ಕೋಮುವಾದದ ಓಲೈಕೆಗೆ ಮಿತಿ ಇರಬೇಕು: ಸಿ.ಟಿ. ರವಿ

| Published : Dec 24 2023, 01:45 AM IST

ಸಾರಾಂಶ

ಕೋಮುವಾದ ಮಿತಿ ಮೀರಿ ಶಾಲೆಗಳಿಗೆ ಪ್ರವೇಶಿಸಿದರೆ ಆಗುವ ಪರಿಣಾಮ ಅರಿತು ನಿರ್ಣಯ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಸಿಟಿ ರವಿ ಒತ್ತಾಯಿಸಿದ್ದಾರೆ

ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವರ ಪ್ರತಿಕ್ರಿಯೆ

ಕನ್ನಡಪ್ರಭವಾರ್ತೆ, ಚಿಕ್ಕಮಗಳೂರು

ಕೋಮುವಾದದ ಓಲೈಕೆಗೆ ಒಂದು ಮಿತಿ ಇರಬೇಕು. ಅದನ್ನು ಮೀರಿ ಶಾಲೆಗಳಿಗೂ ಪ್ರವೇಶಿಸಿದರೆ ಅದರ ಪರಿಸ್ಥಿತಿ ಏನು ಎನ್ನುವ ಅರಿವಿಟ್ಟುಕೊಂಡು ನಿರ್ಣಯ ತೆಗೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಸಿ.ಟಿ.ರವಿ ಆಗ್ರಹಿಸಿದ್ದಾರೆ.

ಶಾಲೆಗಳಿಗೆ ಹಿಜಾಬ್ ಧರಿಸಿ ಬರಬಹುದು ಎಂದು ಸೂಚಿಸಿದ್ದೇನೆ ಎನ್ನುವ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಸಿದ್ದರಾಮಯ್ಯ ಅವರು ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರಕ್ಕೆ ಹಿಜಾಬ್ ಜೋಡಿಸುತ್ತಾರೋ ಅಥವಾ ಸಮವಸ್ತ್ರ ಕಡ್ಡಾಯ ಎನ್ನುವುದನ್ನು ತೆಗೆಯುತ್ತಾರೋ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

ಹಿಂದೆಯೂ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ನಿಷೇಧ ಆಗಿರಲಿಲ್ಲ. ಕೇವಲ ಶಾಲೆ-ಕಾಲೇಜುಗಳಲ್ಲಿ 1964ರ ಶಿಕ್ಷಣ ಕಾಯ್ದೆ ಪ್ರಕಾರ ಸಮವಸ್ತ್ರ ಹೊರತುಪಡಿಸಿ ಇನ್ನಾವುದೇ ರೀತಿಯ ವಸ್ತ್ರ ಸಂಹಿತೆ ಇಲ್ಲ. ಸಮವಸ್ತ್ರ ಸಂಹಿತೆ ಪಾಲಿಸಬೇಕೆಂಬ ನಿಯಮವಿತ್ತು ಎಂದರು.

ಈಗ ಸಿದ್ದರಾಮಯ್ಯ ಎಲ್ಲಾ ಸಮವಸ್ತ್ರಕ್ಕೂ ಹಿಜಾಬ್ ಕಡ್ಡಾಯಗೊಳಿಸಲು ಹೊರಟಿದ್ದಾರೋ ಅಥವಾ ಸಮವಸ್ತ್ರವೇ ಬೇಡ ಎನ್ನಲು ಹೊರಟಿದ್ದೀರೋ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಹಿಂದೆ ಸಮವಸ್ತ್ರ ವಿರುದ್ಧ ಇದ್ದವರದ್ದು ಮಕ್ಕಳಲ್ಲಿ ಬಡವ ಬಲ್ಲಿದ, ಜಾತಿ ಬೇಧ ಇರಬಾರದು ನಾವೆಲ್ಲರೂ ಸಮಾನರು ಎನ್ನುವ ಮಾನಸಿಕತೆಯಲ್ಲಿ ಶಾಲೆ-ಕಾಲೇಜಿನಲ್ಲಿ ಕಲಿಯಬೇಕು ಎಂಬ ಉದ್ದೇಶದಿಂದ 1964 ರ ಶಿಕ್ಷಣ ಕಾಯ್ದೆ ಅನ್ವಯ ನಿಯಮ ತಂದಿದ್ದೆವು ಎಂದರು.

ಈಗ ಸಿಎಂ ಸಿದ್ದರಾಮಯ್ಯ ಅವರ ಮನಸಿಗೆ ಬಡವ ಬಲ್ಲಿದ, ಜಾತಿ ಇರಬೇಕು. ಶಾಲೆಗಳಲ್ಲೂ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎನ್ನುವ ಗುರುತು ಇರಬೇಕು. ಅದಿದ್ದರೆ ಒಡೆದಾಳುವ ರಾಜಕಾರಣ ಸುಲಭ ಎನಿಸಿರುವ ಕಾರಣಕ್ಕೆ ಹಿಜಾಬ್ ನಿಷೇಧ ಎನ್ನುತ್ತಿದ್ದಾರೆ ಎನ್ನಿಸುತ್ತದೆ. ಹಾಗೇ ನಾದರೂ ಪ್ರತ್ಯೇಕ ಗುರುತು ಎನ್ನುವ ಮನೋಭಾವ ಬಂದರೆ ಬೇರೆ ಬೇರೆ ಬಣ್ಣಗಳು ನಮ್ಮ ಗುರುತು ಎಂದು ತೋರಿಸಲು ಹೋದರೆ ವಿದ್ಯಾರ್ಥಿಗಳ ನಡುವೆ ಸಮಾನತೆ ಎಲ್ಲಿರುತ್ತದೆ ಎಂದು ಪ್ರಶ್ನಿಸಿದ ಅವರು, ಶಿಕ್ಷಣ ಸಂಹಿತೆ ಪ್ರಕಾರವೇ ವಸ್ತ್ರ ಸಂಹಿತೆ ಇರಬೇಕು ಎಂದು ನಾವು ಬಯಸುತ್ತೇವೆ. ಮುಖ್ಯಮಂತ್ರಿಗಳು ಅವರಿಷ್ಟ ಬಂದಂತೆ ಜಾತಿಗೊಂದು ಗುರುತು ಹಾಕಿಕೊಂಡು ಬಂದರೆ ಸಮಾಜದ ಮೇಲೆ ಏನು ಪರಿಣಾಮ ಆಗುತ್ತದೆ ಎನ್ನುವ ಆಲೋಚನೆ ಮಾಡಲಿ ಎಂದು ಹೇಳಿದರು.