ರಾತ್ರಿ ವೇಳೆ ತರಬೇತಿ ವೈದ್ಯರ ಜೊತೆ ಕರ್ತವ್ಯ ನಿರತ ವೈದ್ಯರೂ ಇರಬೇಕು

| Published : Jan 03 2025, 12:32 AM IST

ಸಾರಾಂಶ

ನಮ್ಮೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿಗಳು ಸಿಗುತ್ತಿಲ್ಲ ಎಂದು ಕೆಲವು ದಿನಗಳ ಹಿಂದೆ ಎಲ್ಲಾ ಪ್ರತಿಕೆಗಳಲ್ಲೂ ವರದಿ ಆಗಿತ್ತು, ಈ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದೆ. ಇತ್ತೀಚೆಗೆ ಬಂದಿರುವ ಸ್ತ್ರೀ ರೋಗ ತಜ್ಞರೊಬ್ಬರು ಹೆರಿಗೆ ಮಾಡಿಸಲು ಇಂತಿಷ್ಟು ಹಣ ನೀಡ ಬೇಕು ಇಲ್ಲದಿದ್ದರೆ ಹೆರಿಗೆ ಮಾಡಲ್ಲ ಎನ್ನುತ್ತಿದ್ದಾರಂತೆ ಇದೆಲ್ಲ ಇಲ್ಲಿ ನಡೆಯಲ್ಲ. ಬಡವರಿಗೆ ಚಿಕಿತ್ಸೆ ನೀಡಲು ಹಣಕ್ಕೆ ಒತ್ತಾಯಿಸಿದರೆ ನಿಮಗೆ ಒಳ್ಳೆಯದಾಗಲ್ಲ. ಆ ದೇವರಿಗಾದರು ಹೆದರಿ ಕೆಲಸ ಮಾಡಿ. ಇದನ್ನು ಗಮನಿಸಿ ಸರಿಪಡಿಸಿ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್‌ಗೆ ಶಾಸಕ ಎಚ್.ಡಿ.ರೇವಣ್ಣ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ದಿಢೀರ್ ಭೇಟಿ ನೀಡಿ, ಸಭೆ ನಡೆಸಿ, ವೈದ್ಯರಿಗೆ ಸಲಹೆ ರೂಪದಲ್ಲಿ ಎಚ್ಚರಿಸುವ ಮಾತುಗಳನ್ನಾಡಿದರು. ರಾತ್ರಿ ವೇಳೆ ಯಾವಾಗಲೂ ತರಬೇತಿ ವೈದ್ಯರೇ ಇರುತ್ತಾರೆ ಎಂಬ ದೂರಿದೆ, ಇವರ ಜತೆಗೆ ಕರ್ತವ್ಯ ನಿರತ ವೈದ್ಯರು ಇರಬೇಕು ಎಂದರು ಹಾಗೂ ಅವರೊಂದಿಗೆ ಸಾಕಷ್ಟು ದಾದಿಯರೂ ಕರ್ತವ್ಯದಲ್ಲಿ ಇರುವಂತೆ ನೋಡಿಕೊಳ್ಳಿ. ನೀವು ನಿಮ್ಮ ನರ್ಸಿಂಗ್ ಕಾಲೇಜಿನಿಂದ ವಿದ್ಯಾರ್ಥಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿ ಎಂದು ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್‌ಗೆ ಸೂಚಿಸಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆಸ್ಪತ್ರೆಗೆ ಬೇಕಾದ ಸಿ.ಟಿ.ಸ್ಕ್ಯಾನ್, ಡಯಾಲಿಸಿಸ್ ಸೌಲಭ್ಯ, ಅಗತ್ಯಕ್ಕೆ ತಕ್ಕಷ್ಟು ಕೊಠಡಿಗಳು, ಅಗತ್ಯ ತಕ್ಕಷ್ಟು ವೈದ್ಯರನ್ನು ಹಾಕಿಸಿದ್ದೇನೆ. ಇಷ್ಟೆಲ್ಲಾ ಸೌಲಭ್ಯಗಳನ್ನು ನೀಡಿದ್ದೇನೆ. ನೀವು ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ಔಷಧಿ ನೀಡಿ ನಮ್ಮ ಆಸ್ಪತ್ರೆಗೆ ಒಳ್ಳೆಯ ಹೆಸರು ತನ್ನಿ ಎಂದರು. ಕೆಲವು ವೈದ್ಯರು ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಮತ್ತು ನಾನು ಎಲ್ಲಾ ವೈದ್ಯರಿಂದ ಇಂತಹ ಸೇವೆಯನ್ನೇ ನಿರೀಕ್ಷಿಸುತ್ತೇನೆ ಹಾಗೂ ಉತ್ತಮ ಸೇವೆ ನೀಡಿ ನಮ್ಮ ಆಸ್ಪತ್ರೆಯ ಘನತೆಯನ್ನು ಹೆಚ್ಚಿಸಿ ಎಂದರು.

ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಎಚ್.ವಿ.ಸುರೇಶ್ ಕುಮಾರ್ ಮಾತನಾಡಿ, ಇತ್ತೀಚೆಗೆ ಸುಬ್ರಹ್ಮಣ್ಯ ಎಂಬ ಉದ್ಯಮಿ ಎದೆನೋವು ಎಂದು ಬಂದಾಗ ತರಬೇತಿ ವೈದ್ಯರೊಬ್ಬರು ಸರಿಯಾಗಿ ಪರಿಶೀಲಿಸದೇ ಗ್ಯಾಸ್ಟ್ರಿಕ್ ಮಾತ್ರೆ ಕೊಟ್ಟು ಕಳುಹಿಸಿದರು, ಆದರೆ ಸುಬ್ರಮಣ್ಯ ಮನೆಗೆ ಹೋಗುತ್ತಿದ್ದಂತೆ ಸಾವನ್ನಪ್ಪಿದರು. ಇತ್ತೀಚೆಗೆ ರಾತ್ರಿ ವೇಳೆ ಆಸ್ಪತ್ರೆಗೆ ಬಂದ ರೋಗಿಗಳಿಗೆ ಟಿ.ಟಿ. ಇಂಜಕ್ಷನ್ ಕೊಡ ಇಲ್ಲ ಎಂದು ವಾಪಸ್ ಕಳುಹಿಸಿದ್ದಾರೆ. ಕೆಲವು ದಾದಿಯರು ರೋಗಿಗಳೊಂದಿಗೆ ಸಮಾಧಾನವಾಗಿ ಮಾತನಾಡದೇ ಸದಾ ರೇಗಾಡುತ್ತಿರುತ್ತಾರೆ ಎಂದು ದೂರಿದರು. ಶಾಸಕ ರೇವಣ್ಣ ಮುಂದೆ ಇಂತಹ ದೂರುಗಳು ಬರದಂತೆ ನೋಡಿಕೊಳ್ಳಿ ಎಂದು ವೈದ್ಯರಿಗೆ, ದಾದಿಯರಿಗೆ ಸೂಚಿಸಿದರು.

ವೈದ್ಯಾಧಿಕಾರಿ ಡಾ. ಧನಶೇಖರ್, ಟಿ.ಎಚ್.ಒ. ಡಾ. ರಾಜೇಶ್, ವೈದ್ಯರಾದ ರಮೇಶ್, ಸೆಲ್ವಕುಮಾರ್, ದಿನೇಶ್, ಸತ್ಯಪ್ರಕಾಶ್, ನಾಗೇಂದ್ರ, ರೇಖಾ, ಅಜಯ್, ಕುಸುಮಾ, ಅಶ್ವಥಿ, ಲೋಕೇಶ್, ಬಾಲಕೃಷ್ಣ, ಸಹಾಯಕ ಆಡಳಿತಾಧಿಕಾರಿ ಚಿನ್ನಮ್ಮ, ದಾದಿಯರು, ಸ್ವಚ್ಛತಾ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.