ಶಾಲೆಯ ಶೌಚಾಲಯ ಮಕ್ಕಳು ಸ್ವಚ್ಛ ಮಾಡಿದರೆ ತಪ್ಪಲ್ಲ

| Published : Feb 11 2024, 01:56 AM IST

ಸಾರಾಂಶ

ಶಾಲೆಗಳಲ್ಲಿ ಮಕ್ಕಳೇ ಬಳಸುವ ಶೌಚಾಲಯವನ್ನು ಅವರೇ ಸ್ವಚ್ಛ ಮಾಡಿಕೊಂಡರೆ ಅದು ದೊಡ್ದ ಅಪರಾಧವೆಂದು ಬಿಂಬಿಸುತ್ತಿರುವುದು ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗಿದೆ. ಬೆಳೆಯುವ ಮಕ್ಕಳಿಗೆ ಇದರ ಬಗ್ಗೆ ತಪ್ಪು ಭಾವನೆ ಮೂಡಿಸಬಾರದು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಶಾಲೆಗಳಲ್ಲಿ ಮಕ್ಕಳು ಬಳಸುವ ಶೌಚಾಲಯವನ್ನು ತಾವೇ ಸ್ವಚ್ಛಗೊಳಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಇದನ್ನು ದೊಡ್ಡ ಅಪರಾಧವೆಂಬಂತೆ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವುದನ್ನು ಸರ್ಕಾರ ಕೈಬಿಡಬೇಕೆಂದು ನಿವೃತ್ತ ಐಎಎಸ್ ಅಧಿಕಾರಿ ಎನ್.ಪ್ರಭಾಕರ್ ಹೇಳಿದರು. ಅವರು ತಾಲೂಕಿನ ಹಂಚಾಳ ಬಳಿಯಿರುವ ಈಶ್ವರಮ್ಮಾಜಿ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ೯ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿಯೇ ಸ್ವಚ್ಛ ಮಾಡುತ್ತಿದ್ದರು

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿಯವರೇ ಶೌಚಾಲಯವನ್ನು ಸುಚಿಗೊಳಿಸುತ್ತಿದ್ದರು. ಪ್ರಧಾನಿ ಮೋದಿ ರಸ್ತೆಗಳನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛ ಭಾರತ್ ಆಂದೋಲನ ಅಭಿಯಾನ ಮಾಡುತ್ತಿದ್ದಾರೆ, ಹೀಗಿರುವಾಗ ಶಾಲೆಗಳಲ್ಲಿ ಮಕ್ಕಳೇ ಬಳಸುವ ಶೌಚಾಲಯವನ್ನು ಅವರೇ ಸ್ವಚ್ಛ ಮಾಡಿಕೊಂಡರೆ ಅದು ದೊಡ್ದ ಅಪರಾಧವೆಂದು ಬಿಂಬಿಸುತ್ತಿರುವುದು ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗಿದೆ ಎಂದರು.

ಮಕ್ಕಳಿಗೆ ಸುಚಿತ್ವದ ಬಗ್ಗೆ ಅರಿವು ಮೂಡಸಬೇಕಾದ ಸರ್ಕಾರವೇ ತಪ್ಪು ಸಂದೇಶ ನೀಡಿದಂತಾಗಿದೆ. ಬೆಳೆಯುವ ಮಕ್ಕಳಿಗೆ ಇದರ ಬಗ್ಗೆ ಜಾಗೃತಿ ಮೂಡಿಸಬೇಕೆ ಹೊರತು ಅವರಲ್ಲಿ ತಪ್ಪು ಭಾವನೆ ಮೂಡಿಸಬಾರದು ಎಂದರು.

ಮತದಾನದಲ್ಲಿ ತಪ್ಪದೆ ಪಾಲ್ಗೊಳ್ಳಿ

ನಮ್ಮ ದೇಶಲ್ಲಿ ನಡೆಯುವಷ್ಟು ಚುನಾವಣೆಗಳು ಯಾವ ದೇಶದಲ್ಲಿಯೂ ನಡೆಯಲ್ಲ, ಆದರೆ ಮತದಾನದ ಪ್ರಮಾಣ ಮಾತ್ರ ಕಡಿಮೆ, ಮತದಾನದ ಮಹತ್ವದ ಅರಿವಿನ ಕೊರತೆ ಯುವಕರಲ್ಲಿ ಎದ್ದು ಕಾಣುತ್ತಿದೆ,ಮತದಾನ ಕಡಿಮೆಯಾದರೆ ನಿಷ್ಟಾವಂತ ರಾಜರಾಕರಣಿಗಳು ಅಧಿಕಾರಕ್ಕೆ ಬಾರದೆ ಭ್ರಷ್ಟರು ಬಂದು ದೇಶವನ್ನು ಲೂಟಿ ಮಾಡುತ್ತಾರೆ. ಆದ್ದರಿಂದ ಮತದಾನದಲ್ಲಿ ಪಾಲ್ಗೊಂಡು ಉತ್ತಮರನ್ನು ಚುನಾಯಿಸಿ ದೇಶವನ್ನು ಪ್ರಗತಿಯತ್ತ ಸಾಗುವುದರಲ್ಲಿ ಒಬ್ಬರಾಗಿ ಎಂದರು.

ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಚಂದ್ರಶೇಖರ್, ಬೆಸ್ಕಾಂ ಎಇಇ ರಾಮಕೃಷ್ಣಪ್ಪ, ಬಂಧನ್ ಬ್ಯಾಂಕಿನ ವ್ಯವಸ್ಥಾಪಕ ಅಮೃತ್, ಸಂಸ್ಥಯ ಕಾರ್ಯದರ್ಶಿ ಅಮರನಾಥ್, ಅರುಣ್ ಪ್ರಸಾದ್, ಮುನಿರೆಡ್ಡಿ, ಶಿಕ್ಷಕರಾದ ಮಾಗೇರಿ ವೆಂಕಟೇಶ್, ಸತೀಶ್, ಪಾಪಣ್ಣ ಮತ್ತಿತರರು ಇದ್ದರು.