ಶಿಕ್ಷಣ ಇಲಾಖೆ ಸುಪರ್ದಿಗೆ ಬಿಬಿಎಂಪಿ ಶಾಲೆ ನೀಡುವ ಕ್ರಮಕ್ಕೆ ತೀವ್ರ ವಿರೋಧ

| Published : Jan 09 2024, 02:00 AM IST / Updated: Jan 09 2024, 03:16 PM IST

ಶಿಕ್ಷಣ ಇಲಾಖೆ ಸುಪರ್ದಿಗೆ ಬಿಬಿಎಂಪಿ ಶಾಲೆ ನೀಡುವ ಕ್ರಮಕ್ಕೆ ತೀವ್ರ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಬಿಬಿಎಂಪಿ ಶಾಲೆಗಳನ್ನು ಶಿಕ್ಷಣ ಇಲಾಖೆ ಸುಪರ್ದಿಗೆ ನೀಡುವ ಕ್ರಮ ವಿರೋಧಿಸಿ ಹಾಗೂ ತಮಗೆ ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿ ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರು ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ಶಾಲೆಗಳನ್ನು ಶಿಕ್ಷಣ ಇಲಾಖೆ ಸುಪರ್ದಿಗೆ ನೀಡುವ ಕ್ರಮ ವಿರೋಧಿಸಿ ಹಾಗೂ ತಮಗೆ ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿ ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರು ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಗಳವಾರದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಕರ್ತವ್ಯ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪಾಲಿಕೆ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ವಹಿಸಲು ನಿರ್ಧರಿಸಲಾಗಿದೆ. ಇದರಿಂದ ಬಿಬಿಎಂಪಿ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದಲೇ ಶಿಕ್ಷಕರನ್ನು ನೇಮಿಸಲಾಗುತ್ತದೆ. ಇದರಿಂದ ಬಿಬಿಎಂಪಿ ಶಾಲೆಗಳಲ್ಲಿ ಸದ್ಯ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 772 ಶಿಕ್ಷಕರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಹಾಗಾಗಿ ಬಿಬಿಎಂಪಿ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ವಹಿಸಬಾರದು, ಒಂದು ವೇಳೆ ವಹಿಸಿದರೂ ಹೊರಗುತ್ತಿಗೆ ಶಿಕ್ಷಕರಿಗೆ ಸೇವಾ ಭದ್ರತೆ ವಹಿಸಬೇಕು ಎಂದು ಶಿಕ್ಷಕರು ಆಗ್ರಹಿಸಿದರು.

ಹೊರಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನು ನೇಮಿಸುವ ಸಂಸ್ಥೆಯನ್ನು ರದ್ದು ಮಾಡಬೇಕು, ಹೊರಗುತ್ತಿಗೆ ಶಿಕ್ಷಕರಿಗೆ ಬಿಬಿಎಂಪಿಯಿಂದಲೇ ನೇರವಾಗಿ ವೇತನ ಪಾವತಿಸಬೇಕು. ಮಹಿಳಾ ಶಿಕ್ಷಕಿ-ಉಪನ್ಯಾಸಕರಿಗೆ ಸರ್ಕಾರದಿಂದ ಸಿಗುವಂತೆ ಹೆರಿಗೆ ರಜೆ, ಮಕ್ಕಳ ಅನಾರೋಗ್ಯ ರಜೆ ಸೇರಿದಂತೆ ವೇತನ ಸಹಿತ ರಜೆಗಳನ್ನು ಹೊರಗುತ್ತಿಗೆ ಮಹಿಳಾ ಶಿಕ್ಷಕಿಯರಿಗೂ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಪರೀಕ್ಷಾ ಸಮಯದಲ್ಲಿ ಸಮಸ್ಯೆ:
ಒಂದೂವರೆ ತಿಂಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಪರೀಕ್ಷೆಗಳು ನಡೆಯಲಿವೆ. ಈ ಅವಧಿಯಲ್ಲಿ ಹೊರಗುತ್ತಿಗೆ ಶಿಕ್ಷಕರು ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದು, ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಅಲ್ಲದೆ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಕ್ಕಳನ್ನು ತಯಾರಿ ಮಾಡದಿದ್ದರೆ ಬಿಬಿಎಂಪಿ ಶಾಲೆಗಳ ಫಲಿತಾಂಶದ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆಗಳಿವೆ.