ಸಾರಾಂಶ
ಅಂತರ್ಜಲ ಅತಿಬಳಕೆ ತಾಲೂಕುಗಳೆಂದು ಅಧಿಸೂಚಿಸಲಾಗಿರುವ ಜಿಲ್ಲೆಯ 5 ತಾಲೂಕುಗಳಲ್ಲಿ ಪ್ರಸ್ತುತ ಇರುವ ಕೊಳವೆ ಬಾವಿಗಳನ್ನು ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಸಾರ್ವಜನಿಕರ ಗಮನಕ್ಕೆ ತರಬೇಕು ಎಂದು ನಿರ್ದೇಶಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು
ರೈತರು ಕೃಷಿ ಬಳಕೆಗಾಗಿ ಕೊರೆಸಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬ ಮಾಡಬಾರದೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಅಂತರ್ಜಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ಕಾಲವಾಗಿರುವ ಹಿನ್ನೆಲೆಯಲ್ಲಿ ರೈತರ ಬೆಳೆಗಳಿಗೆ ನೀರಿನ ಅಭಾವದ ಕಾರಣ ತುರ್ತಾಗಿ ವಿದ್ಯುಚ್ಛಕ್ತಿಯನ್ನು ಪಡೆಯಲು ಅನುಕೂಲವಾಗುವ ದೃಷ್ಟಿಯಿಂದ, ನೋಂದಣಿ ಪ್ರಮಾಣ ಪತ್ರವನ್ನು ನೀಡುವ ವಿಧಾನವನ್ನು ಸರಳೀಕರಿಸಬೇಕು ಎಂದರು.
ಜಿಲ್ಲಾ ಅಂತರ್ಜಲ ಕಚೇರಿಯಲ್ಲಿ ಅರ್ಜಿ ಶುಲ್ಕ ಮತ್ತು ದಂಡ ಪಾವತಿಸಿ, ಸ್ವೀಕೃತಿ ಪತ್ರ ಪಡೆದು ಬೆಸ್ಕಾಂ ಕಚೇರಿಗೆ ಸಲ್ಲಿಸಿ ವಿದ್ಯುಚ್ಛಕ್ತಿ ಪಡೆಯಲು ಹಾಗೂ ತದನಂತರ ನೋಂದಣಿ ಪ್ರಮಾಣ ಪತ್ರ ಪಡೆದುಕೊಳ್ಳಲು ರೈತರಿಗೆ ಅನುವು ಮಾಡಿಕೊಡಬೇಕು ಎಂದು ತಾಕೀತು ಮಾಡಿದರು.ಜಿಲ್ಲೆಯಲ್ಲಿ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ) ಅಧಿನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.
ಅಂತರ್ಜಲ ಅತಿಬಳಕೆ ತಾಲೂಕುಗಳೆಂದು ಅಧಿಸೂಚಿಸಲಾಗಿರುವ ಜಿಲ್ಲೆಯ ಚಿಕ್ಕನಾಯಕನಹಳ್ಳಿ, ತಿಪಟೂರು, ಕೊರಟಗೆರೆ, ಮಧುಗಿರಿ ಹಾಗೂ ತುಮಕೂರು ಸೇರಿದಂತೆ 5 ತಾಲೂಕುಗಳ ವ್ಯಾಪ್ತಿಯಲ್ಲಿ ಪ್ರತಿಯೊಬ್ಬ ಅಂತರ್ಜಲ ಬಳಕೆದಾರನೂ ಯಾವುದೇ ಉಪಯೋಗಕ್ಕಾಗಿ ಕೊಳವೆ ಬಾವಿಯನ್ನು ಕೊರೆಸಲು ಹಾಗೂ ಅಂತರ್ಜಲವನ್ನು ಬಳಸಲು ಜಿಲ್ಲಾ ಅಂತರ್ಜಲ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.ಅಂತರ್ಜಲ ಅತಿಬಳಕೆ ತಾಲೂಕುಗಳೆಂದು ಅಧಿಸೂಚಿಸಲಾಗಿರುವ ಜಿಲ್ಲೆಯ 5 ತಾಲೂಕುಗಳಲ್ಲಿ ಪ್ರಸ್ತುತ ಇರುವ ಕೊಳವೆ ಬಾವಿಗಳನ್ನು ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಸಾರ್ವಜನಿಕರ ಗಮನಕ್ಕೆ ತರಬೇಕು ಎಂದು ನಿರ್ದೇಶಿಸಿದರು.
ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಅನಧಿಕೃತವಾಗಿ ಕೊಳವೆ ಬಾವಿಯನ್ನು ಕೊರೆಸಿದಲ್ಲಿ ಭೂಮಾಲೀಕರು ಮತ್ತು ರಿಗ್ ಮಾಲೀಕರ ಮೇಲೆ ಕಾನೂನು ರೀತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳು ಹಿಂಜರಿಯಬಾರದು ಎಂದು ಸೂಚಿಸಿದರು.ಸಭೆಯಲ್ಲಿ ಹಿರಿಯ ಭೂವಿಜ್ಞಾನಿ ನಾಗವೇಣಿ, ತಿಪಟೂರು ವಿಭಾಗದ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಸೋಮಶೇಖರ ಗೌಡ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.