ಸಾರಾಂಶ
ಬ್ರೈಡಲ್ ಮೇಕಪ್ ಕಾರ್ಯಕ್ರಮ । ಮುಖದ ಸೌಂದರ್ಯಕ್ಕೆ ತಜ್ಞ ವೈದ್ಯರ ಮಾರ್ಗದರ್ಶನಕ್ಕೆ ಸಲಹೆ
ಕನ್ನಡಪ್ರಭ ವಾರ್ತೆ ಸೊರಬಮಹಿಳೆಯರು ಸೌಂದರ್ಯ ಪ್ರಜ್ಞೆಯ ಜೊತೆಗೆ ಅನುಸರಣ ವಿಧಾನದಲ್ಲಿ ಎಚ್ಚರಿಕೆ ವಹಿಸುವುದು ಅವಶ್ಯಕ. ಕೊಂಚ ಎಡವಿದರೂ ಸುಂದರ ವದನಕ್ಕೆ ಆಪತ್ತು ಕಂಡಿತ. ಹಾಗಾಗಿ ಬಳಸುವ ಸೌಂದರ್ಯ ವರ್ಧಕ ಸಾಮಾಗ್ರಿಗಳ ಬಗ್ಗೆ ಹೆಚ್ಚಿನ ನಿಗಾ ಇರಲಿ ಎಂದು ಉದ್ಯಮಿ ಕಸ್ತೂರಿ ರಾಜು ಹೇಳಿದರು.
ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಜಗಲಿ ಹಾಗೂ ನೆಮ್ಮದಿ ಗ್ರೂಪ್ ಆಫ್ ಸರ್ವಿಸ್ ವತಿಯಿಂದ ಹಮ್ಮಿಕೊಂಡ ಸಂಕ್ರಾಂತಿ ಸಂಭ್ರಮ ಹಾಗೂ ಬ್ರೈಡಲ್ ಮೇಕಪ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮುಖದ ಚರ್ಮಕ್ಕೆ ವ್ಯತಿರಿಕ್ತವಾದ ದುಷ್ಪರಿಣಾಮ ಬೀರಬಹುದಾದ ಸೌಂದರ್ಯ ವರ್ಧಕಗಳಿಂದ ಮುಕ್ತರಾಗಬಹುದಾಗಿದ್ದು, ಇದಕ್ಕಾಗಿ ತಜ್ಞ ಮಾರ್ಗದರ್ಶಕರಿಂದ ಮಾರ್ಗದರ್ಶನ ಪಡೆಯುವುದು ಒಳ್ಳೆಯದು ಎಂದರು.
ಸಂಪನ್ಮೂಲ ವ್ಯಕ್ತಿ ಭಾರತಿ ಭಂಡಾರಿ ಮಾತನಾಡಿ, ಮದುವೆ ಸೇರಿದಂತೆ ಇನ್ನಿತರ ಪ್ರಮುಖ ಕಾರ್ಯಕ್ರಮಗಳಲ್ಲಿ ಮಹಿಳೆಯರು ಮುಖದ ಮೇಕಪ್, ಕೇಶ ವಿನ್ಯಾಸವನ್ನು ಅತೀ ಸರಳವಾಗಿ ಕಡಿಮೆ ಖರ್ಚಿನಲ್ಲಿ ಹೇಗೆಲ್ಲಾ ಆಕಕ್ಷಣೀಯವಾಗಿ ಮಾಡಿಕೊಳ್ಳಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು.ಕನ್ನಡ ಸಾಹಿತ್ಯ ಸಾಂಸ್ಕೃತಿಕ ಜಗಲಿಯ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗಿ ಆರ್ಥಿಕವಾಗಿ ಸದೃಢರಾಗಲು ಅನೇಕ ಉದ್ಯೋಗವಕಾಶಗಳಿವೆ. ಇತ್ತೀಚೆಗೆ ಮದುವೆ ಮತ್ತಿತರರ ಶುಭ ಸಂದರ್ಭಗಳಲ್ಲಿ ಅಲಂಕಾರ ಮಾಡುವುದು ಸಹ ವೃತ್ತಿಯಾಗಿ ಪರಿಣಮಿಸಿದೆ. ಕಾರ್ಯಕ್ರಮದ ಸ್ಥಳಕ್ಕೆ ತೆರಳಿ ಅಲಂಕಾರ ಮಾಡುವವರು ಇದ್ದಾರೆ. ಮಹಿಳೆಯರು ಕೇವಲ ಮನೆ ಕೆಲಸಕ್ಕೆ ಮಾತ್ರ ಸೀಮಿತ ಎನ್ನುವ ಕಾಲ ಮರೆಯಾಗಿದ್ದು, ಪುರುಷರಿಗೆ ಸಮಾನರಾಗಿ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ಮಹಿಳೆಯರು ಸಹ ವ್ಯಾಪಾರ-ವಹಿವಾಟುಗಳಲ್ಲಿ ತೊಡಗಿ ಸಮಾಜದಲ್ಲಿ ಉತ್ತಮ ಸ್ಥಾನಗಳಿಸುತ್ತಿದ್ದಾರೆ. ಇದಕ್ಕೆ ಹೊಸಪೇಟೆ ಬಡಾವಣೆಯಲ್ಲಿ ನೆಮ್ಮದಿ ಸೀರೆ ಮನೆ ಸ್ಥಾಪಿಸಿ ಸ್ವಯಂ ಉದ್ಯೋಗ ಕಂಡುಕೊಂಡಿರುವ ಅನಿತಾ ನೆಮ್ಮದಿಸುಬ್ಬು ನಮ್ಮೆದುರು ಸಾಕ್ಷಿ ಎಂದರು.
ನೆಮ್ಮದಿ ಗ್ರೂಪ್ ಆಫ್ ಸರ್ವಿಸ್‌ನ ಮುಖ್ಯಸ್ಥೆ ಅನಿತಾ ಸುಬ್ಬು ಮಾತನಾಡಿ, ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳುವ ಮೊದಲು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇವುಗಳನ್ನು ಮೆಟ್ಟಿನಿಂತು ಉದ್ಯೋಗ ಸ್ಥಾಪಿಸಿದಾಗ ಕುಟುಂಬಕ್ಕೆ ನೆರವಾಗಲು ಸಾಧ್ಯವಾಗುತ್ತದೆ. ಸಂಸ್ಥೆಯಿಂದ ಮಹಿಳೆಯರಿಗೆ ಹಾಗೂ ಶುಭ ಕಾರ್ಯ ಕೈಗೊಳ್ಳುವವರಿಗೆ ಅನುಕೂಲವಾಗುವಂತೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮಹಿಳೆಯರು ಸ್ಪರ್ಧಾತ್ಮಕ ಯುಗದಲ್ಲಿ ಮುನ್ನುಗ್ಗುತ್ತಿರಬೇಕು ಎಂದು ತಿಳಿಸಿದರು.ಕನ್ನಡ ಸಾಹಿತ್ಯ ಸಾಂಸ್ಕೃತಿಕ ಜಗಲಿಯ ಸದಸ್ಯರಾದ ವಿನಯ ಪ್ರಶಾಂತ್ ಭಾಪಟ್, ಮಾನಸ ರಂಗನಾಥ್, ಅನುಕೃತ, ಶ್ಯಾಮಲಾ, ರತ್ನಮ್ಮ, ಸಾಹಿತಿ ರೇವಣಪ್ಪ ಬಿದರಗೇರಿ ಇತರರಿದ್ದರು. ಸಿಂಧೂ ಆದರ್ಶ ಪ್ರಾರ್ಥಿಸಿ, ನಳಿನಾ ಸ್ವಾಗತಿಸಿ, ವಿನುತಾ ವಂದಿಸಿದರು. ರೂಪಾ ಮಧುಕೇಶ್ವರ್ ಕಾರ್ಯಕ್ರಮ ನಿರ್ವಹಿಸಿದರು.