ಅಧಿಕಾರಿಗಳ ಮಧ್ಯೆ ಸಮನ್ವಯತೆ ಇರಲಿ

| Published : Mar 21 2024, 01:02 AM IST

ಸಾರಾಂಶ

ಬಾಗಲಕೋಟೆ: ಲೋಕಸಭೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿರುವ ವಿವಿಧ ಇಲಾಖೆ ಅಧಿಕಾರಿಗಳ ಮಧ್ಯೆ ಪರಸ್ಪರ ಸಮನ್ವಯತೆ ಮುಖ್ಯವಾಗಿರಬೇಕು ಎಂದು ಉಪವಿಭಾಗಾಧಿಕಾರಿ ಹಾಗೂ ಬಾಗಲಕೋಟೆ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಸಂತೋಷ ಜಗಲಾಸರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಲೋಕಸಭೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿರುವ ವಿವಿಧ ಇಲಾಖೆ ಅಧಿಕಾರಿಗಳ ಮಧ್ಯೆ ಪರಸ್ಪರ ಸಮನ್ವಯತೆ ಮುಖ್ಯವಾಗಿರಬೇಕು ಎಂದು ಉಪವಿಭಾಗಾಧಿಕಾರಿ ಹಾಗೂ ಬಾಗಲಕೋಟೆ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಸಂತೋಷ ಜಗಲಾಸರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಎಸಿ ಸಂತೋಷ ಈ ಸೂಚನೆ ನೀಡಿದ್ದಾರೆ. ಸೆಕ್ಟರ್‌ ಅಧಿಕಾರಿಗಳಿಗೆ ಮತಗಟ್ಟೆ ಅಧಿಕಾರಿಗಳು, ಮತಗಟ್ಟೆ ಮಟ್ಟದ ಮೇಲ್ವಿಚಾರಕರ ನಡುವೆ ಸಮನ್ವಯತೆ ಇದ್ದರೆ ಮಾತ್ರ ಚುನಾವಣೆ ಕೆಲಸಗಳು ಸುಸೂತ್ರವಾಗಿ ನಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಮತದಾನದ ದಿನಾಂಕದ ಮೊದಲೇ ಮತಗಟ್ಟೆಗೆ ಸಂಬಂಧಿಸಿದ ಅಧಿಕಾರಿಗಳು ಮತಗಟ್ಟೆಗಳಲ್ಲಿ ಅಗತ್ಯ ಮೂಲ ಸೌಕರ್ಯಗಳು ಇರುವ ಬಗ್ಗೆ ಮಾಹಿತಿ ಪಡೆದು ಖಾತ್ರಿಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ನಿಷ್ಕಾಳಜಿ ತೋರಿದರೆ ಕ್ರಮ:

ಮತಗಟ್ಟೆ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ತಹಸೀಲ್ದಾರ್‌ ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿ ಗಮನಕ್ಕೆ ತಂದರು. ಮತಗಟ್ಟೆಗೆ ಸಂಬಂಧಿಸಿದ ಅಧಿಕಾರಿಗಳು ಕರ್ತವ್ಯದಲ್ಲಿ ನಿಷ್ಕಾಳಜಿ ತೋರಿದರೆ ಅವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಸಹಾಯಕ ಚುನಾವಣಾಧಿಕಾರಿಗಳು ಎಚ್ಚರಿಕೆ ಕೂಡ ನೀಡಿದ್ದಾರೆ. ಅಲ್ಲದೇ, ಚುನಾವಣೆಗೆ ಸಂಬಂಧಿಸಿದಂತೆ ನೀಡಲಾದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಈ ಲೋಕಸಭೆ ಚುನಾವಣೆಯನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.

ಮತಗಟ್ಟೆ ಮಟ್ಟದ ಮೇಲ್ವಿಚಾರಕರು 85 ವರ್ಷ ಮೇಲ್ಪಟ್ಟ ಮತ್ತು ವಿಶೇಷಚೇತನ ಮತದಾರರ ಮಾಹಿತಿಯನ್ನು ಸೆಕ್ಟರ್‌ ಅಧಿಕಾರಿಗಳಿಗೆ ನೀಡಬೇಕು. ಮನೆಯಲ್ಲಿ ಮತದಾನ ಮತ್ತು ಮತಗಟ್ಟೆಗೆ ತೆರಳಿ ಮತದಾನ ಮಾಡುವ ಬಗೆಯಿದ್ದು, ಈ ಎರಡು ವಿಧದ ಮತದಾರರ ಮಾಹಿತಿ ಆಧಾರದ ಮೇಲೆ ರೂಟ್ ನಿರ್ಧರಿಸಬೇಕು. ಇವೆಲ್ಲ ಕೆಲಸಗಳನ್ನು ಮತದಾನ ಪೂರ್ವದಲ್ಲಿಯೇ ಮಾಡಿಕೊಳ್ಳಬೇಕು. ಸೆಕ್ಟರ್‌ ಅಧಿಕಾರಿಗಳು ಫಾರಂ 12 ನಮೂನೆಯನ್ನು 85 ವರ್ಷ ಮೇಲ್ಪಟ್ಟ ಮತ್ತು ವಿಶೇಷಚೇತನ ಮತದಾರರಿಗೆ ವಿತರಿಸುವ ಸಮಯದಲ್ಲಿ ಮತಗಟ್ಟೆ ಅಧಿಕಾರಿಗಳು ಜೊತೆಗೆ ಕಾರ್ಯನಿರ್ವಹಿಸಬೇಕು.

ನಿಯೋಜನೆ ಮಾಡಲಾಗಿರುವ ಶಾಲೆಗಳಲ್ಲಿ ಶೌಚಾಲಯ ಶುಚಿಗೊಳಿಸುವುದು ಮತ್ತು ಪೀಠೋಪಕರಣಗಳನ್ನು ಕಾಪಾಡುವುದು, ನೀರು ಸರಬರಾಜು ವ್ಯವಸ್ಥೆ ಸೇರಿ ಇತರೆ ಸೌಕರ್ಯಗಳನ್ನು ಕಾಪಾಡುವುದು ಶಿಕ್ಷಣ ಇಲಾಖೆಯ ಕರ್ತವ್ಯವಾಗಿದೆ ಎಂದರು.

ಸಭೆಯಲ್ಲಿ ತಹಸೀಲ್ದಾರ್‌ ಅಮರೇಶ ಪಮ್ಮಾರ, ನಗರಸಭೆ ಪೌರಾಯುಕ್ತ ವಾಸಣ್ಣ.ಆರ್, ತಾಪಂ ಇಒ ಜೀವನಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡಮನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಸ್ತಗಿರಿಸಾಬ ಮುಲ್ಲಾ ಸೇರಿದಂತೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.