ.ಎಲ್. ನಾಯ್ಕ, ಉಪಾಧ್ಯಕ್ಷ ಎಂ.ಕೆ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಪ್ರಮುಖರಾದ ಗೋವಿಂದ ನಾಯ್ಕ, ವಿಠ್ಠಲ ನಾಯ್ಕ, ಆಡಳಿತ ಸಮಿತಿಯ ಸದಸ್ಯರು ಸೇರಿದಂತೆ ಸಾವಿರಾರು ಜನರು ಸೇರಿದ್ದರು.