ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವೀರೇಶ ಬೈಲವಾಳ ಕಟ್ಟಪ್ಪಣೆ ಮಾಡಿದರು.

ಹಾನಗಲ್ಲ: ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವೀರೇಶ ಬೈಲವಾಳ ಕಟ್ಟಪ್ಪಣೆ ಮಾಡಿದರು.

ಇಲ್ಲಿನ ತಾಲೂಕು ಪಂಚಾಯತ್ ಸಭಾಭವನದಲ್ಲಿ ಆಯೋಜಿಸಿದ ಗ್ಯಾರಂಟಿ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಯೋಜನೆಯ ಅನುಷ್ಠಾನದ ಮಾಹಿತಿ ಪಡೆದ ಸಂದರ್ಭದಲ್ಲಿ ಮಾತನಾಡಿದ ಅವರು, ಯುವನಿಧಿ ಯೋಜನೆ ಅನುಷ್ಠಾನದಲ್ಲಿ ನಿಖರ ಮಾಹಿತಿ ಒದಗಿಸಬೇಕು. ಯಾವುದೇ ಅರ್ಹ ಪದವೀಧರರು ಈ ಯೋಜನೆಯಿಂದ ಹೊರಗುಳಿಯಬಾರದು. ಮಾಹಿತಿ ಲೋಪಗಳಿದ್ದರೆ ಕೂಡಲೇ ಪರಿಶೀಲಿಸಿ, ಪಡೆದು ಯೋಜನೆ ತಲುಪಿಸಬೇಕು ಎಂದು ತಿಳಿಸಿದರು.

ಹಾನಗಲ್ಲ ಬಸ್ ನಿಲ್ದಾಣದ ಸ್ವಚ್ಛತೆ ವಿಷಯದಲ್ಲಿ ತೀರ ನಿರ್ಲಕ್ಷ್ಯ ತೋರುತ್ತಿರುವ ಕೆಎಸ್‌ಆರ್‌ಟಿಸಿ, ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ. ಎಲ್ಲೆಂದರಲ್ಲಿ ಕಸ, ಬಸ್ ನಿಲ್ದಾಣದ ಹೊರಗಡೆಯೂ ಕೂಡ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ವಾಹನ ನಿಲುಗಡೆ, ಶಿರಸಿ, ಶಿವಮೊಗ್ಗ ಕಡೆಗಳಿಗೆ ತೆರಳುವ ಬಸ್ ನಿಲ್ಲುವ ಸ್ಥಳದಲ್ಲಿ ಪ್ರಯಾಣಿಕರಿಗೆ ನಿಖರ ಮಾಹಿತಿ ನೀಡುವವರಿಲ್ಲ. ಅಲ್ಲಿರುವ ಟಿಸಿ ಅಪಾಯದ ಸೂಚನೆ ನೀಡುತ್ತಿದ್ದರೂ ಸರಿಪಡಿಸಿಲ್ಲ. ಸುರಕ್ಷಿತ ನಿಲುಗಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗಮನ ಸೆಳೆದ ವೀರೇಶ ಬೈಲವಾಳ, ಒಂದೆರಡು ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿ ಎಂದು ಸೂಚಿಸಿದರು.

ಹೆಸ್ಕಾಂನಿಂದ ಸಾರ್ವಜನಿಕರ ಹಿತಾಸಕ್ತಿ ಕಾಯುವಲ್ಲಿ ವೈಫಲ್ಯವೇ ಎದ್ದು ಕಾಣುತ್ತಿದೆ. ಇಡೀ ತಾಲೂಕಿನ ತುಂಬ ಇರುವ ಬಹುತೇಕ ವಿದ್ಯುತ್ ಟಿಸಿ ಹೊತ್ತು ನಿಂತ ಹಾಗೂ ಇತರ ಕಂಬಗಳು ಹಸಿರು ಬಳ್ಳಿಗಳಿಂದ ಆವೃತವಾಗಿವೆ. ಅದರಲ್ಲೂ ರಸ್ತೆಯ ಪಕ್ಕದಲ್ಲಿಯೇ ಇಂತಹ ಕಂಬಗಳ ಸ್ಥಿತಿ ಇದ್ದು ಇವು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಹೆಸ್ಕಾಂ ಕಚೇರಿ ಆವರಣದಲ್ಲಿರುವ ಟಿಸಿ ಬಳ್ಳಿಗಳಿಂದ ಆವೃತವಾಗಿದ್ದು ಅದನ್ನೇ ತೆರವುಗೊಳಿಸಲು ಸಾಧ್ಯವಾಗಿಲ್ಲ. ಇದೆಲ್ಲ ಹೆಸ್ಕಾಂ ನಿರ್ಲಕ್ಷ್ಯದ ಕನ್ನಡಿ ಎಂದು ದೂರಿದರು.

ಗೃಹಲಕ್ಷ್ಮೀ ಯೋಜನೆಯಲ್ಲಿ ಕೆಲವು ಅರ್ಹ ಫಲಾನುಭವಿಗಳೇ ಯೋಜನೆಯಿಂದ ವಂಚಿತರಾಗಿದ್ದಾರೆ. ಇನ್ನು ಕೆಲವು ಫಲಾನುಭವಿಗಳು ಮೃತರಾಗಿದ್ದರೂ ಕೂಡ ಅವರ ಖಾತೆಗಳಿಗೆ ಗೃಹಲಕ್ಷ್ಮೀ ಹಣ ಸಂದಾಯವಾಗಿದೆ. ಇವನ್ನು ಗುರುತಿಸಿ ಈ ಹಣವನ್ನು ಸರ್ಕಾರಕ್ಕೆ ಮರುಪಾವತಿಸಬೇಕು. ಅಂಗನವಾಡಿಗಳಿಗೆ ನೀಡಿದ ಎಲ್‌ಇಡಿ ಟಿವಿಗಳು ಸದುಪಯೋಗವಾಗುತ್ತಿಲ್ಲ. ಬಹುತೇಕ ಎಲ್‌ಇಡಿಗಳನ್ನು ಬಳಸುತ್ತಲೇ ಇಲ್ಲ. ಇದರಿಂದ ಮಕ್ಕಳಿಗೆ ಉಪಯೋಗವಾಗಬೇಕಾದ ಮಾಹಿತಿ ಲಭ್ಯವಾಗುತ್ತಿಲ್ಲ. ಕೂಡಲೇ ಇವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು, ಕೇಳಿದ ಮಾಹಿತಿಯನ್ನು ಕಾಲಮಿತಿಯಲ್ಲಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಮಹಲಿಂಗಪ್ಪ ಹಾದಿ, ಬಸವಣ್ಣೆಪ್ಪ ವಾಲೀಕಾರ, ರಾಜೇಂದ್ರ ರಡ್ಡೇರ, ಪ್ರಕಾಶ ವಡ್ಡರ, ಶಂಭಣ್ಣ ಮಲ್ಲಣ್ಣನವರ, ರಮೇಶ ಹಾದಿಮನಿ, ಸುಲೇಮಾನ್ ಶೇಖ್ ಹಾಗೂ ಮಹಿಳಾ ಮತ್ತು ತಾಲೂಕು ಪಂಚಾಯತ್ ಅಧಿಕಾರಿ ಚನ್ನಮಲ್ಲಪ್ಪ ರೂಡಗಿ, ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಾಮು ಬೈಲಸೀಮೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ನೀಡಿದರು.