ಸತ್ಯನಿಷ್ಠ ವರದಿ ಪ್ರಕಟಣೆಗೆ ಹಿಂಜರಿಕೆ ಸಲ್ಲದು: ಎಂ.ಎ.ನಿರಂಜನ್

| Published : Mar 24 2025, 12:36 AM IST

ಸತ್ಯನಿಷ್ಠ ವರದಿ ಪ್ರಕಟಣೆಗೆ ಹಿಂಜರಿಕೆ ಸಲ್ಲದು: ಎಂ.ಎ.ನಿರಂಜನ್
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಒಡೆದ ಮನಸ್ಸುಗಳನ್ನು ಬೆಸೆಯುವ ಶಕ್ತಿ ಪತ್ರಕರ್ತರ ಹರಿತವಾದ ಲೇಖನಿಗಿದೆ ಎಂದು ಗಣ್ಯರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಮಾಜದಲ್ಲಿ ಒಡೆದ ಮನಸ್ಸುಗಳನ್ನು ಬೆಸೆಯುವ ಶಕ್ತಿ ಪತ್ರಕರ್ತರ ಹರಿತವಾದ ಲೇಖನಿಗಿದೆ. ಪತ್ರಕರ್ತರು ಸತ್ಯನಿಷ್ಠ ವರದಿಗಳನ್ನು ಪ್ರಕಟಿಸುವಾಗ ಯಾವುದೇ ಹಿಂಜರಿಕೆ ಇರಬಾರದು ಎಂದು ಮಡಿಕೇರಿ ವಕೀಲರ ಸಂಘ ಅಧ್ಯಕ್ಷ ಎಂ.ಎ.ನಿರಂಜನ್ ಕರೆ ನೀಡಿದ್ದಾರೆ.

ನಗರದ ರೆಡ್ ಬ್ರಿಕ್ಸ್ ಇನ್ ಸಭಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಕೊಡಗು ಪತ್ರಕರ್ತರ ಸಂಘದ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಮತ್ತು ಪತ್ರಕರ್ತರ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಡಗು ಪತ್ರಕರ್ತರ ಸಂಘ ಬಲಿಷ್ಠವಾಗಬೇಕಾದರೆ ಸಂಘದ ಸಾರಥಿ ಗಟ್ಟಿಯಾಗಿರಬೇಕು. ಅನಿಲ್ ಎಚ್.ಟಿ. ಅವರು ಎಲ್ಲರನ್ನು ಒಗ್ಗೂಡಿಸಿಕೊಂಡು ಸಂಘವನ್ನು ಮುನ್ನಡೆಸಲಿದ್ದಾರೆ. ಸಂಘದಲ್ಲಿ ತಮ್ಮ ತಂದೆ ತಾಯಿಯ ಹೆಸರಿನಲ್ಲಿ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸುವುದಾಗಿ ಘೋಷಿಸಿದರು.

ಕೂರ್ಗ್ ಹೋಟೆಲ್ಸ್ , ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಸಂಘದ ವಾಹನ ಸ್ಟಿಕ್ಕರ್ ಬಿಡುಗಡೆಗೊಳಿಸಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಾಮಾಜಿಕ ಕಾಳಜಿಯಿಂದ ಪತ್ರಿಕಾರಂಗ ನಡೆಯುತ್ತಿದೆ. ಬೇರೆ ಜಿಲ್ಲೆಗೆ ಹೋಲಿಕೆ ಮಾಡಿದರೆ ಕೊಡಗು ಜಿಲ್ಲೆಯಲ್ಲಿ ಪತ್ರಕರ್ತರು ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡಗು ಪತ್ರಕರ್ತರ ಸಂಘಕ್ಕೆ ಮುಂದಿನ ದಿನಗಳಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಪ್ರವಾಸೋದ್ಯಮದ ಬೆಳವಣಿಗೆ ನಿಟ್ಟಿನಲ್ಲಿ ಕೊಡಗಿನ ಪತ್ರಕರ್ತರು ನಿರಂತರ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದು ಶ್ಲಾಘಿಸಿದ ದಿನೇಶ್ ಕಾರ್ಯಪ್ಪ, ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ನವ ರೂಪುರೇಷೆ ನೀಡುವ ನಿಟ್ಟಿನಲ್ಲಿ ಏಪ್ರಿಲ್ ಎರಡನೇ ವಾರದಲ್ಲಿ ಮಡಿಕೇರಿಯಲ್ಲಿ ಎರಡು ದಿನ ಪ್ರವಾಸೋದ್ಯಮ ಉತ್ಸವವನ್ನು ಆಯೋಜಿಸಿದ್ದು, ರಾಜ್ಯ ಮಟ್ಟದಿಂದಲೂ ಪ್ರವಾಸೋದ್ಯಮ ಕ್ಷೇತ್ರದ ಅನೇಕ ಪ್ರಮುಖರು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಿಸಿದರು.

ಕೊಡಗು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಅನಿಲ್ ಎಚ್.ಟಿ., ಶಕ್ತಿ ಪತ್ರಿಕೆಯ ಸ್ಥಾಪಕ ಬಿ.ಎಸ್. ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಪದಗ್ರಹಣ ಸ್ವೀಕರಿಸಿ ಮಾತನಾಡಿ, ನಿವೇಶನ ರಹಿತ ಪತ್ರಕರ್ತರಿಗೆ ನಿವೇಶನ, ಪತ್ರಕರ್ತರು ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ಗುಂಪು ಆರೋಗ್ಯ ವಿಮೆ ಸೇರಿದಂತೆ ಹಲವು ಉಪಯುಕ್ತ ಯೋಜನೆ ರೂಪಿಸಲಾಗುತ್ತದೆ ಎಂದರು.

