ಸಾರಾಂಶ
ಕೊಪ್ಪಳ:
ಬೇಸಿಗೆ ಆರಂಭವಾಗಿದ್ದು ಗ್ರಾಮೀಣ ಭಾಗ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಲಭ್ಯತೆ ಬಗ್ಗೆ ಗಮನ ಹರಿಸಬೇಕು ಎಂದು ತಹಸೀಲ್ದಾರ್ ವಿಠ್ಠಲ್ ಚೌಗಲಾ ಹೇಳಿದರು.ನಗರದ ತಾಲೂಕು ಪಂಚಾಯಿತಿಯಲ್ಲಿ ಕುಡಿಯುವ ನೀರು ಹಾಗೂ ಮೇವಿನ ಲಭ್ಯತೆ ಬಗ್ಗೆ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬೇಸಿಗೆಯಿಂದ ಕುಡಿಯುವ ನೀರಿನ ಕೊರತೆ ಉಂಟಾಗುವ ಸಂಭವವಿದೆ. ಹೀಗಾಗಿ ಅಧಿಕಾರಿಗಳು ಮುನ್ನಚ್ಚರಿಕೆ ವಹಿಸಬೇಕು. ನೀರಿನ ಮಾದರಿಯನ್ನು ಕಾಲಕಾಲಕ್ಕೆ ಪರೀಕ್ಷೆಗೆ ಒಳಪಡಿಸಬೇಕು. ಯಾವುದೇ ಪೈಪ್‌ಲೈನ್ ಒಡೆದು ಕಲುಷಿತ ನೀರು ಸರಬರಾಜು ಆಗದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದರು.
ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾದಲ್ಲಿ ಸಮಸ್ಯೆ ಬಗೆಹರಿಸಲು ಖಾಸಗಿ ಬೋರ್‌ವೇಲ್ ಗುರುತಿಸಿ ಮಾಲೀಕರ ಜತೆ ಒಪ್ಪಂದ ಮಾಡಿಕೊಳ್ಳಲು ಅಗತ್ಯ ಕ್ರಮವಹಿಸಬೇಕು. ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆಯಿಂದ ಹಾಗೂ ತಕ್ಷಣವೇ ಸ್ಪಂದಿಸಬೇಕೆಂದು ಹೇಳಿದರು.ತಾಪಂ ಇಒ ದುಂಡಪ್ಪ ತುರಾದಿ ಮಾತನಾಡಿ, ತಾಲೂಕಿನ ೮ ಗ್ರಾಪಂಗಳ ೧೧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ೧೪ ಖಾಸಗಿ ಬೋರ್‌ವೇಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನುಳಿದ ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾದಲ್ಲಿ ಪರ‍್ಯಾಯ ವ್ಯವಸ್ಥೆಯಾಗಿ ೩೩೮ ಖಾಸಗಿ ಬೋರ್‌ವೇಲ್ ಗುರುತಿಸಲಾಗಿದೆ. ಮಾಲೀಕರ ಜತೆ ಬಾಡಿಗೆ ಪಡೆಯುವ ಒಪ್ಪಂದ ಮಾಡಿಕೊಳ್ಳಲು ಪಿಡಿಒಗಳಿಗೆ ಸೂಚಿಸಲಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಬಹುದಾದ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಮಾಡಲಾಗಿದ್ದು ಏಪ್ರಿಲ್ ಅಂತ್ಯದ ವರೆಗೆ ೧೧ ಹಾಗೂ ಮೇ ಅಂತ್ಯದ ವರೆಗೆ ೧೩ ಗ್ರಾಮಗಳ ಪಟ್ಟಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ನಗರಸಭೆ ಅಧಿಕಾರಿಗಳು, ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಉಪತಹಸೀಲ್ದಾರ್‌ರು, ತಾಲೂಕು ಯೋಜನಾಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.