ಸಾರಾಂಶ
ಪುಸ್ತಕ ಬಿಡುಗಡೆ । ಶಂಕರ ಪಾಗೋಜಿರ ಕವನ ಸಂಕಲನ, ಬಡಿಗೇರ ದೇವೇಂದ್ರರ ಕಾದಂಬರಿ ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ ದಾವಣಗೆರೆಸಾವಿರಾರು ವರ್ಷಗಳ ಇತಿಹಾಸವಿರುವ, ವಿಶ್ವದ ಅತ್ಯಂತ ಸುಂದರ ಲಿಪಿಯಾಗಿರುವ ನಮ್ಮೆಲ್ಲರ ಮಾತೃಭಾಷೆ ಕನ್ನಡದ ಬಗ್ಗೆ ಆಲಸ್ಯ, ನಿರ್ಲಕ್ಷ್ಯ ಬೇಡ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸಿರಿಗೆರಿ ಅನ್ನಪೂರ್ಣ ಪ್ರಕಾಶನ ಹೊರ ತಂದಿರುವ ಶಂಕರ ಪಾಗೋಜಿಯವರ ‘ಒಡಲ ದನಿ’ ಕವನ ಸಂಕಲನ ಹಾಗೂ ಬಡಿಗೇರ ದೇವೇಂದ್ರರವರ ‘ರುದ್ರಿ’ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿ, ನಮ್ಮ ಭಾಷೆಯ ಬಗ್ಗೆ ನಮಗೆ ಹೆಮ್ಮೆ, ಅಭಿಮಾನ, ಪ್ರೀತಿ ಇರಬೇಕು ಎಂದರು.ಸಾಹಿತ್ಯ ಕವನ ಆಗಲಿ, ಕಾದಂಬರಿಯೇ ಆಗಿರಲಿ ಸಾಹಿತ್ಯಿಕ ಪ್ರಕ್ರಿಯೆ ಜನಸಾಮಾನ್ಯರಿಂದ ಹುಟ್ಟಿವೆ. ಈಗ ಸುಶಿಕ್ಷಿತ ಸಾಹಿತ್ಯ ರಚನೆ ಆಗುತ್ತಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ವೈಶಿಷ್ಯ ಇದೆ. ದ.ರಾ. ಬೇಂದ್ರೆಯವರ ನಾಕು ತಂತಿ ಹಾಗೂ ಕುವೆಂಪು ರಚಿಸಿದ ರಾಮಾಯಣ ದರ್ಶನಂ ಮಹಾಕಾವ್ಯ, ಕವನಗಳಿಗೆ ತನ್ನದೇ ಆದ ಶ್ರೇಷ್ಠತೆ ಇದೆ. ಒಡಲ ದನಿ ಅಂದರೆ ಅಂತರಂಗದಲ್ಲಿ ಬಂದಂತಹ ಭಾವನೆಗಳನ್ನು ಸಾರ್ವತ್ರಿಕರಣಗೊಳಿಸುವ ಕೆಲಸ ಸಾಹಿತಿ, ಲೇಖಕ ಶಂಕರ ಪಾಗೋಜಿ ಮಾಡಿದ್ದಾರೆ. ಬಡಿಗೇರ ದೇವೇಂದ್ರ, ಸೂಕ್ಷ್ಮ ವಿಷಯವನ್ನಿಟ್ಟುಕೊಂಡು ರುದ್ರಿ ಕಾದಂಬರಿ ಬರೆದಿದ್ದಾರೆ ಎಂದು ಶ್ಲಾಘಿಸಿದರು.ಹಿರಿಯ ಲೇಖಕಿ ಬಾನು ಮುಷ್ತಾಕ್‌ರವರು ಬುಕರ್ ಪ್ರಶಸ್ತಿ ಪಡೆಯುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಹಿರಿಮೆ ತಂದಿದ್ದಾರೆ. ಅದೇ ರೀತಿ ನಮ್ಮೆಲ್ಲಾ ಲೇಖಕರು, ಸಾಹಿತಿಗಳು ಬೆಳೆಯಬೇಕು ಎಂದರು.
