ಜ್ಞಾನಕ್ಕಿಂತ ಮಿಗಿಲಾದದ್ದು ಮತ್ತೊಂದಿಲ್ಲ: ಸುತ್ತೂರು ಶ್ರೀ

| Published : Feb 16 2024, 01:49 AM IST

ಸಾರಾಂಶ

ಡಾ. ಬಸವಲಿಂಗ ಪಟ್ಟದ್ದೇವರ ಸೇವೆ ಶ್ಲಾಘನೀಯವೆಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನುಡಿದರು. ಭಾಲ್ಕಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಜೆಇಇ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಜ್ಞಾನದಿಂದ ಮಾತ್ರ ಸ್ವಯಂ ಪ್ರಕಾಶಮಾನವರಾಗಿ ವಿಕಾಸಗೊಳ್ಳಲು ಸಾಧ್ಯ ಹೀಗಾಗಿ ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ಶೀಲ ಪ್ರವೃತ್ತಿ ಮೈಗೂಡಿಸಿಕೊಂಡು ರಾಜ್ಯ, ರಾಷ್ಟ್ರಕ್ಕೆ ತಮ್ಮ ಕೊಡುಗೆ ನೀಡಬೇಕೆಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಸಮುಚ್ಚಯದ ಅನುಭವ ಮಂಟಪ ಸಭಾಂಗಣದಲ್ಲಿ ಗುರುವಾರ ವಿಜ್ಞಾನ ಪದವಿಪೂರ್ವ ಕಾಲೇಜಿನ ಜೆಇಇ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ಜ್ಞಾನ ಮನುಷ್ಯನನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ. ಜ್ಞಾನಕ್ಕಿಂತ ಮಿಗಿಲಾದದ್ದು ಮತ್ತೊಂದಿಲ್ಲ. ಜ್ಞಾನ ಸಂಪಾದಿಸಿದವರು ಸದಾ ಸುಖಿಗಳಾಗಿ ಸಂತೋಷದಿಂದ ಜೀವನ ಸಾಗಿಸುತ್ತಾರೆ. ಅವರನ್ನು ಸಮಾಜ ಗೌರವದಿಂದ ಕಾಣುತ್ತದೆ ಎಂದರು.

ಈ ಭಾಗದಲ್ಲಿ ಡಾ. ಬಸವಲಿಂಗ ಪಟ್ಟದ್ದೇವರು ವಿದ್ಯಾ ದೇಗುಲ ತೆರೆದು ಜ್ಞಾನಧಾರೆಯೆರೆಯುತ್ತಿದ್ದಾರೆ. ಶಿಕ್ಷಣಕ್ಕೆ ಪೂರಕವಾದ ಕಟ್ಟಡ, ಪರಿಸರ, ಉತ್ತಮ ಬೋಧಕ ವರ್ಗ ನೀಡಿ ಗುಣಾತ್ಮಕ ಶಿಕ್ಷಣ, ಸಂಸ್ಕಾರ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಒಂದು ಸಂಸ್ಥೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದೆರಡು ರ‍್ಯಾಂಕ್ ಪಡೆಯುವುದು ಅಪರೂಪ ಆದರೆ ಈ ಸಂಸ್ಥೆಯಿಂದ ಏಕ ಕಾಲಕ್ಕೆ ಜೆಇಇ, ನೀಟ್‌ ಸೇರಿ ವಿವಿಧ ಕೋರ್ಸ್‌ಗಳಲ್ಲಿ ನೂರಾರು ವಿದ್ಯಾರ್ಥಿಗಳು ಉತ್ತಮ ರ‍್ಯಾಂಕ್‌ ಪಡೆದು ಸಾಧಕರಾಗಿ ಹೊರಹೊಮ್ಮುತ್ತಿರುವುದು ಮಾದರಿ ಎಂದರು.

ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿ ಮಾತನಾಡಿ, ಈ ನಾಡಿಗೆ ಸುತ್ತೂರು ಮಠದ ಕೊಡುಗೆ ದೊಡ್ಡದಿದೆ. ಲಕ್ಷಾಂತರ ಮಕ್ಕಳಿಗೆ ಅಕ್ಷರ, ಅನ್ನದಾಸೋಹ ಅತ್ಯಂತ ಶ್ರೇಷ್ಠವೆನಿಸಿದೆ. ಸುತ್ತೂರು ಮಠದಲ್ಲಿ ಕಲಿತ ವಿದ್ಯಾರ್ಥಿಗಳು ಭಾರತದ ಗೌರವ, ಹಿರಿಮೆ ಹೆಚ್ಚಿಸುತ್ತಿದ್ದಾರೆ. ಅಂತಹ ಪೂಜ್ಯರ ಆಶೀರ್ವಾದ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ ಎಂದರು.

ಮಹಾಲಿಂಗ ಸ್ವಾಮೀಜಿ, ಬಸವಲಿಂಗ ದೇವರು ಸಮ್ಮುಖ ವಹಿಸಿದ್ದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತಾಧಿಕಾರಿ ಮೋಹನ ರೆಡ್ಡಿ ಸ್ವಾಗತಿಸಿದರೆ, ಲಕ್ಷ್ಮಣ ಮೇತ್ರೆ ನಿರೂಪಿಸಿ ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ವಂದಿಸಿದರು.ದಸರಾ, ದೀಪಾವಳಿ ಹಬ್ಬ ಬಂದರೆ ಎಲ್ಲರಿಗೂ ಖುಷಿ ಆಗಿರುತ್ತದೆ. ಮಹಾತ್ಮರು, ಸಂತರು ಬಂದಲ್ಲಿ ಅದಕ್ಕಿಂತ ಹೆಚ್ಚು ಖುಷಿ ಕೊಡುತ್ತದೆ. ಹಾಗೆಯೇ ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನಮ್ಮ ಮಠ, ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ನಮ್ಮನ್ನು ಆಶೀರ್ವದಿಸಿರುವುದು ಅತ್ಯಂತ ಖುಷಿ ತಂದು ಕೊಟ್ಟಿದೆ.

- ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥಾನ, ಭಾಲ್ಕಿಚಿತ್ರ 15ಬಿಡಿಆರ್55

ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಮಹಾಲಿಂಗ ಸ್ವಾಮೀಜಿ, ಮೋಹನ ರೆಡ್ಡಿ, ಬಸವರಾಜ ಮೊಳಕೀರೆ, ಉಪನ್ಯಾಸಕರು ಇದ್ದರು.