ಸಾರಾಂಶ
ಕನ್ನಡ ಪ್ರಭವಾರ್ತೆ ಮಾಲೂರು
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಮ್ಮ ಸಹವರ್ತಿಗಳಿಂದಲೇ ಕೊಲೆಯಾದ ಆನಂದಮಾರ್ಗದ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ ಮೇಲೆ ಹದಿನೈದು ವರ್ಷಗಳ ಹಿಂದೆಯೇ ಆರೋಪಿಗಳಾಗಿರುವ ಧರ್ಮಪ್ರಾಣಾನಂದ.ಪ್ರಾಣೇಶ್ವರ ಅವಧೂತ ರು ಕೊಲೆ ಪ್ರಯತ್ನ ನಡೆಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಕಳೆದ 10 ವರ್ಷಗಳ ಹಿಂದೆ ಸಂತೇಹಳ್ಳಿ ಗೇಟ್ ಬಳಿಯ ಆನಂದ್ ಮಾರ್ಗ ಪಾಲಿಟೆಟ್ನಿಕ್‌ನಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಅಂದಿನ ಪಿಎಸೈ ಸಲೀಂ ನದಾಫ್(ಇಂದು ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಿಪಿಐ)ಡಿ.ಅರ್ ಸಿಬ್ಬಂದಿಗಳೊಂದಿಗೆ ಹೋಗಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು.ಈ ಮಾರಾಮಾರಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆಚಾರ್ಯ ಚಿನ್ಮಯಾನಂದ ಅವಧೂತರನ್ನು ಆಸ್ಪಗೆ ಸೇರಿಸಲಾಗಿತ್ತು. ಹೊಡೆದಾಟಕ್ಕೆ ಮುಖ್ಯ ಕಾರಣವಾಗಿದ್ದ ಇಂದಿನ ಕೊಲೆ ಆರೋಪಿಗಳಾದ ಆಚಾರ್ಯ ಧರ್ಮಪ್ರಾಣಾನಂದ, ಆಚಾರ್ಯ ಪ್ರಾಣೇಶ್ವರ ಅವಧೂತ ಹಾಗೂ ಅರುಣ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿ ಈ ಮೂವರನ್ನೂ ಜೈಲಿಗೆ ಅಟ್ಟಲಾಗಿತ್ತು.
ಎಂಜಿನಿಯನರ್ ಆಗಿದ್ದ ಚಿನ್ಮಯಾನಂದ ಅವಧೂತ ದಾದಾ ಎಂದು ಪ್ರಖ್ಯಾತರಾಗಿದ್ದರು. ಕೋಲಾರದ ಶಾರದಾ ಟಾಕೀಸ್ ಹಿಂಭಾಗದಲ್ಲಿ ೧೯೮೬ ರಲ್ಲಿ ಪ್ರಾರಂಭವಾಗಿದ್ದ ಆನಂದ್ ಮಾರ್ಗ ಸಂಸ್ಥೆಯನ್ನು ಜಿಲ್ಲೆಯ ಇತರಡೆ ಬೆಳಸಲು ಇದೇ ಚಿನ್ಮಯಾನಂದ ಅತ್ಯಂತ ಕ್ರಿಯಾಶೀಲರಾಗಿ ಯಶಸ್ವಿಯಾಗಿದ್ದರು. ಕೇಂದ್ರ ಸರ್ಕಾರ ಆನಂದ ಮಾರ್ಗ ಸಂಸ್ಥೆ ಮೇಲೆ ನಿರ್ಬಂಧ ಹೇರಿದ್ದ ಸಮಯದಲ್ಲೂ ಸ್ಥಳೀಯರ ಸಹಕಾರದಿಂದ ಸಂಸ್ಥೆಯನ್ನು ಬೆಳೆಸಿದ್ದರು.ಮಾಲೂರಿನಲ್ಲಿ ಪಾಲಿಟೇಕ್ನಿಕ್ ಪ್ರಾರಂಭಿಸಲು ಮುಖ್ಯ ಕಾರಣರಾದ ಚಿನ್ಮಯಾನಂದರು ಅದನ್ನು ಯಶಸ್ವಿಯಾಗಿ ೯೦ ರ ದಶಕದ ವರೆಗೂ ಬೆಳೆಸಿದ್ದರು. ಸಂಸ್ಥೆಯ ಮುಖ್ಯ ಕೇಂದ್ರ ಇರುವ ಕಲ್ಕತ್ತಾ ದಲ್ಲಿ ಆನಂದ ಮಾರ್ಗ ಇಬ್ಬಾಗವಾದಾಗ ಇಲ್ಲೂ ಸಹ ಆಸ್ತಿ ಹಾಗೂ ಅಧಿಕಾರಕ್ಕಾಗಿ ಹೊಡೆದಾಟ ಪ್ರಾರಂಭವಾಗಿತ್ತು. ಇದೇ ಸಂದರ್ಭದಲ್ಲಿ ವಿರೋಧಿಗಳನ್ನು ಎದುರಿಸಿ ಸಂಸ್ಥೆಯನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರಲ್ಲದೇ ಕೋಲಾರ ತಾಲೂಕಿನ ಕಿತ್ತಂಡೂರಿನಲ್ಲಿ ಆನಂದ ಮಾರ್ಗ ಶಾಖೆ ಆರಂಭಿಸಿ ಶಾಲೆ ಪ್ರಾರಂಭಿಸಿದ್ದರು. ವರ್ಷಕ್ಕೊಮ್ಮೆ ಮಾರ್ಗಶಿರ ಋತುವಿನ ಹುಣ್ಣೆಮೆ ದಿನ ಆಸ್ತಮಾ ಪೀಡಿತರಿಗೆ ಉಚಿತ ಔಷಧಿ ವಿತರಿಸುತ್ತಿದ್ದ ಚಿನ್ಮಯಾನಂದರನ್ನು ಅಲ್ಲಿನ ಜನ ದಾದಾ ಎಂದು ಸಂಬೋದಿಸುತ್ತಿದ್ದರು.