ನಮ್ಮ ಕನ್ನಡ ಭಾಷೆಯ ಬಗ್ಗೆ ಆಲಸ್ಯ ಬೇಡ, ಕನ್ನಡ ನಮ್ಮೆಲ್ಲರ ತಾಯಿ ಭಾಷೆ. ನಾವು ಮಧ್ಯ ಕರ್ನಾಟಕದಲ್ಲಿ ಹುಟ್ಟಿರುವುದೇ ನಮ್ಮೆಲ್ಲರ ಪುಣ್ಯ. ಆದಿ ಕವಿ ಪಂಪನು ಬನವಾಸಿಯಲ್ಲಿದ್ದಾಗ ನನಗೆ ಇನ್ನೊಂದು ಜನ್ಮ ಇದ್ದರೆ ಕರ್ನಾಟದಲ್ಲಿಯೇ ಹುಟ್ಟಬೇಕು ಅಂತ ಬಯಕೆಯನ್ನು ಹೇಳಿಕೊಂಡಿದ್ದಾರೆ ಎಂದರು.ನಗರವಾಣಿ ಸಹ ಸಂಪಾದಕ, ಹಿರಿಯ ಸಾಹಿತಿ ಬಿ.ಎನ್.ಮಲ್ಲೇಶ ಮಾತನಾಡಿ, ಪಠ್ಯ ಪುಸ್ತಕದ ಜೊತೆಗೆ ಸಾಹಿತ್ಯ ಓದುವ ಮೂಲಕ ಜೀವನದಲ್ಲಿ ಓದುವ ಹವ್ಯಾಸ ಬೆಳೆಸಿಕೊಂಡರೆ ಅದು ಬೇರೆಯೇ ಲೋಕಕ್ಕೆ ನಮ್ಮನ್ನು ತೆಗೆದುಕೊಂಡು ಹೋಗುತ್ತದೆ ಎಂದರು.
ಕವಿ ಶಂಕರ ಪಾಗೋಜಿ ಮಾತನಾಡಿ, ಅಂಕಗಳಿಗೆ ಓದುವುದರ ಜೊತೆಗೆ ಸಾಹಿತ್ಯ ಓದುವ, ಬರೆಯುವ ಹವ್ಯಾಸ ಬೆಳೆಸಿಕೊಂಡರೆ ನಮ್ಮನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತವೆ ಎಂದರು.ಕಾದಂಬರಿ ಕರ್ತೃ ಬಡಿಗೇರ ದೇವೇಂದ್ರ ಮಾತನಾಡಿ, ಯಾವುದೇ ವ್ಯಕ್ತಿಗೆ ಸಮಾಜದಲ್ಲಿ ತನಗಾಗುವ ಅನ್ಯಾಯಕ್ಕೆ ತನ್ನದೇ ಆದ ರೀತಿ ಸೇಡು ತೀರಿಸಿಕೊಳ್ಳುವುದು, ಆತ್ಮರಕ್ಷಣೆಗಾಗಿ, ಒಂದು ಹೆಣ್ಣು ತನ್ನ ಮೇಲೆ ಅತ್ಯಾಚಾರವಾದಾಗ ಅಂತಹವರ ವಿರುದ್ದ ಸೇಡು ತೀರಿಸಿಕೊಳ್ಳಲು ಕೊಲೆ ಮಾಡಿದರೆ ತಪ್ಪೇನಲ್ಲ ಎಂದು ಅಭಿಪ್ರಾಯಪಟ್ಟರು.
ಅನ್ನಪೂರ್ಣ ಪ್ರಕಾಶನದ ಪ್ರಕಾಶಕ ಸಿರಿಗೆರೆ ಯರಿಸ್ವಾಮಿ, ಉಪನ್ಯಾಸಕ ಡಾ.ಧರ್ಮಪ್ಪ ಹಾಜರಿದ್ದರು.