120 ಶಾಲಾ ವಿದ್ಯಾರ್ಥಿಗಳಿಗೆ ಇರುವುದೊಂದೇ ಬಸ್ಸು

| Published : Jul 25 2024, 01:21 AM IST

ಸಾರಾಂಶ

9.15ಕ್ಕೆ ಬಸ್ ಮಾರ್ಗ ಸಂಖ್ಯೆ 27ರ ಬಸ್ಸು ಸಂಚಾರ ರದ್ದುಗೊಳಿಸಿರುವ ಕಾರಣ, ಮೊದಲಿನಂತೆ ನಿಗದಿತ ಸಮಯಕ್ಕೆ ಬಸ್‌ ಸಂಚರಿಸುತ್ತಿಲ್ಲ. ಈ ಬಸ್ಸು ಗುಡಿಬಂಡೆಯಿಂದ 9.40 ಕ್ಕೆ ಹೊರಟು ಬೀಚಗಾನಹಳ್ಳಿ ಕ್ರಾಸ್ ಗೆ 10.20 ಕ್ಕೆ ತಲುಪತ್ತದೆ. ಇದರಿಂದ ಪ್ರತಿನಿತ್ಯ ನಾವು ತಡವಾಗಿ ಶಾಲೆಗೆ ಹೋಗುವಂತಾಗಿದೆ

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಸರ್ಕಾರವೇನೋ ಮಕ್ಕಳಿಗೆ ಉಚಿತ ಶಿಕ್ಷಣ ಎಂದು ಘೋಷಣೆ ಮಾಡಿದೆ. ಆದರೆ ಮಕ್ಕಳು ಉಚಿತವಾಗಿ ವಿದ್ಯಾಭ್ಯಾಸ ಪಡೆದುಕೊಳ್ಳಲು ಸಾರಿಗೆ ಅವ್ಯವಸ್ಥೆ ದೊಡ್ಡ ಸಮಸ್ಯೆಯಾಗಿದೆ. ಇದರಿಂದಾಗಿ ಹಲವಾರು ಗ್ರಾಮೀಣ ಮಕ್ಕಳು ಸಮಯಕ್ಕೆ ಸರಿಯಾಗಿ ಸಾಲೆಗೆ ತಲುಪಲು ಸಾಧ್ಯವಾಗುತ್ತಿಲ್ಲ.

ಇದಕ್ಕೊಂದು ತಾಜಾ ಉದಾಹರಣೆ ಗುಡಿಬಂಡೆ ತಾಲೂಕಿನ ಆದರ್ಶ ವಿದ್ಯಾಲಯ. ಈ ಶಾಲೆಯ ವಿದ್ಯಾರ್ಥಿಗಳು ಒಂದು ದಿನವೂ ಸಮಯಕ್ಕೆ ಸರಿಯಾಗಿ ಶಾಲೆಗೆ ತೆರಳಲು ಆಗುತ್ತಿಲ್ಲ. ಇದಕ್ಕೆ ಕಾರಣ ಇಲ್ಲಿರುವ 120 ಮಕ್ಕಳಿಗೆ ಇರುವುದು ಒಂದೇ ಬಸ್‌. ಮಕ್ಕಳು ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡೇ ಪ್ರಯಾಣಿಸಬೇಕಾದ ಪರಿಸ್ಥಿತಿ ಉಟಾಗಿದೆ.

