ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿರುವ ಸಾವುಗಳ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣದ ಪ್ರವಾಸಿಮಂದಿರದಲ್ಲಿ ಭಾನುವಾರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ ಸಭೆ ನಡೆಸಿದರು.ಹಾಸನದಲ್ಲಿ ಹೃದ್ರೋಗ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ಮೊದಲು ಪೂರ್ಣಗೊಳ್ಳಲಿ. ಆ ಬಗ್ಗೆ ನಾನು ಕೂಡ ಗುತ್ತಿಗೆದಾರನ ಜೊತೆ ಮಾತನಾಡುತ್ತೇನೆ. ಕಟ್ಟಡ ಪೂರ್ಣಗೊಂಡ ನಂತರ ಅಗತ್ಯವಿರುವ ಸಲಕರಣೆಗಳನ್ನು ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸೋಣ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬರೇ ಹೃದ್ರೋಗ ತಜ್ಞರಿದ್ದಾರೆ. ಇನ್ನೂ ಎರಡು, ಮೂರು ಹೃದ್ರೋಗ ತಜ್ಞರ ನೇಮಕಕ್ಕೆ ಆರೋಗ್ಯ ಸಚಿವರಲ್ಲಿ ಮನವಿ ಮಾಡುತ್ತೇನೆ ಎಂದರು. ಮರಣೋತ್ತರ ಪರೀಕ್ಷೆಗೆ ಸಹಕರಿಸ್ತಿಲ್ಲ:
ಈವರೆಗೆ ಎಂಟು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆದಿದೆ. ಹದಿನಾಲ್ಕು ಮೃತದೇಹಗಳು ಮರಣೋತ್ತರ ಪರೀಕ್ಷೆ ಆಗಿಲ್ಲ. ಇನ್ನೂ ನಾಲ್ಕು ಮರಣೋತ್ತರ ಪರೀಕ್ಷೆಯ ವರದಿಗಳು ಬರಬೇಕಿದೆ. ಐವರು ಹೃದಯಾಘಾತದಿಂದ ಮೃತಪಟ್ಟಿರುವುದು ಖಚಿತವಾಗಿದೆ ಎಂದು ಸಭೆಯಲ್ಲಿ ಡಿಎಚ್‌ಓ ಅನಿಲ್‌ಕುಮಾರ್ ಮಾಹಿತಿ ನೀಡಿದರು.ಸಾವಿಗೆ ಹೃದಯಾಘಾತ ಕಾರಣವೋ ಅಥವಾ ಬೇರೆ ಕಾರಣವೋ ಎಂದು ತಿಳಿಯಲು ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ತಂಡ ಈವರೆಗೆ ಸಾವು ಸಂಭವಿಸಿರುವವರ ಮನೆಗಳಿಗೆ ಭೇಟಿ ನೀಡಲಾಗಿದೆ. ಶವದ ಮರಣೋತ್ತರ ಪರೀಕ್ಷೆ ಮಾಡಲು ಅವಕಾಶ ಕೇಳಿದರೆ ಬಹುತೇಕರು ಅದಕ್ಕೆ ಒಪ್ಪುತ್ತಿಲ್ಲ. ಹಾಗಾಗಿ ಈ ಎಲ್ಲಾ ಸಾವುಗಳಿಗೆ ಹೃದಯಾಘಾತವೇ ನಿಖರ ಕಾರಣ ಎಂದು ಹೇಳಲು ಆಗುತ್ತಿಲ್ಲ ಎಂದು ಡಿಎಚ್‌ಒ ಅಳಲು ತೋಡಿಕೊಂಡರು.
ಮೃತದೇಹದ ಮರಣೋತ್ತರ ಪರೀಕ್ಷೆ ಆದರೆ ಮಾತ್ರ ನಿಖರ ಕಾರಣ ತಿಳಿಯುತ್ತದೆ. ಹಾಗಾಗಿ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಮಾಡಲು ಕುಟುಂಬಸ್ಥರಲ್ಲಿ ಮನವಿ ಮಾಡಿ. ಪ್ರತಿಯೊಂದು ಕೇಸ್‌ಗೂ ಹಿಸ್ಟರಿ ಬರೆಯಬೇಕು. ಹೃದಯಾಘಾತದಿಂದ ಮೃತಪಟ್ಟರೆ ಆ ಊರುಗಳಿಗೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿ ಎಂದು ಸಚಿವರು ನಿರ್ದೇಶಿಸಿದರು.ಕಣ್ಣಿನ ಆಪರೇಷನ್ ಆಗಿತ್ತು:ಜಿಲ್ಲೆಯಲ್ಲಿ ಇಷ್ಟೆಲ್ಲಾ ಸಾವುಗಳು ಸಂಭವಿಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದಿಲ್ಲ ಎನ್ನುವ ಭಾರೀ ಆಕ್ಷೇಪ ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ ಸಚಿವರು ಸಭೆಯಲ್ಲಿ ಅದಕ್ಕೆ ಕಾರಣವನ್ನೂ ತಿಳಿಸಿದರು.
