ಜನನ-ಮರಣ ನೋಂದಣಿ ಪತ್ರ ಪಡೆಯಲು ವಿಳಂಬ ಮಾಡಬಾರದು: ಡಾ: ಕುಮಾರ

| Published : May 23 2025, 12:35 AM IST

ಜನನ-ಮರಣ ನೋಂದಣಿ ಪತ್ರ ಪಡೆಯಲು ವಿಳಂಬ ಮಾಡಬಾರದು: ಡಾ: ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಜನನ, ಮರಣ ಪ್ರಮಾಣ ಪತ್ರ ವಿಳಂಬ ಮಾಡದೇ ಪಡೆದುಕೊಳ್ಳುವುದು ಉತ್ತಮ‌. 30 ದಿನದ ನಂತರ ಹಾಗೂ ಒಂದು ವರ್ಷದಲ್ಲಿ ಘಟಿಸಿದ ಘಟನೆಗಳಿಗೆ ಗ್ರಾಮಾಂತರ ಪ್ರದೇಶದಲ್ಲಿ ತಹಸೀಲ್ದಾರ್, ನಗರ ಪ್ರದೇಶದಲ್ಲಿ ಆಯುಕ್ತರು ಅಥವಾ ಮುಖ್ಯಾಧಿಕಾರಿಗಳ ಆದೇಶ ಪಡೆದು ನೋಂದಣಿ ಪ್ರಮಾಣಪತ್ರ ಪಡೆಯಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಜನನ- ಮರಣ ನೋಂದಣಿ ಪತ್ರ ಪಡೆಯಲು ವಿಳಂಬ ಮಾಡಿದರೆ ಕುಟುಂಬಸ್ಥರು ನ್ಯಾಯಾಲಯದ ಮುಖಾಂತರ ಆದೇಶ ಪತ್ರ ಪಡೆಯಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನನ-ಮರಣ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾರೇ ಮರಣ ಹೊಂದಿದರೂ ಅವರ ಕುಟುಂಬದವರು ಮೃತರ ಮರಣ ಪ್ರಮಾಣಪತ್ರ ಪಡೆದುಕೊಳ್ಳಬೇಕು ಎಂದರು.

ಜನನ, ಮರಣ ಪ್ರಮಾಣ ಪತ್ರ ವಿಳಂಬ ಮಾಡದೇ ಪಡೆದುಕೊಳ್ಳುವುದು ಉತ್ತಮ‌. 30 ದಿನದ ನಂತರ ಹಾಗೂ ಒಂದು ವರ್ಷದಲ್ಲಿ ಘಟಿಸಿದ ಘಟನೆಗಳಿಗೆ ಗ್ರಾಮಾಂತರ ಪ್ರದೇಶದಲ್ಲಿ ತಹಸೀಲ್ದಾರ್, ನಗರ ಪ್ರದೇಶದಲ್ಲಿ ಆಯುಕ್ತರು ಅಥವಾ ಮುಖ್ಯಾಧಿಕಾರಿಗಳ ಆದೇಶ ಪಡೆದು ನೋಂದಣಿ ಪ್ರಮಾಣಪತ್ರ ಪಡೆಯಬಹುದು ಎಂದರು.

ಒಂದು ವರ್ಷ ಮೇಲ್ಪಟ್ಟರೆ ನ್ಯಾಯಾಲಯದ ಮುಖಾಂತರ ಆದೇಶ ಪಡೆದು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಸಾರ್ವಜನಿಕರು ತಪ್ಪದೇ ನಿಗದಿತ ಅವಧಿಯಲ್ಲಿ ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವಂತೆ ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಜನನ-ಮರಣ ನೋಂದಣಿ ಮಾಡಲು ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳೇ ಉಪ ನೋಂದಣಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಒಂದು ಗ್ರಾಮದಲ್ಲಿ ಯಾವುದೇ ವ್ಯಕ್ತಿ ಮರಣ ಹೊಂದಿದಾಗ ಸ್ಥಳೀಯವಾಗಿ, ಆಶಾ, ಅಂಗನವಾಡಿ ಅಥವಾ ಪಂಚಾಯ್ತಿ ಸಿಬ್ಬಂದಿಗೆ ತಿಳಿದಿರುತ್ತದೆ. ಅವರಿಗೆ ಮರಣ ಪ್ರಮಾಣ ಪತ್ರಕ್ಕೆ‌ ಅರ್ಜಿ ಸಲ್ಲಿಸುವಂತೆ ತಿಳಿಸಿ ಇದರಿಂದ ಬಹಳಷ್ಟು ಜನ ನ್ಯಾಯಾಲಯಕ್ಕೆ ಮರಣ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸುವುದನ್ನು ತಪ್ಪಿಸಬಹುದು ಎಂದರು.

ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ವರದಿ ಪ್ರಕಾರ ಶೇ.100 ರಷ್ಟು ಹೆರಿಗೆಗಳು ಆಸ್ಪತ್ರೆಯಲ್ಲಿ ನಡೆಯುತ್ತಿರುವುದರಿಂದ ಜನನ ಪ್ರಮಾಣ ಪತ್ರದ ಬಗ್ಗೆ ತೊಂದರೆ ಇಲ್ಲ. ಆದರೆ, ಕೆಲವು ಆಸ್ಪತ್ರೆಯಲ್ಲಿ ತಡವಾಗಿ ವರದಿ ಕಳುಹಿಸುತ್ತಿರುವುದು ಹಾಗೂ ಜನ್ಮ ದಿನಾಂಕ, ಗಂಡು/ ಹೆಣ್ಣನ್ನು ತಪ್ಪು ನಮೂದು ಮಾಡುತ್ತಿರುವುದು ಕಂಡುಬಂದಿದೆ. ಇದು ಮುಂದುವರೆದಲ್ಲಿ ನೋಟಿಸ್ ಜಾರಿ ಮಾಡುವುದಾಗಿ ಎಚ್ಚರಿಕೆ‌ ನೀಡಿದರು.

ಸಭೆಯಲ್ಲಿ‌ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಬಿ.ಸಿ.ಕೇಶವಮೂರ್ತಿ, ಸಹಾಯಕ ಸಂಖ್ಯಾ ಸಂಗ್ರಹಣಾಧಿಕಾರಿ ಚೈತ್ರಾ, ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.