ಸಾರಾಂಶ
ಅರ್ಹ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಗದಗ: ಅರ್ಹ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜಿಲ್ಲಾ ಜಾಗೃತ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತಾಲೂಕು ಮಟ್ಟದಲ್ಲಿಯೂ ಸಹ ಪ.ಜಾ, ಪ.ಪಂ.ದ ದೌರ್ಜನ್ಯ ನಿಯಂತ್ರಣ ಸಭೆಗಳು ನಿಯಮಿತವಾಗಿ ಜರುಗಬೇಕು. ಪ.ಜಾ, ಪ.ಪಂ. ಸಮುದಾಯದವರ ದೌರ್ಜನ್ಯ ಪ್ರತಿಬಂಧಕ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು. ಪ.ಜಾ, ಪ.ಪಂ. ದೌರ್ಜನ್ಯ ಪ್ರಕರಣದಡಿ ಅರ್ಹ ಸಂತ್ರಸ್ತರಿಗೆ ಪರಿಹಾರ ಧನ ಒದಗಿಸುವಲ್ಲಿ ವಿಳಂಬ ಮಾಡದೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ನಿಗಾ ವಹಿಸಬೇಕು. ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಹಾಗೂ ಮೌಲ್ಯಯುತ ಶಿಕ್ಷಣ ಒದಗಿಸುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು ಎಂದರು.ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಮಾತನಾಡಿ, ಜಿಲ್ಲೆಯ 35 ಗ್ರಾಮಗಳಲ್ಲಿ ಪ.ಜಾ ಮತ್ತು ಪ.ಪಂಗಡದ ಸಮುದಾಯದವರಿಗೆ ದೌರ್ಜನ್ಯ ಪ್ರತಿಬಂಧಕ ಕಾಯ್ದೆಗಳ ಕುರಿತು ಅರಿವು ಮೂಡಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಮತ್ತು ದೌರ್ಜನ್ಯ ಪ್ರತಿಬಂಧಕ ಕಾಯ್ದೆಗಳ ಬಗ್ಗೆ ಅರಿವು ಮೂಡಿಸುವ ಕರಪತ್ರ ಹಂಚಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ದೌರ್ಜನ್ಯದಲ್ಲಿ ಮೃತಪಟ್ಟ ಹದ್ಲಿ ಗ್ರಾಮದ ಮರಿಯಪ್ಪ ಯಮನಪ್ಪ ಮಾದರ ಇವರ ಅವಲಂಬಿತರಾದ ಅವರ ಪತ್ನಿ ರೇಣವ್ವ ಮಾದರ ಅವರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಆದೇಶದ ಪತ್ರವನ್ನು ಜಿಲ್ಲಾಧಿಕಾರಿಗಳು ವಿತರಿಸಿದರು. ಈ ಸಂದರ್ಭದಲ್ಲಿ ಜಿ.ಪಂ. ಸಿಇಓ ಭರತ್ ಎಸ್, ಎಸ್ಪಿ ಬಿ.ಎಸ್.ನೇಮಗೌಡ, ಶರೀಫ್ ಬಿಳೆಯಲಿ, ಸುರೇಶ ನಡುವಿನಮನಿ, ವಿನಾಯಕ ಬಳ್ಳಾರಿ, ಶ್ರೀನಿವಾಸ ದ್ಯಾವನೂರ ಸೇರಿದಂತೆ ವಿವಿಧ ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.