ಮಕ್ಕಳ ಜತೆ ಸಾರ್ವಜನಿಕರು

ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿಯಿರುವ ಆದರ್ಶ ವಿದ್ಯಾಲಯದಲ್ಲಿ ತಾಲೂಕಿನ ವಿವಿಧ ಕಡೆಯಿಂದ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲೆಗೆ ಪ್ರತಿನಿತ್ಯ ಸುಮಾರು 120 ಮಂದಿ ವಿದ್ಯಾರ್ಥಿಗಳು ಸರ್ಕಾರಿ ಬಸ್‌ನಲ್ಲಿ ಸಂಚರಿಸುದ್ದಾರೆ. ಆದರೆ ಶಾಲಾ ಸಮಯಕ್ಕೇ ಆಗಮಿಸುವುದು ಕೇವಲ ಒಂದು ಬಸ್‌ ಮಾತ್ರ. ಈ ಬಸ್ ನಲ್ಲಿಯೇ 120 ಮಂದಿ ವಿದ್ಯಾರ್ಥಿಗಳು ಪ್ರಯಾಣಿಸಬೇಕಿದೆ. ಇವರ ಜೊತೆಗೆ ಸಾರ್ವಜನಿಕರೂ ಸಹ ಇದೇ ಬಸ್‌ನಲ್ಲಿ ಸಂಚರಿಸಬೇಕಿದೆ. 60 ಆಸನಗಳ ಸರ್ಕಾರಿ ಬಸ್ ನಲ್ಲಿ ಅದಕ್ಕಿಂತಲೂ ಎರಡು ಪಟ್ಟು ಹೆಚ್ಚು ಜನರು ಪ್ರಯಾಣಿಸಬೇಕಿದೆ.

ಹಲವಾರು ವರ್ಷಗಳಿಂದ ಈ ಭಾಗದ ವಿದ್ಯಾರ್ಥಿಗಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅನೇಕ ಬಾರಿ ಈ ಸಂಬಂಧ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೂ ಸಹ ದೂರು ನೀಡಲಾಗಿದೆ. ಆದರೂ ಸಹ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ, ಏನಾದರೂ ದೊಡ್ಡ ಅನಾಹುತವಾದರೆ ಆಗ ನೋಡೋಣ ಎಂಬುವ ಧೋರಣೆ ತಾಳಿದಂತಿದೆ.

ಬಸ್‌ ಸಂಚಾರ ವೇಳೆ ಬದಲು

ಈ ಕುರಿತು ‘ಕನ್ನಡಪ್ರಭ’ ಜತೆ ಮಾತನಾಡಿದ ವಿದ್ಯಾರ್ಥಿಗಳು, ಈ ಹಿಂದೆ ಗುಡಿಬಂಡೆ ಬೀಚಗಾನಹಳ್ಳಿ ಕ್ರಾಸ್ ಮಾರ್ಗವಾಗಿ ಬೆಳಗ್ಗೆ 9ಕ್ಕೆ ಮಾರ್ಗ ಸಂಖ್ಯೆ 4/5ರ ಬಸ್ಸು ಅಲ್ಲದೇ, 9.15ಕ್ಕೆ ಬಸ್ ಮಾರ್ಗ ಸಂಖ್ಯೆ 27ರ ಬಸ್ಸು ಸಂಚಾರ ರದ್ದುಗೊಳಿಸಿರುವ ಕಾರಣ, 9.15ಕ್ಕೆ ಗುಡಿಬಂಡೆಯಿಂದ ಹೊರಡುತ್ತಿದ್ದ ಮಾರ್ಗ ಸಂಖ್ಯೆ 27ರ ಬಸ್ಸು ಮೊದಲಿನಂತೆ ನಿಗದಿತ ಸಮಯಕ್ಕೆ ಸಂಚರಿಸುತ್ತಿಲ್ಲ. ಈ ಬಸ್ಸು ಗುಡಿಬಂಡೆಯಿಂದ 9.40 ಕ್ಕೆ ಹೊರಟು ಬೀಚಗಾನಹಳ್ಳಿ ಕ್ರಾಸ್ ಗೆ 10.20 ಕ್ಕೆ ತಲುಪತ್ತದೆ. ಇದರಿಂದ ಪ್ರತಿನಿತ್ಯ ನಾವು ತಡವಾಗಿ ಶಾಲೆಗೆ ಹೋಗುವಂತಾಗಿದೆ ಎಂದು ದೂರಿದರು. 23ಜಿಯುಡಿ1: ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ನ ಆದರ್ಶ ವಿದ್ಯಾಲಯದ 120 ವಿದ್ಯಾರ್ಥಿಗಳು ಒಂದೇ ಬಸ್ ನಲ್ಲಿ ಪ್ರಯಾಣಿಸುತ್ತಿರುವುದು.