ಸಾರ್ವಜನಿಕ ಸಹಭಾಗಿತ್ವದಲ್ಲಿ ಕೆಳ ಹಂತದ ಸಮಸ್ಯೆ, ಸವಾಲುಗಳನ್ನು ಪರಿಗಣಿಸಿ ಅದಕ್ಕೆ ಪೂರಕವಾಗಿ ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಲ್ಲಿ, ಅದಕ್ಕೆ ಪೂರಕವಾಗಿ ಸರ್ಕಾರ ಮಟ್ಟದಲ್ಲಿ ಯೋಜನೆ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ.

ಧಾರವಾಡ:

ಜಿಲ್ಲಾ ಮಾನವ ಅಭಿವೃದ್ಧಿ ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ ತಯಾರಿಕೆಯಲ್ಲಿ ಪಾಲ್ಗೊಂಡ ಇಲಾಖೆಗಳು ಪ್ರಸ್ತುತ ಮತ್ತು ಮುಂದಿನ ಐದು ವರ್ಷಗಳ ದೂರದೃಷ್ಟಿ ಕೋನ ಇಟ್ಟುಕೊಂಡು ನಿಖರ, ವಿಶ್ವಾಸಾರ್ಹ, ವಾಸ್ತಾವಿಕ ಮಾಹಿತಿ ಒದಗಿಸಬೇಕೆಂದು ರಾಜ್ಯ ಸಂಪನ್ಮೂಲ ಅಧಿಕಾರಿ ಎಚ್. ಶಶಿಧರ್ ಹೇಳಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಆಯೋಜಿಸಿದ್ದ ಈ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕುಡಿಯುವ ನೀರು ರೈತರ ಸಮಸ್ಯೆ ಹೀಗೆ ಎಲ್ಲ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಸೇರಿದಂತೆ ವಿವಿಧ ವಲಯಗಳ ದತ್ತಾಂಶಗಳ ಮಾಹಿತಿ ನೀಡುವಲ್ಲಿ ತಾಂತ್ರಿಕ ಬೆಂಬಲ ಸಂಸ್ಥೆಯು ಸಹಕಾರ ನೀಡಬೇಕು. ಇಲ್ಲಿ ಸ್ಥಳೀಯ ನೈಸರ್ಗಿಕ ಸಂಪನ್ಮೂಲ ಬಳಕೆಯ ಸಹ ಅಷ್ಟೇ ಮಹತ್ವದ್ದಾಗಿದೆ ಎಂದರು.

ಸಾರ್ವಜನಿಕ ಸಹಭಾಗಿತ್ವದಲ್ಲಿ ಕೆಳ ಹಂತದ ಸಮಸ್ಯೆ, ಸವಾಲುಗಳನ್ನು ಪರಿಗಣಿಸಿ ಅದಕ್ಕೆ ಪೂರಕವಾಗಿ ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಲ್ಲಿ, ಅದಕ್ಕೆ ಪೂರಕವಾಗಿ ಸರ್ಕಾರ ಮಟ್ಟದಲ್ಲಿ ಯೋಜನೆ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ. ಎಲ್ಲ ಇಲಾಖೆಗಳು ತಮ್ಮ ವ್ಯಾಪ್ತಿಯ ದತ್ತಾಂಶಗಳ ನಿಖರತೆ, ವಾಸ್ತವಾಂಶ ಪರಿಶೀಲಿಸಿ ಸಕಾಲದಲ್ಲಿ ಮಾಹಿತಿ ಸಲ್ಲಿಸಲು ಹಾಗೂ ಸಿಎಂಡಿಆರ್ ತಾಂತ್ರಿಕ ಬೆಂಬಲ ಸಂಸ್ಥೆಗೆ ಸಹಕಾರ ನೀಡಬೇಕು ಎಂದರು.

ಜಿಲ್ಲಾ ಮಾನವ ಅಭಿವೃದ್ಧಿ ವರದಿ ಸಿದ್ಧಪಡಿಸಿ ಹತ್ತು ವರ್ಷಗಳು ಕಳೆದಿದೆ. ವಿವಿಧ ವಲಯದಡಿ ಉಂಟಾಗಿರುವ ಬದಲಾವಣೆ, ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ, ಜಿಲ್ಲೆಗಳ ಜ್ವಲಂತ ಸಮಸ್ಯೆಗಳ ನಿವಾರಣೆಗಾಗಿ ಕೈಗೊಳ್ಳುವ ಕ್ರಮಗಳು ಜಿಲ್ಲೆಯಲ್ಲಿನ ಯಶೋಗಾಥೆಗಳನ್ನು ಒಳಗೊಂಡಂತೆ 2025 ವರ್ಷ ಆಧಾರವಾಗಿರಿಸಿ ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಮಾನವ ಅಭಿವೃದ್ಧಿ ವರದಿಯಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ, ಲಿಂಗ ಅಸಮಾನತೆ ಸೂಚ್ಯಂಕ, ಆಹಾರ ಹಾಗೂ ಪೌಷ್ಠಿಕಾಂಶ ಭದ್ರತೆ ಸೂಚ್ಯಂಕ, ಮಕ್ಕಳ ಅಭಿವೃದ್ಧಿ ಸೂಚ್ಯಂಕ, ಸುಸ್ಥಿರ ಅಭಿವೃದ್ಧಿ ಗುರಿಗಳ ಸ್ಥಳೀಕರಣ, ನಗರಾಭಿವೃದ್ಧಿ ಸೂಚ್ಯಂಕ, ಮಾನವ ಅಭಿವೃದ್ಧಿ ಮೇಲೆ ಖಾತ್ರಿ ಯೋಜನೆಗಳ ಪ್ರಭಾವ, ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳು ಹಾಗೂ ವಿನೂತನ ಸಾಧನೆಗಳು, ಗ್ರಾಮ ಪಂಚಾಯಿತಿ ವಾರು ಮಾನವ ಅಭಿವೃದ್ಧಿ ಸೂಚ್ಯಂಕ, ಗ್ರಾಪಂವಾರು ಜಿಡಿಪಿ ಅಳವಡಿಸಲಾಗಿದೆ ಎಂಬ ಮಾಹಿತಿ ನೀಡಿದರು.

ಈ ವರದಿಗಳ ಕರಡನ್ನು 2026ರ ಜೂನ್‌ ಒಳಗಾಗಿ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಹಾಗೂ ಜಿಲ್ಲಾ ಯೋಜನೆ ಸಮಿತಿಯಲ್ಲಿ ಮಂಡಿಸಿ, ಅನುಮೋದನೆ ಪಡೆಯಬೇಕು. ಆದ್ದರಿಂದ ಎಲ್ಲ ಇಲಾಖೆಗಳ ಸಕಾಲದಲ್ಲಿ ನಿಖರ ಹಾಗೂ ವಾಸ್ತವಿಕ ದತ್ತಾಂಶಗಳನ್ನು ಸಲ್ಲಿಸಲು ತಿಳಿಸಿದರು. ಸಿಎಂಡಿಆರ್ ಪ್ರೊ. ನಯನತಾರಾ ನಾಯಕ್, ಡಾ. ಅರುಣಕುಮಾರ, ಡಾ. ಎಸ್.ವಿ. ಹೊನಗೊಂಡಮಠ, ಡಾ. ನಾರಾಯಣ ಬಿಲ್ಲವ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್.ಕುಕನೂರ ಇದ್ದರು.