ಮಾತಿನಿಂದ ಎಲ್ಲವೂ ಸಾಧ್ಯ ನಿಜ, ಆದರೆ ಮೌನದಲ್ಲಿ ಶ್ರೇಷ್ಠತೆ ಇದೆ. ಮೌನದಲ್ಲಿ ಬೆಲೆ ಕಟ್ಟಲಾರದ ಸಂಪತ್ತಿದೆ ಎಂದು ಶಿರಹಟ್ಟಿಯ ಶ್ರೀ ಫಕೀರ ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು
ಕುಂದಗೋಳ: ಮಾತಿನಿಂದ ಎಲ್ಲವೂ ಸಾಧ್ಯ ನಿಜ, ಆದರೆ ಮೌನದಲ್ಲಿ ಶ್ರೇಷ್ಠತೆ ಇದೆ. ಮೌನದಲ್ಲಿ ಬೆಲೆ ಕಟ್ಟಲಾರದ ಸಂಪತ್ತಿದೆ ಎಂದು ಶಿರಹಟ್ಟಿಯ ಶ್ರೀ ಫಕೀರ ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು
ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಜುಲೈ 3ರಿಂದ ಲೋಕಕಲ್ಯಾಣಕ್ಕಾಗಿ 21 ದಿನಗಳ ಕಾಲ ಅಭಿನವ ಬಸವಣ್ಣಜ್ಜನವರು ಹಮ್ಮಿಕೊಂಡಿದ್ದ ಮೌನಾನುಷ್ಠಾನದ ಮಂಗಲೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬುದನ್ನು ಎಂದಿಗೂ ಮರೆಯಬಾರದು. ಮೌನದಲ್ಲಿ ವಿಶೇಷತೆ ಇದೆ ಎಂಬುದನ್ನು ಅಭಿನವ ಬಸವಣ್ಣಜ್ಜನವರು ತೋರಿಸಿಕೊಟ್ಟಿದ್ದಾರೆ. ಮಾತು ಬೆಳ್ಳಿ, ಮೌನ ಬಂಗಾರ. ಗುರುಗಳಲ್ಲಿನ ಜ್ಞಾನವನ್ನು ಕದ್ದ ಶಿಷ್ಯ ಅದನ್ನು ಭಕ್ತರಿಗೆ ಹಂಚುತ್ತಾನೆಂಬುದಕ್ಕೆ ಬಸವಣ್ಣಜ್ಜನವರೇ ಸಾಕ್ಷಿಯಾಗಿದ್ದಾರೆ ಎಂದು ಬಣ್ಣಿಸಿದರು.
ಮುಳ್ಳಹಳ್ಳಿ ವಿರಕ್ತಮಠದ ಶ್ರೀ ಶಿವಯೋಗಿ ಚನ್ನವೀರೇಶ್ವರ ಸ್ವಾಮೀಜಿ ಹಾಗೂ ಪಂಚಗ್ರಹ ಹಿರೇಮಠದ ಶ್ರೀ ಶಿಥಿಕಂಠೇಶ್ವರ ಸ್ವಾಮೀಜಿ ಮಾತನಾಡಿ, ಅಭಿನವ ಶ್ರೀ ಬಸವಣ್ಣಜ್ಜನವರ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳು ಎಂದಿಗೂ ಸ್ಮರಣೀಯವಾಗಿರುತ್ತವೆ ಎಂದರು.21 ದಿನಗಳ ಕಾಲ ಮೌನಾನುಷ್ಠಾನ ಕೈಗೊಂಡಿದ್ದ ಅಭಿನವ ಬಸವಣ್ಣಜ್ಜನವರು ಮಾತನಾಡಿ, ಮೌನಾನುಷ್ಠಾನದಲ್ಲಿ ತನು, ಮನ, ಧನದಿಂದ ಭಾಗಿಯಾದ, ಪೂಜಾ ಕೈಂಕರ್ಯ ಮತ್ತು ಸೇವಾ ಕಾರ್ಯಗಳಲ್ಲಿ ಭಾಗಿಯಾಗಿ ಭಕ್ತಿ ಸಮರ್ಪಿಸಿದ ಪ್ರತಿಯೊಬ್ಬರಿಗೂ ಸಕಲ ಐಶ್ವರ್ಯ ಕರುಣಿಸಲಿ ಎಂದರು.
ಬಿಜೆಪಿ ಮುಖಂಡ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ರಾಘವೇಂದ್ರಗೌಡ ಪಾಟೀಲ ಮಾತನಾಡಿದರು. ನಂತರ ಭಕ್ತರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಮಹಾ ಅನ್ನಪ್ರಸಾದ ಸೇವೆ ನೆರವೇರಿತು.ವೇದಿಕೆಯ ಮೇಲೆ ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರೇಶ್ವರ ಸ್ವಾಮಿಗಳು, ಶ್ರೀ ಶಿವಯೋಗೀಶ್ವರ ಸ್ವಾಮಿಗಳು, ಶಿತಿಕಂಠೇಶ್ವರ ಶಿವಾಚಾರ್ಯ ಸ್ವಾಮೀಜಿ, ದುಮ್ಮವಾಡ ಸರ್ಪಭೂಷಣ ಶ್ರೀಗಳು, ಕಮಡೊಳ್ಳಿ ಅಭಿನವ ರಾಚೋಟೇಶ್ವರ ಸ್ವಾಮೀಜಿ, ಸೊರಬದ ಶಿವಬಸವ ದೇವರು, ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ, ಬಿ.ಆರ್. ಪಾಟೀಲ, ಎ.ಬಿ. ಉಪ್ಪಿನ, ಬಸವರಾಜ ಕುಂದಗೋಳಮಠ, ಬಸವರಾಜ ಚಿಕ್ಕಹರಕುಣಿ, ಅಶೋಕ ಹಸಬಿ, ಬಸವರಾಜ ಕಟ್ಟಿಮನಿ, ಜಿ.ಆರ್. ಹಿರೇಮಠ, ಶಿವಾನಂದ ಬೆಂತೂರ, ರಮೇಶ ಕೊಪ್ಪದ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.