ಸಾರಾಂಶ
- ಆಸ್ಪತ್ರೆ ಎದುರು ವೈದ್ಯರ ನೇಮಕಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ । ಶಾಸಕರು, ಸರ್ಕಾರದ ವಿರುದ್ಧಆರೋಪ
ಕನ್ನಡಪ್ರಭ ವಾರ್ತೆ, ಶೃಂಗೇರಿಕ್ಷೇತ್ರದಲ್ಲಿ ಅಭಿವೃದ್ಧಿಯಿಲ್ಲ. ಆಡಳಿತ ಕುಸಿದು ಬಿದ್ದಿದೆ. ಆಸ್ಪತ್ರೆಗೆ ಹೋದರೆ ವೈದ್ಯರಿಲ್ಲದೇ ಸಾಯುವಂತ ಪರಿಸ್ಥಿತಿ, ಜಮೀನಿಗೆ ಹೋದರೆ ಆನೆಯಿಂದ ತುಳಿಸಿಕೊಳ್ಳುವ, ಹಾಸ್ಟೇಲುಗಳಲ್ಲಿ ನೇಣು ಹಾಕಿಕೊಳ್ಳುವ ಸ್ಥಿತಿ. ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯ, ದ್ವೇಷದ ರಾಜಕಾರಣ ತಾಂಡವಾಡುತ್ತಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎದುರು ವೈದ್ಯರ ನೇಮಕ ಹಾಗೂ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿ, 2004ಕ್ಕೆ ಮೊದಲು ವೈದ್ಯರು, ಸಿಬ್ಬಂದಿ ಎಲ್ಲರು ಇದ್ದು, ಉತ್ತಮ ವ್ಯವಸ್ಥೆಯಿಂದ ಸಾರ್ವಜನಿ ಕರಿಗೆ ಉತ್ತಮ ಸೇವೆ ಸಿಗುತ್ತಿತ್ತು. ಆದರೆ ಈಗ ವೈದ್ಯರು ಸೇರಿ ಕೇವಲ 20 ಜನರು ಮಾತ್ರ ಇದ್ದಾರೆ. ಇದು ತಾಲೂಕು ಕೇಂದ್ರ ಆಸ್ಪತ್ರೆ. ಇರುವ ವೈದ್ಯರೇ ಹೆದರಿ ಹೋಗುತ್ತಿದ್ದಾರೆ. ಶಾಸಕರ ಹಿಂಬಾಲಕರ, ಮರಿ ಪುಡಾರಿಗಳ ದಬ್ಬಾಳಿಕೆ, ಬೆದರಿಕೆಗೆ ಯಾರು ಕೆಲಸ ಮಾಡಲು ನಿಲ್ಲುತ್ತಿಲ್ಲ ಎಂದು ಆರೋಪಿಸಿದರು.ಎನ್.ಆರ್.ಪುರ ಆಸ್ಪತ್ರೆಯಲ್ಲಿ ಆಡಳಿತ ಪಕ್ಷದ ಕಾರ್ಯಕರ್ತನೊಬ್ಬ ಆಪರೇಷನ್ ಥಿಯೇಟರ್ ಗೆ ಬಾಗಿಲು ದೂಡಿ ಒಳಹೋಗಿ ವೈದ್ಯರನ್ನು ಬೆದರಿಸಿದ್ದಾರೆಂದರೆ ಯಾವ ಮಟ್ಟದ ವ್ಯವಸ್ಥೆ ಇದೆ ಎಂದು ಊಹಿಸಲು ಆಗುತ್ತಿಲ್ಲ.