ಸಂಘದಲ್ಲಿ ನೂರಕ್ಕೂ ಅಧಿಕ ಮಂದಿ ಸದಸ್ಯರಿದ್ದು, ಪತ್ರಿಕಾ ಭವನ ಟ್ರಸ್ಟ್ ಕೂಡ ಬೆನ್ನೆಲುಬಾಗಿ ನಿಂತಿದೆ. ಎರಡು ವರ್ಷದಲ್ಲಿ ಸುಮಾರು 7 ದತ್ತಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಒಟ್ಟು 10 ದತ್ತಿ ಪ್ರಶಸ್ತಿ ಸ್ಥಾಪಿಸುವ ಗುರಿ ಇದೆ. ಸಂಘದಿಂದ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸಂಘದ ಗೌರವ ಸಲಹೆಗಾರರಾದ ಟಿ.ಪಿ. ರಮೇಶ್ ಮಾತನಾಡಿ, ಪತ್ರಕರ್ತರ ಸಂಘ ಸಾರ್ವಜನಿಕವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಹೊಸ ಸಂಘವನ್ನು ರಚನೆ ಮಾಡಿ ಕಳೆದ ಎರಡು ವರ್ಷದಿಂದ ಅತ್ಯುತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಎ. ಮುರುಳೀಧರ್ ಮಾತನಾಡಿ,ನಾಲ್ಕು ತಾಲೂಕು ಸಮಿತಿಗಳನ್ನು ಕೂಡ ರಚನೆ ಮಾಡಿಕೊಂಡು ಕ್ರೀಯಾಶೀಲವಾಗಿ ಕೆಲಸ ಮಾಡಿಕೊಂಡು ಬರುತ್ತಿದೆ. ಸಂಘದಲ್ಲಿ ಒಗ್ಗಟ್ಟು ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಹೇಳಿದರು.

ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರರಾದ ಬಿ.ಜಿ.ಅನಂತಶಯನ ಮಾತನಾಡಿದರು.

ವಿಶ್ವದಾಖಲೆ ಮಾಡಿರುವ ಮದೆನಾಡಿನ ಸಿಂಚನಾ, ದೆಹಲಿಯಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ಕೊಡಗನ್ನು ಪ್ರತಿನಿಧಿಸಿದ್ದ ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ಹೆಸರಾಂತ ಜಾದು ಗಾರ ವಿಕ್ರಂ ಜಾದೂಗಾರ್ ಹಾಗೂ ಕೊಡಗು ಪತ್ರತರ್ಕರ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಎ. ಮುರುಳೀಧರ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಅವರನ್ನು ಸನ್ಮಾನಿಸಲಾಯಿತು.

ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ.ರವಿಕುಮಾರ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಉಜ್ವಲ್ ರಂಜಿತ್, ಸಂಘದ ನೂತನ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಮತ್ತಿತರರು ಪಾಲ್ಗೊಂಡಿದ್ದರು.

ವಿಶ್ವದಾಖಲೆ ಮಾಡಿರುವ ಮದೆನಾಡಿನ ಸಿಂಚನಾ ಅವರಿಂದ ಯೋಗ ಪ್ರದರ್ಶನ, ವಿಕ್ರಂ ಜಾದೂಗಾರ್ ಅವರಿಂದ ಜಾದೂ ಪ್ರದರ್ಶನ ಜನ ಮನ ಸೆಳೆಯಿತು.

ಕಾರ್ಯಕ್ರಮವನ್ನು ನಿರ್ದೇಶಕ ವಿನೋದ್ ಮೂಡಗದ್ದೆ, ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ನಿರ್ದೇಶಕ ರಂಜಿತ್ ಕವಲಪಾರ ನಿರೂಪಿಸಿದರು.

ಸಂಘ ಕುಶಾಲನಗರ ತಾಲೂಕು ಅಧ್ಯಕ್ಷ ವಿಘ್ನೇಶ್ ಭೂತನಕಾಡು, ಸಂಘದ ಜಿಲ್ಲಾ ನಿರ್ದೇಶಕ ಎಂ.ಎನ್. ನಾಸಿರ್, ಉಪಾಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಸನ್ಮಾನಿತರನ್ನು ಪರಿಚಯಿಸಿದರು. ಜಿಲ್ಲೆಯ ವಿವಿಧ ಭಾಗದದಿಂದ ಹಲವಾರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದು, ಸಂಘಕ್ಕೆ ಶುಭ ಹಾರೈಸಿದರು.

ವಿರಾಜಪೇಟೆಯ ಪುರಸಭೆಯ ಮಾಜಿ ಅಧ್ಯಕ್ಷೆ ಕಾಂತಿ ಸತೀಶ್ ಸಂಘಕ್ಕೆ ದತ್ತಿ ಪ್ರಶಸ್ತಿ ನೀಡುವುದಾಗಿ ಘೋಷಿಸಿದರು.

ಸಾಂಸ್ಕೃತಿಕ ಸಂಭ್ರಮ: ಸಂಘದ ಸಲಹೆಗಾರರಾದ ಬಿ.ಜಿ.ಅನಂತಶಯನ ಅವರು ಹಾಡು ಹಾಡುವ ಮೂಲಕ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಜ್ವಲ್ ರಂಜಿತ್, ಟಿಜೆ.ಪ್ರವೀಣ್, ಎಸ್.ಎ.ಮುರಳೀಧರ್, ಸಪ್ನಾ, ರಜತ್, ಶ್ರೀರಕ್ಷಾ, ಪ್ರತಿಮಾ ರೈ, ನಿಧಿ ಹಾಡಿದರು. ಪುಟಾಣಿಗಳಾದ ಮನ್ಹಾ ಫಾತಿಮಾ, ನಿತ್ಯಾ ನೃತ್ಯ ಮಾಡಿದರು.