ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟಲು ಚಿತ್ರರಂಗ ಮಾತ್ರವಲ್ಲ, ರಾಜಕೀಯ ಪಕ್ಷಗಳೂ ಆಂತರಿಕ ದೂರು ಸಮಿತಿಗಳನ್ನು ರಚಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ ಹೇಳಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ತಮ್ಮ ನಾಯಕರ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದಾಗ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಅಭಿಪ್ರಾಯಪಟ್ಟರು. ಈ ಕುರಿತು ನಾನು ಖಂಡಿತವಾಗಿಯೂ ಪಕ್ಷಕ್ಕೆ ಶಿಫಾರಸು ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತನಿಖೆಯಾಗಲಿ: ಸಿನೆಮಾ ಉದ್ಯಮವೂ ಕೆಲಸದ ಸ್ಥಳವಾಗಿರುವುದರಿಂದ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ಪರಿಶೀಲಿಸಲು ಆಂತರಿಕ ದೂರುಗಳ ಸಮಿತಿ ರಚಿಸಬೇಕಾಗಿದೆ. ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಿ, ತನಿಖೆಯನ್ನು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇರ ಮೇಲ್ವಿಚಾರಣೆಯಲ್ಲಿ ನಡೆಸಬೇಕಿದೆ ಎಂದು ಹೇಳಿದರು.ಸರ್ಕಾರದಿಂದ ಕಡೆಗಣನೆ: ಕಾರ್ಕಳದಲ್ಲಿ ಯುವತಿ ಅಪಹರಣ ಮತ್ತು ಅತ್ಯಾಚಾರ ಸೇರಿದಂತೆ ರಾಜ್ಯದಲ್ಲಿ ಲೈಂಗಿಕ ಕಿರುಕುಳದ ಹಲವು ಪ್ರಕರಣಗಳನ್ನು ಉಲ್ಲೇಖಿಸಿದ ಮಂಜುಳಾ, ರಾಜ್ಯ ಕಾಂಗ್ರೆಸ್ ಸರ್ಕಾರವು ಮಹಿಳೆಯರ ಸುರಕ್ಷತೆಯನ್ನು ಕಡೆಗಣಿಸುತ್ತಿದೆ. ಉಡುಪಿಯಲ್ಲಿ ಯುವತಿ ಅಪಹರಣ ಮತ್ತು ಅತ್ಯಾಚಾರ ಘಟನೆ ನಡೆದಾಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾಳಜಿ ತೋರಿಲ್ಲ. ರಾಜ್ಯ ಮಹಿಳಾ ಆಯೋಗವೂ ಕಿರುಕುಳ ಎದುರಿಸುತ್ತಿರುವ ಮಹಿಳೆಯರನ್ನು ಬೆಂಬಲಿಸಲು ಉತ್ಸುಕವಾಗಿಲ್ಲ. ಕರ್ನಾಟಕವನ್ನು ಮತ್ತೊಂದು ಕೋಲ್ಕತ್ತಾವನ್ನಾಗಿ ಪರಿವರ್ತಿಸುವ ಯೋಜನೆ ಈ ಸರ್ಕಾರಕ್ಕಿದೆಯೇ ಎಂದು ಮಂಜುಳಾ ಪ್ರಶ್ನಿಸಿದರು.
ಬಿಜೆಪಿ ಮಹಿಳಾ ಮುಖಂಡರಾದ ಮಂಜುಳಾ ರಾವ್, ಶ್ವೇತಾ ಪೂಜಾರಿ, ಶಿಲ್ಪಾ, ಸಂಧ್ಯಾ ವೆಂಕಟೇಶ್, ಲಿಖಿತಾ ಶೆಟ್ಟಿ ಇದ್ದರು.