ಸಾರಾಂಶ
ಜಾತ್ರೆಯ ಪೂರ್ವ ಸಿದ್ದತಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆಕನ್ನಡಪ್ರಭವಾರ್ತೆ ಚಿತ್ರದುರ್ಗ
ಬೇಸಗೆಯ ಬಿರು ಬಿಸಿಲು ಆರಂರಭವಾಗಿದ್ದು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಶುದ್ದ ಕುಡಿವ ನೀರು ಪೂರೈಕೆ ಕಡೆಗೆ ಗಮನ ಹರಿಸಬೇಕೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಕೀತು ಮಾಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರ ಸ್ವಾಮಿ ಜಾತ್ರೆಯ ಪೂರ್ವಸಿದ್ದತಾ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾರ್ಚ್ 9 ರಿಂದ 24 ರವರೆಗೆ ಜಾತ್ರೆ ನಡೆಯಲಿದ್ದು, 16ರಂದು ದೊಡ್ಡ ರಥೋತ್ಸವ ನೆರವೇರಲಿದೆ. ರಾಜ್ಯದ ವಿವಿಧೆಡೆಗಳಿಂದ 3 ರಿಂದ 4 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ. ಬಿಸಿಲು ಹೆಚ್ಚಿರುವ ಕಾರಣ ಎಚ್ಚರಿಕೆ ವಹಿಸಿ ಭಕ್ತಾಧಿಕಾಗಳಿಗೆ ಸಮರ್ಪಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ವಿ.ವಿ ಸಾಗರದ ನೀರು ಹಾಗೂ ಹೆಚ್ಚುವರಿಯಾಗಿ ಟ್ಯಾಂಕರ್ ಗಳ ಮೂಲಕ ನೀರು ವಿತರಿಸುವ ಕಾರ್ಯ ಆಗಬೇಕು. ಇದಕ್ಕಾಗಿ ಅಗತ್ಯ ತಂಡ ರಚಿಸಿಕೊಳ್ಳಬೇಕು. ಸಹಾಯವಾಣಿ ಕೌಂಟರ್ ತೆರೆದು ಭಕ್ತರಿಗೆ ಸಮರ್ಪಕವಾಗಿ ನೀರಿನ ವ್ಯವಸ್ಥೆ ಮಾಡಲು ಚಳ್ಳಕೆರೆ ತಹಸೀಲ್ದಾರ್ ಹಾಗೂ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ನಾಯಕನಹಟ್ಟಿ ಪಟ್ಟಣಕ್ಕೆ ಕೇವಲ ಜಾತ್ರೆಯ ಸಮಯದಲ್ಲಿ ಮಾತ್ರವಲ್ಲದೇ ಪ್ರತಿನಿತ್ಯವೂ ಸಮರ್ಪಕವಾಗಿ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಬೇಕು. ಬೇಸಿಗೆ ಪ್ರಾರಂಭವಾಗುವ ಮೊದಲೇ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಅಗತ್ಯ ಕ್ರಿಯಾಯೋಜನೆ ತಯಾರಿಸಿಕೊಳ್ಳಬೇಕು. ನಾಯಕನಹಟ್ಟಿ ಪಟ್ಟಣಕ್ಕೆ ನಿತ್ಯವೂ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ಅವರಿಗೆ ಸೂಚಿಸಿದರು.ದೊಡ್ಡ ರಥೋತ್ಸವದ ಸಂದರ್ಭದಲ್ಲಿ ರಥ ಸಾಗಲು ಯಾವುದೇ ಅಡಚಣೆಯಾಗದಂತೆ ಕ್ರಮವಹಿಸಬೇಕು. ಈ ಹಿನ್ನಲೆಯಲ್ಲಿ ತೇರು ಬೀದಿಯಲ್ಲಿ ರಸ್ತೆಗೆ ಅಡ್ಡಿಯಾಗುವಂತೆ ಯಾವುದೇ ಅಂಗಡಿಗಳನ್ನು ಹಾಕಿಕೊಳ್ಳಲು ಅವಕಾಶ ನೀಡಬಾರದು. ರಥಬೀದಿಯ ಡಾಂಬರೀಕರಣ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ನಾಯಕನಹಟ್ಟಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ದುರಸ್ಥಿಗೊಳಿಸಿ, ರಸ್ತೆ ಬದಿಗಳ ಜಂಗಲ್ ಕಟಿಂಗ್ ಕಾರ್ಯ ನಿರ್ವಹಿಸಿ ವಾಹನ ಮತ್ತು ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು
ಈ ಬಾರಿ ಸಣ್ಣಕೆರೆ ಹಾಗೂ ದೊಡ್ಡ ಕೆರೆ ತುಂಬಿರುವುದರಿಂದ ಯಾವುದೇ ಕಾರಣಕ್ಕೂ ಭಕ್ತಾಧಿಗಳು ಕೆರೆ ಒಳಗೆ ಇಳಿಯದಂತೆ ಸೂಕ್ತ ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು. ಸಣ್ಣಕೆರೆ ಮತ್ತು ದೊಡ್ಡಕೆರೆಯಲ್ಲಿ ಭಕ್ತರು ಈಜಾಡುವ ಸಂಭವವಿರುವುದರಿಂದ ಅವಘಡ ತಡೆಯಲು ಮುಂಜಾಗ್ರತಾ ಕ್ರಮವಾಗಿ ಎಸ್‍ಡಿಆರ್‍ಎಫ್ ತಂಡ ನಿಯೋಜನೆಗೆ ಪತ್ರ ಬರೆದು, ಕೆರೆ ರೆಸ್ಕ್ಯೂ ಬೋಟ್, ಲೈಫ್ ಜಾಕೆಟ್ ವ್ಯವಸ್ಥೆ ಮಾಡಿಕೊಳ್ಳಬೇಕು ಹಾಗೂ ಅಗ್ನಿಶಾಮಕ ವಾಹನಗಳ ಸೌಲಭ್ಯ ಒದಗಿಸಬೇಕು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿಗೆ ತಾಕೀತು ಮಾಡಿದರು.ಜಾತ್ರೆಯಲ್ಲಿ ಸರಗಳ್ಳತನ ಸಾಮಾನ್ಯವಾಗಿದ್ದು, ಈ ನಿಟ್ಟಿನಲ್ಲಿ ಶಾಶ್ವತವಾಗಿ ಸಿ.ಸಿ.ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂದು ದೇವಸ್ಥಾನ ಸಮಿತಿ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ನೀರಿನ ಮೂಲಗಳ ಸ್ಯಾಂಪಲ್‍ಗಳನ್ನು ಪರೀಕ್ಷೆಗೊಳಪಡಿಸಿ, ವರದಿ ಪಡೆದುಕೊಳ್ಳಬೇಕು. ಸಮರ್ಪಕವಾಗಿ ಅಗತ್ಯವಿರುವ ಔಷಧಿಗಳನ್ನು ಪೂರೈಕೆ ಮಾಡಬೇಕು. ಬೇಸಿಗೆ ಇರುವುದರಿಂದ ಹೆಚ್ಚು ಒಆರ್‍ಎಸ್ ಪೂರೈಕೆ ಮಾಡಬೇಕು. ಜಾತ್ರೆಯಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಕೆಎಸ್‍ಆರ್‍ಟಿಸಿ ವಿಭಾಗೀಯ ಅಧಿಕಾರಿ ಶ್ರೀನಿವಾಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಗಂಗಾಧರಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.