ನಾನು ಜಿಲ್ಲೆಗೆ ಉಸ್ತುವಾರಿ ಸಚಿವನಾಗಿ ಮೊದಲ ಬಾರಿ ಬಂದಾಗ ಕಾರ್ಯಕರ್ತರು ಪಟಾಕಿ ಸಿಡಿಸಿದಾಗ ಅದು ನನ್ನ ಕಣ್ಣಿಗೆ ಹಾರಿತ್ತು. ಅದರಿಂದ ನನ್ನ ಕಣ್ಣಿನ ರೆಟಿನಾಗೆ ಹಾನಿಯಾಗಿತ್ತು. ಈಗ ಅದರ ಶಸ್ತ್ರಚಿಕಿತ್ಸೆ ಮಾಡಿಸಿದ್ದೆ. ಹಾಗಾಗಿ ನಾನು ಮೂರು ತಿಂಗಳಿನಿಂದ ಜಿಲ್ಲೆಗೆ ಬರಲಾಗಲಿಲ್ಲ ಎಂದರು.* ಬಾಕ್ಸ್‌ನ್ಯೂಸ್.................ದೇವೇಗೌಡ್ರು, ರೇವಣ್ಣರನ್ನ ಹೊಗಳಿದ ಸಚಿವ ರಾಜಣ್ಣಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ರಾಜಣ್ಣ ಅವರು ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರು ಹಾಗೂ ಎಚ್ ಡಿ ರೇವಣ್ಣರನ್ನ ಹಾಡಿ ಹೊಗಳಿದ್ದಾರೆ. ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗೂಳಿ ಹೊನ್ನೇನಹಳ್ಳಿ ಗ್ರಾಮದಲ್ಲಿ ಭಾನುವಾರ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ, ನಮ್ಮ ಕಾಲಘಟ್ಟದಲ್ಲಿ ಆಗಿರುವ ಕಟ್ಟಡಗಳನ್ನು ನೋಡಿ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳು ಹಾಡಿ ಹೊಗಳುತ್ತಾರೆ ಎಂದು ಹೇಳುತ್ತಾ ದೇವೇಗೌಡರು ಈ ಜಿಲ್ಲೆಗೆ ಏನೆಲ್ಲಾ ಮಾಡಿದ್ದಾರೆ. ಅವರನ್ನ ಈ ಜೆಲ್ಲೆಯ ಜನ ಎಷ್ಟು ನೆನಪು ಮಾಡ್ಕೋತಾರೆ. ಅವರು ಈ ತರಹದ ಕೆಲಸಗಳನ್ನು ಶಕ್ತಿಮೀರಿ ಮಾಡಿದ್ದಾರೆ. ರೇವಣ್ಣನಿಗೆ ಅಭಿವೃದ್ಧಿ ವಿಚಾರದಲ್ಲಿ ಹಾಸನ ಜಿಲ್ಲೆಯಲ್ಲಿ ಕಾಣುವುದು ಮೂರೇ ತಾಲೂಕುಗಳು, ಅವು ಚನ್ನರಾಯಪಟ್ಟಣ, ಹೊಳೆನರಸೀಪುರ ಹಾಗೂ ಅರಸೀಕೆರೆ ಎಂದರು. ರೇವಣ್ಣ ಉತ್ತಮ ಕೆಲಸಗಾರ. ಅವನು ಮಾಡುವ ಅಭಿವೃದ್ಧಿ ಕೆಲಸಗಳಿಗೆ ನಮ್ಮ ಅಡ್ಡಿ ಇಲ್ಲ. ನಾವು ಸಾರ್ವಜನಿಕ ಕೆಲಸಗಳಿಗೆ ಸಹಕಾರ ನೀಡುತ್ತೇವೆ. ರೇವಣ್ಣ ತುಂಬಾ ಆಸಕ್ತಿ ವಹಿಸಿ ಕೆಲಸ ಮಾಡ್ತಾರೆ. ಅವರಿಗೆ ನಮ್ಮ ಸಹಮತವಿದೆ. ಯಾರೇ ಕೆಲಸ ಮಾಡಿದರೂ ಜನರಿಗಾಗಿಯೇ ಮಾಡೋದು. ಅವರ ಸ್ವಾರ್ಥಕ್ಕಲ್ಲ ಜನಪರ ಕೆಲಸ ಮಾಡುವ ಯಾರಿಗಾದರೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.