ದೃಢ ಮನಸ್ಸಿನಿಂದ ಗುರಿ ಸಾಧಿಸುವ ಛಲ ಇರಬೇಕು

| Published : May 21 2025, 12:00 AM IST

ಸಾರಾಂಶ

ಮುಂದೆ ಗುರಿ ಹಿಂದೆ ಗುರು ಮತ್ತು ದೃಢಸಂಕಲ್ಪ ಇದ್ದರೆ ಏನನ್ನಾದರೂ ಸಾಧಿಸಬಹುದು. ತಿದ್ದಿ, ಬುದ್ಧಿ ಹೇಳಿ ಭವಿಷ್ಯದ ಸರಿ ಮಾರ್ಗ ತೋರುವ ಗುರು ಮತ್ತು ಛಲದಿಂದ ಗುರಿಯನ್ನು ಸಾಧಿಸುವ ಮನೋಭಾವವನ್ನು ವಿದ್ಯಾರ್ಥಿನಿಯರು ರೂಢಿಸಿಕೊಳ್ಳಬೇಕು ಆಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು. ತಾವು ನಡೆದು ಬಂದ ಹಾದಿ, ಕಠಿಣ ಶ್ರಮ, ಮಾರ್ಗದರ್ಶಕರಾಗಿ ನಿಂತ ಗುರುಗಳು ಮತ್ತು ಶ್ರಮದ ಫಲ ಅದರ ಮಹತ್ವದ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದ ಅವರು, ಭವಿಷ್ಯದಲ್ಲಿ ಇರುವ ಉದ್ಯೋಗಾವಕಾಶದ ಬಗ್ಗೆ ಮತ್ತು ಪೂರ್ವ ತಯಾರಿ ಬಗ್ಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಬಿಬಿಎ ಕೋರ್ಸ್ ಯಾವ ಕೋರ್ಸ್‌ಗಳಿಗಿಂತಲೂ ಕಡಿಮೆ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಉದ್ಯೋಗಾವಕಾಶಗಳನ್ನು ತಮ್ಮದಾಗಿಸಿಕೊಳ್ಳಬಹುದು. ದೃಢ ಮನಸ್ಸಿನಿಂದ ಗುರಿ ಸಾಧಿಸುವ ಛಲ ಇರಬೇಕು ಎಂದು ಬೆಂಗಳೂರಿನ ಬೆಸ್ಕಾಂನ ಅಧಿಕಾರಿ ಕೆ.ಎಲ್. ಧರಣೇಶ್ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ನಗರದ ಎಂ.ಜಿ ರಸ್ತೆಯಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರದಂದು ವಿಶೇಷ ಉಪನ್ಯಾಸ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮುಂದೆ ಗುರಿ ಹಿಂದೆ ಗುರು ಮತ್ತು ದೃಢಸಂಕಲ್ಪ ಇದ್ದರೆ ಏನನ್ನಾದರೂ ಸಾಧಿಸಬಹುದು. ತಿದ್ದಿ, ಬುದ್ಧಿ ಹೇಳಿ ಭವಿಷ್ಯದ ಸರಿ ಮಾರ್ಗ ತೋರುವ ಗುರು ಮತ್ತು ಛಲದಿಂದ ಗುರಿಯನ್ನು ಸಾಧಿಸುವ ಮನೋಭಾವವನ್ನು ವಿದ್ಯಾರ್ಥಿನಿಯರು ರೂಢಿಸಿಕೊಳ್ಳಬೇಕು ಆಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು. ತಾವು ನಡೆದು ಬಂದ ಹಾದಿ, ಕಠಿಣ ಶ್ರಮ, ಮಾರ್ಗದರ್ಶಕರಾಗಿ ನಿಂತ ಗುರುಗಳು ಮತ್ತು ಶ್ರಮದ ಫಲ ಅದರ ಮಹತ್ವದ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದ ಅವರು, ಭವಿಷ್ಯದಲ್ಲಿ ಇರುವ ಉದ್ಯೋಗಾವಕಾಶದ ಬಗ್ಗೆ ಮತ್ತು ಪೂರ್ವ ತಯಾರಿ ಬಗ್ಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಜಿ. ಕವಿತಾ, ವಿದ್ಯಾರ್ಥಿಗಳಿಗೆ ಲಭ್ಯವಿರುವ ಸವಲತ್ತುಗಳು ಮತ್ತು ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳಬೇಕು ಮತ್ತು ಹೇಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವಿ.ಪಿ. ಜಗದೀಶ್, ಅಧ್ಯಾಪಕರಾದ ಜೆ. ಡೇವಿಡ್ ಕುಮಾರ್, ಎಚ್.ಜಿ. ಗಿರೀಶ್, ಎಸ್. ಪದ್ಮಿನಿ, ಟಿಎನ್ ಸುಮಾ., ಎಚ್.ಕೆ. ಮೋಹನ ಕುಮಾರಿ ಹಾಗೂ ಇತರರು ಭಾಗವಹಿಸಿದ್ದರು.