ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಪ್ರತಿಯೊಂದು ಸಂಘಗಳು ಸಹಕಾರ ವರ್ಷ ಮುಗಿಯುತ್ತಿದ್ದ ಹಾಗೆ ಲೆಕ್ಕಪರಿಶೋಧನೆಯನ್ನು ಮಾಡಿಸಬೇಕೆಂದು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕರಾದ ಬಸಣ್ಣ ರಾಠೋಡ ಕರೆ ನೀಡಿದರು.ಬೀದರಿನ ಡಿಸಿಸಿ ಬ್ಯಾಂಕಿನ ಆರ್ ಸೆಟಿ ಸಂಸ್ಥೆಯಲ್ಲಿ ಬೀದರ್, ಔರಾದ್ ಮತ್ತು ಭಾಲ್ಕಿ ತಾಲೂಕಿನಲ್ಲಿ ಬರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಲೆಕ್ಕಪರಿಶೋಧನೆ ಸಮಯದಲ್ಲಿ ಯಾವುದೇ ರೀತಿ ತೊಂದರೆಯಾಗಬಾರದು. ನಗದು ಪುಸ್ತಕ ಬರೆಯುವುದು ಹೇಗೆ ಎಂಬುದನ್ನು ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ವೈಜಿನಾಥ ಅಧ್ಯಕ್ಷತೆ ವಹಿಸಿ, ನಮ್ಮ ಜಿಲ್ಲಾ ಸಹಕಾರ ಯೂನಿಯನ್ನಿನ ಮೂಲಕ ತರಬೇತಿಗಳನ್ನು ಏರ್ಪಡಿಸುತ್ತೇವೆ. ಪ್ರತಿಯೊಂದು ತರಬೇತಿಗಳಲ್ಲಿ ಸಂಘಗಳಿಗೆ ಅವಶ್ಯಕತೆ ಇರುವ ವಿಷಯಗಳ ಬಗ್ಗೆ ನುರಿತ ತಜ್ಞರಿಂದ ವಿಷಯಗಳನ್ನು ತಿಳಿಸಲು ಪ್ರಯತ್ನಿಸುತ್ತೇವೆ. ಇನ್ನು ಹೆಚ್ಚಿನ ರೀತಿಯಲ್ಲಿ ತರಬೇತಿಗಳಲ್ಲಿ ಪಾಲ್ಗೊಂಡು ತರಬೇತಿಯ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.ಸಹಕಾರ ಸಂಘಗಳ ಉಪ ನಿಬಂಧಕರಾದ ಮಂಜುಳಾ ಎಸ್. ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳ ಲೆಕ್ಕಪತ್ರ ನಿರ್ವಹಣೆಯಲ್ಲಿ ತೊಂದರೆಗಳಿದ್ದರೆ ಕೇಳಿ ಪರಿಹಾರ ಪಡೆದುಕೊಳ್ಳಿ. ಯಾವುದೇ ವಿಷಯದ ಬಗ್ಗೆ ತರಬೇತಿ ಬೇಕಾದಲ್ಲಿ ತಿಳಿಸಿ ಜಿಲ್ಲಾ ಸಹಕಾರ ಯೂನಿಯನ್, ಬೀದರ್ ತರಬೇತಿ ನೀಡುತ್ತದೆ ಎಂದು ತಿಳಿಸಿದರು. ಯಶಸ್ವಿನಿ ಬಗ್ಗೆ ತಿಳಿಸಿ ಇನ್ನು ಹೆಚ್ಚಿನ ರೀತಿಯಲ್ಲಿ ಸದಸ್ಯರಿಗೆ ಇದರ ಬಗ್ಗೆ ಮಾಹಿತಿ ನೀಡಿ ಸದಸ್ಯರಾಗಲು ಹುರಿದುಂಬಿಸಿ ಎಂದು ಹೇಳಿದರು.
ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರಾದ ಶ್ರೀನಿವಾಸ ರೆಡ್ಡಿ ಪಾಟೀಲ, ಪವನ, ಕಿರಣಕುಮಾರ ಪಾಟೀಲ, ಕಲಬುರುಗಿ, ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಅಂಕಿತಾ, ಸುನಿಲ ಎಸ್. ಪತ್ತಾರ ಜಮಖಂಡಿ ಉಪಸ್ಥಿತರಿದ್ದರು.ಲೆಕ್ಕಪರಿಶೋಧನೆಗೆ ಆರ್ಥಿಕ ತಃಖ್ತೆಗಳನ್ನು ತಯಾರಿಸುವ ಕುರಿತು ಮತ್ತು ಸಹಕಾರ ಸಂಘಗಳ ಲೆಕ್ಕಪತ್ರ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.
ಸಹಕಾರ ಯುನಿಯನ್ ಸಿಇಓ ಹೆಚ್. ಆರ್. ಮಲ್ಲಮ್ಮ ನಿರೂಪಿಸಿದರು. ಮಾರುತಿ ವಂದಿಸಿದರು.