ತುರ್ತು ಸಂದರ್ಭ, ಅಪಘಾತಗಳ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ವೈದ್ಯರಿಲ್ಲ. ಚಿಕ್ಕಮಗಳೂರಿಗೋ, ಮಂಗಳೂರಿಗೋ ಕರೆದೊಯ್ಯಬೇಕು. ರಸ್ತೆ ಯೆಲ್ಲ ಹೊಂಡಗುಂಡಿಗಳು, ಹೆಣ ಕೊಯ್ಯಲು ವೈದ್ಯರಿಲ್ಲ.ಶಾಸಕರಿಗೆ ಇದೆಲ್ಲ ಬೇಕಿಲ್ಲ. ಆಸ್ಪತ್ರೆಯಲ್ಲಿ ವ್ಯವಸ್ಥೆ ಹದಗೆಟ್ಟಿದೆ. 100 ಬೆಡ್ ಆಸ್ಪತ್ರೆ ಮಂಜೂರು ಮಾಡಿಸಿದ್ದು ನಾವೇ ಎಂದು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರ ವಿದ್ದಾಗ ಬೊಮ್ಮಾಯಿ ಸಿಎಂ ಆಗಿದ್ದಾಗ ₹68 ಲಕ್ಷ ಅನುದಾನ ವಿಟ್ಟಿದ್ದು. ಮೊದಲು ಇರುವ ಆಸ್ಪತ್ರೆಗೆ ವೈದ್ಯರು, ಅಗತ್ಯ ಸಿಬ್ಬಂದಿ ನೇಮಕ ಮಾಡಿ, ಮೂಲ ಸೌಕರ್ಯ ನೀಡಿ. ಈ ಆಸ್ಪತ್ರೆಯನ್ನೇ ಮೇಲ್ದರ್ಜೆಗೆ ಏರಿಸಿ ಸೌಲಭ್ಯ ಕಲ್ಪಿಸಿ. ಆಮೇಲೆ ಹೊಸ ಕಟ್ಟಡ ಕಟ್ಟಿ ಸ್ಥಳಾಂತರ ಮಾಡಿ.ಜನರಿಗೆ ಅಗತ್ಯವಾಗಿ ಬೇಕಿರುವುದು ವೈದ್ಯರ ಸೇವೆ,ಮೂಲಭೂತ ಸೌಕರ್ಯ ಮೊದಲು ಅದನ್ನು ನೀಡಿ ಎಂದರು.ಕ್ಷೇತ್ರದ ಶಾಸಕರಿಗೆ ಜವಾಬ್ದಾರಿ ಇಲ್ಲ. ಭರವಸೆ, ಶಂಕುಸ್ಥಾಪನೆ, ಗುದ್ದಲಿ ಪೂಜೆಗಳೇ ಸಾಧನೆ. ಸಾವಿನ ಮನೆಗೂ ಹೋಗಿ ರಾಜಕಾರಣ ಮಾಡುತ್ತಾರೆ. ಆನೆ ಹಾವಳಿಗೆ ಶಾಸಕರ ನಿರ್ಲಕ್ಷವೇ ಕಾರಣ. ಕೆಎಸ್ ಆರ್ ಟಿಸಿ ಡಿಪೋ ಕಾಮಗಾರಿ ಮೀನ ಮೇಷ ಎಣಿಸುತ್ತಿದೆ. ರಸ್ತೆಗಳಿಗಿಂತ ಜಾಸ್ತಿ ಹೊಂಡಗುಂಡಿಗಳು ಜಾಸ್ತಿಯಿದೆ. ಕ್ಷೇತ್ರಕ್ಕೆ ಶೂನ್ಯ ಅಭಿವೃದ್ಧಿ, ಆನೆಭಾಗ್ಯ, ನೇಣು ಭಾಗ್ಯಗಳು ಸರ್ಕಾರದ ಕೊಡುಗೆಗಳಾಗಿವೆ ಎಂದು ಟೀಕಿಸಿದರು.
ಶಾಸಕರ ಕೆಡಿಪಿ ತ್ರೈಮಾಸಿಕ ಸಭೆಗಳು ನಡೆಯದೇ ಯಾವುದೋ ಕಾಲ ಕಳೆದಿದೆ. ನೆರೆ, ಅತಿವೃಷ್ಠಿ, ಬರ ಪರಿಹಾರವಿಲ್ಲ. ಅತಿವೃಷ್ಠಿಯಿಂದ ಬೆಳೆ, ಜಮೀನು ಹಾಳಾದ ರೈತರಿಗೆ ಪರಿಹಾರವಿಲ್ಲ. ಕ್ಷೇತ್ರದಲ್ಲಿ ಶಾಸಕರಿದ್ದರೂ, ರಾಜ್ಯದಲ್ಲಿ ಸರ್ಕಾರವಿದ್ದರೂ ಆಡಳಿತ ಸತ್ತುಹೋಗಿದೆ ಎಂದು ಆರೋಪಿಸಿದರು.ಶಾಸಕರು ಜವಾಬ್ದಾರಿಯಿಂದ ಕೆಲಸ ಮಾಡಬೇಕು.ಇದೇ ತಿಂಗಳ 31 ರೊಳಗೆ ಆಸ್ಪತ್ರೆಗೆ ಅಗತ್ಯ ವೈದ್ಯರು, ಸಿಬ್ಬಂದಿ ನೇಮಕ ಮಾಡಬೇಕು. ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು. ಇಲ್ಲದಿದ್ದಲ್ಲಿ ಆಸ್ಪತ್ರೆಗೆ ಬೀಗ ಹಾಕಿ ರಸ್ತೆಯಲ್ಲಿ ಕುಳಿತು ಹಂತಹಂತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಡಿಎಚ್ ಒ ಅಶ್ವಥ್ ಬಾಬುಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಬಿ.ಶಿವಶಂಕರ್, ತಲಗಾರು ಉಮೇಶ್, ವೇಣುಗೋಪಾಲ್, ಚೇತನ್ ಹೆಗ್ಡೆ, ಎಂ.ಎಲ್.ಪ್ರಕಾಶ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.11 ಶ್ರೀ ಚಿತ್ರ 1
ಶೃಂಗೇರಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎದುರು ವೈದ್ಯರ ನೇಮಕಾತಿ,ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.